ಮುದ್ದೇಬಿಹಾಳದಲ್ಲಿ ಸಿಎಂ ಸಿದ್ಧರಾಮಯ್ಯರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು
ಮುದ್ದೇಬಿಹಾಳ: ಇಲ್ಲಿಯವರೆಗೆ ಯಾವ ಸರ್ಕಾರವೂ ನೀಡದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಂದಾಗ ಆಶ್ವಾಸನೆ ನೀಡಿದಂತೆ ೫ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಶುಕ್ರವಾರ ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬಿಜೆಪಿಯವರು ನಮ್ಮ ಯೋಜನೆಗಳನ್ನು ಅನಿಷ್ಠಾನಗೊಳಿಸಲು ಸರ್ಕಾರದಲ್ಲಿ ಹಣ ಇಲ್ಲ ಅಂತಾರೆ, ಚುನಾವಣೆ ಪ್ರಚಾರದಲ್ಲಿ ಈ ೫ ಯೋಜನೆಗಳು ಜಾರಿಗೊಂಡರೆ ಸರ್ಕಾರ ದಿವಾಳಿ ಆಗುತ್ತೆ ಅಂದಿದ್ರು, ಜೂನ್ ನಿಂದಲೇ ಯೋಜನೆಗಳು ಜಾರಿಯಾಗಿವೆ. ದಿವಾಳಿ ಆಗಿದೆಯಾ ಎಂದು ಪ್ರಶ್ನಿಸಿದರು. ಜನತೆಯನ್ನು ತಪ್ಪುದಾರಿಗೆಳೆಯಲು ೫ ಗ್ಯಾರಂಟಿಗಳನ್ನು ಕೊಟ್ಟಿರುವ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಹಣ ಇಲ್ಲ ಅಂತಾ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರ್ಕಾರದಲ್ಲಿ ದುಡ್ಡು ಇರದೇ ಇದ್ದರೆ ಈ ಅಭಿವೃದ್ಧಿ ಕಾಮಗಾರಿಗಳಿಗೆ ದುಡ್ಡು ಎಲ್ಲಿಂದ ಬರ್ತಿತ್ತು? ಸಮಾಜಕಲ್ಯಾಣ, ಲೊಕೋಪಯೋಗಿ, ಕೌಶಾಲ್ಯಾಭಿವೃದ್ಧಿ, ಕರ್ನಾಟಕ ನಗರ ನೀರು ಸಬರಾಜು ಮಂಡಳಿ, ಕೃಷಿ ಮಾರಾಟ, ಉನ್ನತ ಶಿಕ್ಷಣ ಇಲಾಖೆ ಹೀಗೆ ಅನೇಕ ಇಲಾಖೆಗಳ ಅಭಿವೃದ್ಧಿ ಕೆಲಸಗಳಿಗೆ ಇಂದು ಚಾಲನೆ ನೀಡಿದ್ದೇವೆ ಎಂದರು.
ನುಡಿದಂತೆ ನಡೆದವರು ಬಸವಾದಿ ಶರಣರು, ಇಂದು ಅವರ ಹಾದಿಯಲ್ಲೇ ನಾವೂ ಸಾಗುತ್ತಿದ್ದೇವೆ. ಬಡವ, ಬಲ್ಲಿದ, ಶ್ರೀಮಂತ, ಮೇಲು, ಕೀಳು, ಕಾಂಗ್ರೇಸ್, ಬಿಜೆಪಿ ಎನ್ನದೇ ಎಲ್ಲರಿಗೂ ಸದುಪಯೋಗವಾಗುವಂತೆ ಯೋಜನೆಗಳನ್ನು ರೂಪಿಸಿದ್ದೇವೆ. ನಮ್ಮಲ್ಲಿ ಜಾತಿಯ ವ್ಯವಸ್ಥೆ ಬೆರೂರಿದೆ. ಅದನ್ನು ಮೊದಲು ಹೋಗಲಾಡಿಸಬೇಕು. ಬಸವಾದಿ ಶರಣರು ಹಾಕಿದ ಮಾರ್ಗದಲ್ಲಿ ನಡೆಯಬೇಕು. ಅವರು ಹಾಕಿದ ಮಾರ್ಗವನ್ನು ಪಾಲನೆ ಮಾಡದೇ ಹೋದರೆ ಈ ಸಮಾಜ ಎಂದಿಗೂ ಸುಧಾರಣೆಯಾಗಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಸುಮಾರು ೨ಲಕ್ಷ ಕೋಟಿ ರೂಪಾಯಿಗಿಂತ ಜಾಸ್ತಿ ಬಿಲ್‌ಗಳನ್ನು ಬಾಕಿ ಇಟ್ಟು ನಮ್ಮ ಸರ್ಕಾರದ ಮೇಲೆ ಹೊರೆ ಹಾಕಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಬಡವರಿಗೆ, ಮಹಿಳೆಯರಿಗೆ, ನಿರುದ್ಯೋಗಿ ಯುವಕರಿಗಾಗಿ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಸಿದ್ಧರಾಮಯ್ಯನವರು ಸಾಮಾಜಿಕ ಭದ್ರತೆ ನೀಡಿದ್ದಾರೆ ಎಂದರು.
ಜವಳಿ, ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿದರು.
ಶಾಸಕ, ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿದರು.
ಈ ವೇಳೆ ಮುಖ್ಯಮಂತ್ರಿಗಳಿಗೆ, ವಿವಿಧ ಮಠಾಧೀಶರು, ನಿವೃತ್ತ ಸೈನಿಕರು, ಹಿರಿಯ ನಾಗರೀಕರಿಂದ ಸನ್ಮಾನಿಸಿ ಗೌರವಿಸಲಾಯಿತು. ನಾಗಠಾಣ ಶಾಸಕ ವಿಠ್ಠಲ ಕಟಗದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ವಿಧಾನ ಪರಿಷತ್ ಶಾಸಕ ಪ್ರಕಾಶ ರಾಠೋಡ, ಜಿಲ್ಲಾಧಿಕಾರಿ ಟಿ.ಬೂಬಾಲನ, ಜಿಲ್ಲಾ ಪಂಚಾಯತ ಸಿಇಓ ರಿಷಿ ಆನಂದ, ತಹಶೀಲ್ದಾರ ಬಲರಾಮ ಕಟ್ಟಿಮನಿ, ಪ್ರಭಾರ ತಾಲೂಕು ಪಂಚಾಯತ ಇಓ ಯುವರಾಜ ಹನಗಂಡಿ ಸೇರಿದಂತೆ ಮತ್ತಿತರರು ಇದ್ದರು.

