ದೈಹಿಕ ಶಿಕ್ಷಣ ಹಾಗೂ ಚಿತ್ರಕಲಾ ಶಿಕ್ಷಣ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ
ಕೊಲ್ಹಾರ: ಚಿತ್ರಕಲೆ ಹಾಗೂ ದೈಹಿಕ ಶಿಕ್ಷಣ ಶೈಕ್ಷಣಿಕ ರಂಗದ ಆಧಾರಸ್ತಂಭವಾಗಿದ್ದು ಇವೆರಡು ವಿಷಯಗಳು ಮಕ್ಕಳು ಜ್ಞಾನಾರ್ಜನೆ ಪಡೆಯುವ ಸಮಯದಲ್ಲಿ ಮಹತ್ವದ ಸ್ಥಾನ ಹೊಂದಿವೆ ಎಂದು ಬಸವನ ಬಾಗೇವಾಡಿ ಕ್ಷೇತಶಿಕ್ಷಣಾಧಿಕಾರಿ ವಸಂತ ರಾಠೋಡ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸಿಕ್ಯಾಬ್ ಸಂಯುಕ್ತ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬ.ಬಾಗೇವಾಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬ.ಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಹಾಗೂ ಚಿತ್ರಕಲಾ ಶಿಕ್ಷಣ ಶಿಕ್ಷಕರ ಪುನಶ್ಚೇತನದ ಒಂದು ದಿನದ ತಾಲೂಕು ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಆಟೋಟಗಳ ಜೊತೆ ಶಿಸ್ತು ಬದ್ಧ ನಿಯಮಗಳ ಜ್ಞಾನದೊಂದಿಗೆ ಸದೃಢ ಆರೋಗ್ಯ ಭಾಗ್ಯ ಕಲ್ಪಿಸುವ ದಿವ್ಯ ಶಕ್ತಿ ದೈಹಿಕ ಶಿಕ್ಷಣ ಹೊಂದಿದ್ದರೆ, ಚಿತ್ರಕಲೆ ಕಲಿಕಾ ಹಿತಭಾವವನ್ನು ಉತ್ಸಾಹದ ಚಿಲುಮೆಯೊಂದಿಗೆ ಅದಮ್ಯಗೊಳಿಸುತ್ತದೆ. ಪಠ್ಯಾಧಾರಿತ ವಿಷಯಗಳೊಂದಿಗೆ ಇವೆರಡು ವಿಷಯಗಳು ಅನನ್ಯ ನಂಟು ಇರಿಸಿಕೊಂಡಿದ್ದು ಶಿಕ್ಷಕರು ಮಕ್ಕಳಿಗೆ ಈ ವಿಶೇಷ ವಿಷಯಗಳ ಜ್ಞಾನಾಮೃತ ನೀಡಿ ಪ್ರೋತ್ಸಾಹಿಸಬೇಕೆಂದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಪಠ್ಯವಸ್ತುಗಳ ಸರಳೀಕೃತ ರೂಪದಲ್ಲಿ ಚಿತ್ರ ರಚನಾ ಕೌಶಲ್ಯ ಮೂಡಿಸಿ, ಪರೀಕ್ಷಾ ದೃಷ್ಟಿಯಿಂದ ಆದ್ಯತೆ ನೀಡಿ ಮಕ್ಕಳಿಗೆ ಚಿತ್ರ ರಚನೆಯಲ್ಲಿ ತೋಡಗಿಸಿಕೊಳ್ಳಲು ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಬದಲಾವಣೆಗೆ ಸಂಕಲ್ಪ ಮಾಡಿ ಪಠ್ಯಾಧಾರಿತ ವಿಷಯದಡೆಗೆ ದೃಷ್ಟಿಕೋನ ಬೀರಿ ಸಹಕಾರ ನೀಡಿ ಆ ದಿಸೆಯಲ್ಲಿ ಕಾರ್ಯಾಗಾರದ ಸದ್ವಿನಿಯೋಗವಾಗಲಿ ಎಂದು ಆಶಿಸಿದರು.
ರಾಜ್ಯ ಚಿತ್ರಕಲಾ ಶಿಕ್ಷಕರ ಒಕ್ಕೂಟ ಸಂಘದ ರಾಜ್ಯಾಧ್ಯಕ್ಷ ಗಂಗಾಧರ ಪಾಟೀಲ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸಿ.ಎಸ್.ಹಿರೇಮಠ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎಂ.ಮಣೂರ ವಹಿಸಿದ್ದರು.
ಚಿತ್ರಕಲೆ ಸಂಪನ್ಮೂಲ ವ್ಯಕ್ತಿ ಎಚ್.ಸಿ.ಹೂಗಾರ ಹಾಗೂ ಮೂರು ತಾಲೂಕಿನ ಶಿಕ್ಷಕ ಬಳಗದವರು ಪಾಲ್ಗೊಂಡಿದ್ದರು. ಸಾಕ್ಷಿಯಾ ತಾಂಬೋಳಿ ಕುರಾನ್ ಪಠಣ, ಆಸ್ಮಾ ಲಾಹೋರಿ ನಾಥ್ ,ಮರಿಯಲ ಸಂಗಡಿಗರು ಸ್ವಾಗತ ಗೀತೆ, ಹಮ್ದ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಬಿ.ಆಯ್.ಮುದ್ದೇಬಿಹಾಳ ಸ್ವಾಗತಿಸಿದರು. ಶಿಕ್ಷಕ ಸದ್ದಾಂ ಹುಸೇನ್ ಹೊನ್ನಾಳ ನಿರೂಪಿಸಿ ವಂದಿಸಿದರು.

