ಸರ್ವಾಧ್ಯಕ್ಷ ಸ್ಥಾನಕ್ಕೆ ಸಂಶೋಧಕ-ಸಾಹಿತಿ ಡಿ.ಎನ್. ಅಕ್ಕಿ ಆಯ್ಕೆ.
– ಡಾ.ಸಂತೋಷ ನವಲಗುಂದ
ಪತ್ರಕರ್ತ-ಲೇಖಕ
ನಾಡಿನ ಸಂಶೋಧಕ-ಸಾಹಿತಿಗಳಲ್ಲಿ ಡಿ.ಎನ್.ಅಕ್ಕಿಯವರು ಮಹತ್ವದ ಸಂಶೋಧಕರಲ್ಲೊಬ್ಬರು. ಕಲ್ಯಾಣ ಕರ್ನಾಟಕದ ಈಗಿನ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಇವರ ಹುಟ್ಟೂರು. ಗ್ರಾಮದ ಪ್ರತಿಷ್ಠಿತ ವ್ಯಾಪಾರಸ್ಥ ಅಕ್ಕಿ ಮನೆತನದ ನಾಭಿರಾಜ ಮತ್ತು ಶ್ರೀಕಾಂತಮ್ಮ ದಂಪತಿಗಳ ಮಗನಾಗಿ ೩ನೇ ಅಕ್ಟೋಬರ್ ೧೯೪೮ರಲ್ಲಿ ಜನಿಸಿದರು. ಬಾಲ್ಯ ಕಳೆದು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಅನೇಕ ತೆರನಾದ ಕಷ್ಟಗಳನ್ನು ಎದುರಿಸುತ್ತಲೇ ಪ್ರೌಢ ಶಿಕ್ಷಣ ಮುಗಿಸಿಕೊಂಡರು. ನಂತರ ಗದಗದಲ್ಲಿ ಚಿತ್ರಕಲಾ ತರಬೇತಿಗೆಂದು ಹೋಗಿ ಅವರು ಅಲ್ಲಿ ಅನುಭವಿಸಿದ ಸಂಕಷ್ಟಗಳು ಅನೇಕ. ಆದರೆ ಗದಗದಲ್ಲಿ ಗೆಳಯರಾದ ಕಂಬಳಿಮಠ, ಗಾಣಿಗೇರ ಇನ್ನೂ ಅನೇಕ ಗೆಳೆಯರ ಸಹಾಯ-ಸಹಕಾರದಿಂದ ಯಶಸ್ವಿ ಚಿತ್ರಕಲಾ ತರಬೇತಿ ಶಿಕ್ಷಣ ಪಡೆದು, ಚಿತ್ರಕಲಾ ಶಿಕ್ಷಕರಾಗಿ ಸೇವೆ ಪ್ರಾರಂಭಿಸುತ್ತಾರೆ. ಅಷ್ಟೊತ್ತಿಗಾಗಲೇ ಮನೆಯಲ್ಲಿ ಸಾಲು ಸವಾಲುಗಳು ಅಕ್ಕಿಯವರ ಮುಂದೆ ನಿಂತಿದ್ದವು. ಅವೆಲ್ಲದಕ್ಕೂ ಸಮಾಧಾನಚಿತ್ತದಿಂದ ಪರಿಹಾರ ಕಂಡುಕೊಂಡು ಸಂಸಾರದ ನೊಗವ ಹೊತ್ತು, ಮನೆತನ ಮಾದರಿಯಾಗಿ ಮುನ್ನಡೆಸಿದರು. ಇಷ್ಟೆಲ್ಲಾ ತೊಂದರೆಗಳನ್ನು ಸಮರ್ಥವಾಗಿ ಎದುರಿಸಿ ವಿದ್ಯಾರ್ಥಿಗಳ ಪಾಲಿಗೆ ಆದರ್ಶ ಶಿಕ್ಷಕರು. ಅಷ್ಟೇ ಅಲ್ಲದೇ, ಕಟ್ಟುನಿಟ್ಟಿನ ಶಿಸ್ತಿನ ಶಿಪಾಯಿಯಾಗಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ತೋರಿದರು.
ಶಿಕ್ಷಕ ವೃತ್ತಿಯಿಂದ ಸಾಹಿತ್ಯ ಮತ್ತು ಸಂಶೋಧನಾ ಕೃಷಿ:
ಸರ್ಕಾರಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಮಕ್ಕಳಿಗೆ ಒಂದೆರೆಡು ಚಿತ್ರಗಳನ್ನು ಕಲಿಸಿ ಸುಮ್ಮನೆ ಕುಳಿತಿರಬೇಕಾಗಿತ್ತು. ಆದರೆ, ಡಿ.ಎನ್.ಅಕ್ಕಿ ಅವರು ಹಾಗೆ ಮಾಡಲಿಲ್ಲ. ಚಿತ್ರಕಲೆಯ ಜತೆಗೆ ಹಿಂದಿ, ನೈತಿಕ ಶಿಕ್ಷಣ ವಿಷಯಗಳ ಬೋಧನೆಯಲ್ಲಿ ತೊಡಗುವುದರ ಮೂಲಕ ವಿದ್ಯಾರ್ಥಿಗಳಲ್ಲಿ ವಿನಯ-ವಿಧೇಯತೆ, ಉದಾತ್ತ ಮೌಲ್ಯಗಳನ್ನು ಬಿತ್ತಿ ಸುಸಂಸಕೃತರನ್ನಾಗಿಸುವಲ್ಲಿ ಅಕ್ಕಿ ಅವರು ಗೈದ ಸೇವೆ ಅನುಪಮವಾದದ್ದು. ಶಿಕ್ಷಕ ವೃತ್ತಿಯ ಜತೆಗೆ ಇತಿಹಾಸ ಅಧ್ಯಯನದ ವಿದ್ಯಾರ್ಥಿಯಾಗಿ ಮುಂದೊಂದು ದಿನ ತಮ್ಮ ಸತತ ಅಧ್ಯಯನ, ಪರಿಶ್ರಮ, ಕ್ಷೇತ್ರಕಾರ‍್ಯಗಳ ಮೂಲಕ ಇತಿಹಾಸ ಸಂಶೋಧಕರಾಗಿ ನಾಡಿನ ಸಹೃದಯರ ನೆಚ್ಚಿನ ವಿದ್ವಾಂಸರೆನಿಸಿಕೊಂಡರು. ಚದುರಿ ಹೋದ, ವಿನಾಶದ ಅಂಚಿನಲ್ಲಿರುವ ಇತಿಹಾಸದ ಕುರುಹುಗಳನ್ನು ಹೆಕ್ಕಿ ತೆಗೆದು ಅವುಗಳನ್ನು ನಾಡಿಗೆ ಪರಿಚಯಿಸಿದರು. ಆ ಮೂಲಕ ರಾಷ್ಟ್ರೀಯ ಸಂಪತ್ತಿನ ರಕ್ಷಣೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಇವತ್ತು ಯುವ ಸಂಶೋಧಕರಿಗೆ ಮಾದರಿಯಾಗಿ ಮಾರ್ಗದರ್ಶನ ಗೈಯುತ್ತಿರುವುದು ನಮ್ಮ ಭಾಗ್ಯವೇ ಸರಿ.
ಹಡದವ್ವಳ ತವರು ಮಳ್ಳಿ ಪರಿಸರ ಪ್ರೇರಣೆ:
ಡಿ.ಎನ್.ಅಕ್ಕಿಯವರ ಪ್ರಾಥಮಿಕ ಶಿಕ್ಷಣ ಕೆಲ ವರ್ಷ ತಾಯಿ ತವರುಮನೆ ಮಳ್ಳಿ ಗ್ರಾಮದಲ್ಲಿ ನಡೆಯುತ್ತದೆ. ಮಳ್ಳಿ ಈ ಮೊದಲಿನಿಂದಲೂ ಐತಿಹಾಸಿಕ, ಸಾಂಸ್ಕೃತಿಕ ಹಿರಿಮೆ ಗರಿಮೆ ಹೊಂದಿದ ಊರು. ಹೊಂಬಣ್ಣ ಕಿರಣಗಿ ಅಕ್ಕಿಯವರ ತಾತ. ತಾತ (ಅಜ್ಜ) ಗ್ರಾಮದ ಗಣ್ಯ ವ್ಯಾಪಾರಸ್ಥ. ಅಕ್ಕಿಯವರ ಸೋದರಮಾವ ಮೋಹನಚಂದ ಕಿರಣಗಿ ನಾಡಿನ ಖ್ಯಾತ ನಾಟಕಕಾರರು. ಕಿರಣಗಿ ಅವರ ಬರಹವೂ ಅಕ್ಕಿಯವರ ಮೇಲೆ ದಟ್ಟ ಪ್ರಭಾವ ಬೀರಿತು. ಹೆಚ್ಚಾಗಿ ಮಳ್ಳಿ ಕಲಾವಂತಿಕೆಗೆ ಹೆಸರು ಪಡೆದ ಗ್ರಾಮ. ಇಂತಹ ಪರಿಸರವೂ ಅಕ್ಕಿಯವರ ಕವಿ ಹೃದಯ ಮೊಗ್ಗಾಗಿ ಅರಳಿ ಸಾಹಿತ್ಯ ಸುಗಂಧ ಬೀರಲು ಹೆಚ್ಚು ಪ್ರೇರಣೆ ನೀಡಿತೆನ್ನಬಹುದು. ಗ್ರಾಮದಲ್ಲಿನ ಸಹಪಾಠಿಗಳಾದ ಶರಣಗೌಡ ಪೊಲೀಸ್ ಪಾಟೀಲ, ಶರಣ ನವಲಗುಂದ, ಗೊಲ್ಲಾಳಪ್ಪಗೌಡ ಪೊಲೀಸ್‌ಪಾಟೀಲ, ನಾಗವ್ವಗೌಡತಿ ನವಲಗುಂದ, ಕಾಂತಮ್ಮ ಚಿನ್ನದಕಂತಿಮಠ, ಅನೇಕ ಗೆಳೆಯರ ಬಳಗ ಇವತ್ತಿಗೂ ಅಕ್ಕಿಯವರನ್ನು ಸ್ಮರಿಸುತ್ತಾರೆ. ಊರಿನ ಹಳ್ಳದ ದಂಡೆಯಲ್ಲಿ ಯಾವ ಜಾತಿ, ಧರ್ಮಗಳ ಭೇದವೆನ್ನದೇ ಎಲ್ಲರೂ ಸೇರಿ ಸಸಿ ಹಾಕಿ ಆಡಿದ ಆಟ, ಕೂಡಿ ಉಂಡ ಊಟ ಅಕ್ಕಿಯವರು ಇವತ್ತಿಗೂ ನೆನೆದು ಸಂತಸದ ಮಾತುಗಳನ್ನಾಡುತ್ತಾರೆ. ಇಂತದ್ದೊಂದು ಸಾಂಸ್ಕೃತಿಕ ಪರಿಸರ ಅಕ್ಕಿಯವರ ಮೊದಲ ಬರವಣಿಗೆಗೆ ಪೇರಣಾದಾಯಕವಾಗಿದೆ ಎಂದರೆ ಅಚ್ಚರಿಯೇನಲ್ಲ.
ಅಕ್ಕಿಯವರ ಕೃತಿಗಳು: ಡಿ.ಎನ್.ಅಕ್ಕಿಯವರ ಕೃತಿಗಳು ಮುಂಬೆಳಗು, ಚಿಗುರು ಚಿಂತನ, ಸಗರನಾಡ ಸಿರಿ, ಶಹಾಪುರ ತಾಲೂಕು ದರ್ಶನ, ಹಡೆದವ್ವ ಹಾಡ್ಯಾಳ, ಸನ್ನತಿ ಚಂದ್ರಲಾಂಬಾ, ಮಾಯೆ ಮದ್ದಲೆ, ಜಿನದನಿ, ಹಕ್ಕಲುತೆನೆ, ಯಕ್ಷಪ್ರಶ್ನೆ, ಬಾನರಂಗ, ಜೈನ ವಿಗ್ರಹಗಳು, ವರ್ಧಮಾನ ಮಹಾವೀರ ಹಾಗೂ ಶಿಕ್ಷಕನ ಮನದಾಳದಿಂದ ಸೇರಿದಂತೆ ೨೮ಕ್ಕೂ ಹೆಚ್ಚು ಕೃತಿಗಳು, ಸಂಶೋಧನಾ ಲೇಖನಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪ್ರಶಸ್ತಿಗಳು
ಐದು ದಶಕಗಳ ಕಾಲ ಡಿ.ಎನ್.ಅಕ್ಕಿಯವರು ನಿಸ್ಪೃಹವಾಗಿ, ನಿರ್ಮಲ ಹಾಗೂ ನಿಷ್ಪಕ್ಷ ಮನಸ್ಸಿನಿಂದ ಗೈದ ಸಾಹಿತ್ಯಿಕ ಮತ್ತು ಸಂಶೋಧನೆ ಕರ‍್ಯವನ್ನು ಗುರುತಿಸಿ ನಾಡಿನ ಅನೇಕ ಮಠ-ಮಾನ್ಯಗಳು ರಾಜ್ಯ ಮತ್ತು ರಾಷ್ಟç ಮಟ್ಟದ ಗೌರವಾದರಗಳು ಮುಡಿಗೇರಿವೆ. ೧೯೯೬ರಲ್ಲಿ ರಾಜ್ಯ ಸರ್ಕಾರದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ೧೯೯೭-೯೮ರಲ್ಲಿ ಆದರ್ಶ ರಾಷ್ಟ್ರ ಶಿಕ್ಷಕ ಪ್ರಶಸ್ತಿ, ಡಿ.ಎಸ್.ಮ್ಯಾಕ್ಷ್, ಕಾಯಕ ಸಮ್ಮಾನ್ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ, ಮಾನ ಸಮ್ಮಾನಗಳು ಅವರ ಪಾಲಿಗೆ ದಕ್ಕಿವೆ.
ಅಭಿಮಾನಿಗಳ ಅಭಿಮಾನದ ಅಭಿನಂದನೆ:
ಯಡ್ರಾಮಿ ವಿರಕ್ತಮಠದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಭಿನಂದನೆ ತಿಳಿಸಿ ಆಶೀರ್ವದಿಸಿದ್ದಾರೆ. ಸಗರಾದ್ರಿ ಸಾಂಸ್ಕೃತಿಕ ಸಂಗಮ ವೇದಿಕೆ, ಸಾಹಿತಿ ವೀರಣ್ಣ ಕಲಕೇರಿ, ಪ್ರಶಾಂತ ಕುನ್ನೂರ, ನಿಂಗನಗೌಡ ದೇಸಾಯಿ, ಡಾ.ವೆಂಕನಗೌಡ ಪಾಟೀಲ, ವೀರಭದ್ರಪ್ಪ ಪತ್ತಾರ, ಸಿದ್ರಾಮಪ್ಪ ನವಲಗುಂದ, ದೇವು ಮಡಿವಾಳರ, ಮಲ್ಲಿಕಾರ್ಜುನ ಯಾದಗಿರಿ, ಕಿಶೋರಕುಮಾರ ಕಾಸರ, ಪ್ರಕಾಶ ಸಾಹು ಬೆಲ್ಲದ ಸೇರಿದಂತೆ ಇತರರು ಅಭಿನಂದನೆ ತಿಳಿಸಿದ್ದಾರೆ.
ಡಿ.ಎನ್.ಅಕ್ಕಿಯವರ ಸಮಗ್ರ ಜೀವನ ಸಾಧನೆ ಕುರಿತಾಗಿ ಪಿಎಚ್.ಡಿ, ಎಂ.ಫಿಲ್ ಪ್ರಬಂಧಗಳು ಮಂಡನೆಯಾಗಿದ್ದು ಈ ಮುಖೇನ ಅವರ ಜೀವನಾದರ್ಶ ತೆರೆದ ಕನ್ನಡಿಯಂತೆ ಕಾಣಬಹುದಾಗಿದೆ. ೭೬ರ ಇಳಿ ವಯಸ್ಸಿನಲ್ಲಿಯೂ ಅಕ್ಕಿಯವರ ಸಾಹಿತ್ಯಿಕ ಬರವಣಿಗೆ, ಸಂಶೋಧನಾತ್ಮಕ ಕುತೂಹಲ ಎಂಥವರನ್ನು ಬೆರಗುಗೊಳಿಸುವಂತದ್ದು. ಇದೇ ಫೆಬ್ರುವರಿ ೨೬ಕ್ಕೆ ಶಹಾಪೂರದ ಭೀಮರಾಯನಗುಡಿಯಲ್ಲಿ ನಡೆವ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದು ಅಕ್ಕಿಯವರ ಅಭಿಮಾನಿ ಬಳಗಕ್ಕೂ, ಸಾಹಿತ್ಯಾಸಕ್ತರಿಗೂ ಸಂತಸ ತಂದಿದೆ ಎನ್ನುವುದು ನಿರ್ವಿವಾದದ ಸಂಗತಿ. ಅಕ್ಕಿಯವರ ದುಡಿಮೆಗೆ ದಕ್ಕಿದ ಗೌರವವಿದು. ಸಮ್ಮೇಳನದ ಸರ್ವಾಧ್ಯಕ್ಷ ಗೌರವ ನೀಡುವುದರಿಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಘನತೆಯನ್ನು ಇಮ್ಮಡಿಗೊಳಿಸಿಕೊಂಡಿದೆ ಎನ್ನುವುದರಲ್ಲಿ ಯಾವ ಅನುಮಾನಗಳಿಲ್ಲ. ಸಗರನಾಡಿನ ಕೇಂದ್ರಸ್ಥಾನ ಶಹಾಪುರದಲ್ಲಿ ಕನ್ನಡ ನುಡಿ ಜಾತ್ರೆಯ ಸಂಭ್ರಮವನ್ನು ನಾವೆಲ್ಲರೂ ಸೇರಿ ಅನುಭವಿಸಿ, ನುಡಿದೇವಿಯ ಕೃಪೆಗೆ ಪಾತ್ರರಾಗೋಣವೇ!
ಡಾ.ಸಂತೋಷ ನವಲಗುಂದ
ಪತ್ರಕರ್ತ-ಲೇಖಕ


