ಆಲಮಟ್ಟಿ: ಮಾನವ ಜೀವನ ಅತ್ಯಮೂಲ್ಯ. ಬಹು ಜನ್ಮಗಳ ಪುಣ್ಯದ ಫಲವಾಗಿ ಮಾನವ ಜೀವನ ಪ್ರಾಪ್ತವಾಗಿದೆ, ಕಾಯ ಕಣ್ಮರೆಯಾದರೂ ನೆನಹು ಶಾಶ್ವತವಾಗಿ ಉಳಿಯುವ ಹಾಗೆ ಬದುಕುವುದೇ ನಿಜವಾದ ಬದುಕು ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚಿಮ್ಮಲಗಿ ಭಾಗ-2 ಗ್ರಾಮದಲ್ಲಿ ಶುಕ್ರವಾರ ಸಂಜೆ ಜರುಗಿದ ಅರಳೆಲೆ ಕಟ್ಟಿಮನಿ ಹಿರೇಮಠದ ಲಿಂ.ಶ್ರೀ ನೀಲಕಂಠ ಸ್ವಾಮೀಜಿಗಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾನವ ಜೀವನ ಶಾಶ್ವತವಲ್ಲ, ಹುಟ್ಟಿದ ಮನುಷ್ಯ ಒಂದಿಲ್ಲ ಒಂದು ದಿನ ಅಗಲುವುದು ಅನಿವಾರ್ಯ, ಹುಟ್ಟುವಾಗ ಹೆಸರು ಇರುವುದಿಲ್ಲ, ಉಸಿರು ಇರುತ್ತದೆ, ಉಸಿರು ನಿಂತರೂ ಹೆಸರು ಉಳಿಯುವ ಹಾಗೆ ಬದುಕಿದವರು ಲಿಂ. ನೀಲಕಂಠ ಶ್ರೀಗಳು ಎಂದರು.
ಭಕ್ತ ಸಂಕುಲಕ್ಕೆ ಅವರು ಕೊಟ್ಟ ಸಂಸ್ಕಾರ ಮತ್ತು ಶೋಭಾಮೃತ ಜೀವನ ಶ್ರೇಯಸ್ಸಿಗೆ ಸ್ಪೂರ್ತಿ ತಂದಿದೆ, ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಸೇವೆಯನ್ನು ಮಾಡಿ, ಅವರ ಅಂತಃಕರಣ ಆಶೀರ್ವಾದಕ್ಕೆ ಪಾತ್ರರಾಗಿದ್ದರು. ಅವರು ನಮ್ಮೆಲ್ಲರನ್ನು ಅಗಲಿ ವರ್ಷ ಕಳೆದರೂ ಅವರ ನೆನಪು ಸದಾ ಹಸಿರಾಗಿದೆ ಎಂದರು.
ಪೀಠಾಧ್ಯಕ್ಷರಾದ ಸಿದ್ಧರೇಣುಕ ಸ್ವಾಮೀಜಿ ಮಾತನಾಡಿ, ಉಜ್ವಲ ಬದುಕಿಗೆ ಗುರುವಿನ ಮಾರ್ಗದರ್ಶನ ಅವಶ್ಯಕ, ಆದರ್ಶಗಳನ್ನು ಬೋಧಿಸಿದ ಲಿಂ.ನೀಲಕಂಠ ಶ್ರೀಗಳ ನೆನಹು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತಿವೆ ಎಂದರು. ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಮುಳವಾಡ ಹಿರೇಮಠದ ಸಿದ್ಧಲಿಂಗ ಸ್ವಾಮೀಜಿ ಮತ್ತೀತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

