ವಿಜಯಪುರ: ಬೆಂದರೆ ಮಾತ್ರ ಬೇಂದ್ರೆ ಎಂದು ಹೇಳಿದ ಮಾತು ನೂರಕ್ಕೆ ನೂರು ಸತ್ಯವಾಗಿದ್ದು, ಕವಿಯಾಗುವ ಮುನ್ನ ಕೇಳುವ ಕಿವಿಯಾಗಬೇಕು. ಇನ್ನೊಬ್ಬರ ನೋವಿಗೆ ಧ್ವನಿಯಾಗಬೇಕು. ಬೇರೊಬ್ಬರ ಭಾವನೆಗಳನ್ನು ನಾವು ಅರಿತುಕೊಂಡಾಗ ಮಾತ್ರ ಸುಂದರವಾದ ಕವಿತೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಪ.ಗು.ಸಿದ್ಧಾಪುರ ಹೇಳಿದರು.
ನಗರದ ಬೆಂಗಳೂರು ಹೋಟೆಲ್ ಸಭಾಂಗಣದಲ್ಲಿ ಬೇಂದ್ರೆಯವರ ಜನ್ಮ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಪಿಡಿಜೆ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ ವಿ.ಕುಲಕರ್ಣಿ ವಿರಚಿತ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕನ್ನಡ ಭಾಷಾ ಶ್ರೀಮಂತಿಕೆಯನ್ನು ಹೆಚ್ಚು ಮಾಡಿದ ಸಾಹಿತ್ಯ ಇಂದು ಸೊರಗುತ್ತಿರುವುದು ಕಂಡು ಬರುತ್ತಿದೆ. ಆದರೂ ಅದರ ಮಧ್ಯದಲ್ಲಿ ಸಂತೋಷ ಕುಲಕರ್ಣಿಯಂತಹ ಕವಿಗಳು ಬರೆಯುವವರು ಇರುವ ವರೆಗೂ ಕೆಲವು ಜನವಾದರೂ ಆಸಕ್ತ ಓದುಗರು ಇದ್ದೇ ಇರುತ್ತಾರೆ. ಅವರ ಮನವನ್ನು ಮುಟ್ಟುವುದಕ್ಕಾಗಿಯಾದರೂ ನಾನು ಬರೆಯಬೇಕು ಎಂದು ಗಟ್ಟಿ ಧೈರ್ಯ ಮಾಡಿ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದು ಸಾಹಿತ್ಯ ಉಪಾಸಕರ ಮನವನ್ನು ಗೆಲ್ಲುತ್ತವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾನಗರ ಪಾಲಿಕೆಯ ಸದಸ್ಯ ರಾಜಶೇಖರ ಕುರಿಯವರು, ನಾನು ಕಲಿತಿದ್ದು ಕಡಿಮೆಯಾದರೂ ನನ್ನಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವುದಕ್ಕೆ ಕಾರಣವಾಗಿದ್ದು ಕನ್ನಡದ ಪುಸ್ತಕಗಳು ಎಂದು ಹೇಳಿದರು.
ದರಬಾರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಗಿರೀಶ ಮಣ್ಣೂರ, ಪಿಡಿಜೆ ಕಾಲೇಜಿನ ಪ್ರಾಚಾರ್ಯೆ ಡಿ.ಕೆ.ಕುಲಕರ್ಣಿ ಹಾಗೂ ತಳೆವಾಡ ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದು ದೇಸಾಯಿ ಬಮರಡ್ಡಿ, ಸಂತೋಷ ವಿ ಕುಲಕರ್ಣಿ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು.
ಸಾಹಿತಿ ಹಾಗೂ ಉಪನ್ಯಾಸಕ ಆರ್.ಎಸ್.ಪಟ್ಟಣಶೆಟ್ಟಿ, ಮುಸ್ತಾಕ ಮಲಘಾಣ, ಮಂಜುನಾಥ ಮ. ಜುನಗೊಂಡ, ಕ್ರಮವಾಗಿ ಸಂಸಾರ ಬಂಡಿ, ಜುಗಲ್‌ಬಂದಿ ಹಾಗೂ ಮಾತುಮತಿಸಿದ ಮಹಾಕವಿ ಕೃತಿಗಳನ್ನು ಪರಿಚಯಿಸಿದರು.
ತನು ಪೌಂಡೇಷನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ, ಮನು ಪತ್ತಾರ, ಭಾಗೇಶ ಮುರಡಿ, ಅವಿನಾಶ ಅಥರ್ಗಾ, ವಿಷ್ಣು, ಶೇಖರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗಾಯಕ ಪಾಂಡುರಂಗ ಕುಲಕರ್ಣಿ ಪ್ರಾರ್ಥಿಸಿದರು. ಹೆಚ್.ಜೆ.ದೇಸಾಯಿ ಸ್ವಾಗತಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

