ವಿಜಯಪುರ: ಅಂತಾರಾಷ್ಟ್ರೀಯ ಖ್ಯಾತಿಯ ಅಥ್ಲೀಟ್ ಮತ್ತು ಖ್ಯಾತ ವೈದ್ಯ ಡಾ. ಸಿ. ಆರ್. ಬಿದರಿ ಅವರ ಹೆಸರಿನಲ್ಲಿ ಚರ್ಮಕ್ಯಾನ್ಸರ್ ಕ್ಲಿನಿಕ್ ಪ್ರಾರಂಭಿಸಲಾಗುವುದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.
ಶುಕ್ರವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸ್ಕಿಲ್ಸ್ ಲ್ಯಾಬೊರೇಟರಿ ಕಟ್ಟಡದಲ್ಲಿರುವ ಸೆಂಟ್ ಫಾರ್ ಅಡ್ವಾನ್ಸಡ್ ಮೆಡಿಕಲ್ ಎಜುಕೇಶನ್ ಆಂಡ್ ರಿಸರ್ಚ್ ವಿಭಾಗದಲ್ಲಿ ಡಾ. ಸಿ. ಆರ್. ಬಿದರಿ ಅವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾದ ಕ್ಯಾನ್ಸರ್ ಕುರಿತು ರಾಜ್ಯ ಮಟ್ಟದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿ.ಎಲ್.ಡಿ.ಇ ಆಸ್ಪತ್ರೆಯ ಅಭಿವೃದ್ಧಿಗೆ ಮತ್ತು ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಡಾ. ಸಿ. ಆರ್. ಬಿದರಿ ಅವರ ಪಾತ್ರ ಅಮೂಲ್ಯವಾಗಿದೆ. ತಮ್ಮ ಸೇವೆ ಮೂಲಕ ಮಕ್ಕಳು ಮತ್ತು ಯುವಕರು ವೈದ್ಯಕೀಯ ಶಿಕ್ಷಣ ಪಡೆಯಲು ಅವರು ಸ್ಪೂರ್ತಿಯಾಗಿದ್ದರು. ವಿಜಯಪುರ ಜಿಲ್ಲೆಯ ಜನರ ಸೇವೆಗಾಗಿಯೇ ತಮ್ಮ ವೈದ್ಯವೃತ್ತಿ ಜೀವನವನ್ನು ಮುಡುಪಾಗಿಟ್ಟಿದ್ದರು. ಅಷ್ಟೇ ಅಲ್ಲ, ವೈದ್ಯವೃತ್ತಿಯಲ್ಲಿ ಬಿಡುವಿಲ್ಲದ ಸಮಯದ ಮಧ್ಯೆಯು ಕುಟುಂಬ ನಿರ್ವಹಣೆಯಲ್ಲಿಯೂ ಇತರ ವೈದ್ಯರಿಗೆ ಮಾದರಿಯಾಗಿದ್ದಾರೆ. ಅವರ ಕನಸುಗಳನ್ನು ನಾವೆಲ್ಲರೂ ನನಸಾಗಿಸೋಣ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ಡಾ. ವೈ. ಜಯರಾಜ ಮಾತನಾಡಿ, ಡಾ. ಆರ್. ಸಿ. ಬಿದರಿ ಅವರು ಓರ್ವ ಅತ್ಯುನ್ನತ ವೈದ್ಯ, ಉತ್ತಮ ಆಡಳಿತಾಧಿಕಾರಿ, ಮಾದರಿ ಪೋಷಕರಾಗಿ ಸಮಾಜಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಬಹುಮುಖಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ತತ್ವಾದರ್ಶಗಳು, ಸೇವಾ ಮನೋಭಾವ ವೈದ್ಯಕೀಯ ಕ್ಷೇತ್ರದ ಪ್ರತಿಯೊಬ್ಬರಿಗೂ ಮಾದರಿಯಾಗಿವೆ ಎಂದು ಹೇಳಿದರು.
ಕ್ಯಾನ್ಸರ್ ರೋಗ ಪತ್ತೆಯಾದರೆ ರೋಗಿಯಷ್ಟೇ ಅಲ್ಲ, ರೋಗಿಯ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಕುರಿತು ಅರಿವು ಮತ್ತು ಜಾಗೃತಿ ಅಗತ್ಯ. ಆರಂಭಿಕ ಹಂತದಲ್ಲಿಯೇ ರೋಗಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದರೆ ಈ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಸಂಯೋಜಕ ಡಾ. ಆರ್. ಸಿ. ಬಿದರಿ ಮಾತನಾಡಿ, ನಮ್ಮ ತಂದೆ ಡಾ. ಸಿ.ಆರ್.ಬಿದರಿಯವರು ತಮ್ಮ ಬಳಿಗೆ ಬರುವ ರೋಗಿಗಳ ಆರೋಗ್ಯ ಸಮಸ್ಯೆಗಳನ್ನು ಶಾಂತಚಿತ್ತದಿಂದ ಆಲಿಸಿ ನಗುಮುಖದ ಮೂಲಕ ಚಿಕಿತ್ಸೆ ನೀಡಿ ರೋಗಿಗಳ ಮೊಗದಲ್ಲಿ ಮಂದಹಾಸ ಮೂಡಿಸುತ್ತಿದ್ದರು. ಅಲ್ಲದೇ, ರೋಗಿಗಳಲ್ಲಿರುವ ಆತಂಕವನ್ನು ದೂರ ಮಾಡುತ್ತಿದ್ದರು. ಅವರ ಜ್ಞಾಪಕ ಶಕ್ತಿಯು ಅಪಾರವಾಗಿತ್ತು. ಆಗಾಗ ಆರೋಗ್ಯ ಶಿಬಿರಗಳನ್ನು ನಡೆಸಿ ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ಒದಗಿಸುತ್ತಿದ್ದರು ಎಂದು ಹೇಳಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಸಮಕುಲಪತಿ ಡಾ.ಅರುಣ ಇನಾಮದಾರ ಮಾತನಾಡಿದರು.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಡಾ. ಸಿ. ಆರ್. ಬಿದರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಎಚ್. ಸಿ. ಈ ಆಸ್ಪತ್ರೆಯ ಖ್ಯಾತವೈದ್ಯರಾದ ಡಾ. ಲೋಹಿತ ಜಿ., ಡಾ. ಅಭಿಲಾಷಾ ನಾರಾಯಣ, ಡಾ. ಪ್ರಭು ಎಸ್. ನೇಸರ್ಗಿಕ ಮತ್ತು ಡಾ. ನಟರಾಜ ಕೆ. ಎಸ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಸಿ. ಆರ್. ಬಿದರಿಯವರ ಪುತ್ರಿ ಆಶಾ. ಎಂ. ಪಾಟೀಲ, ಡಾ. ಅರವಿಂದ ಪಾಟೀಲ, ಡಾ. ಎಚ್. ಟಿ. ಲತಾದೇವಿ, ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಡಾ. ಎಸ್. ಎನ್. ಬೆಂತೂರ, ಡಾ. ಬಿ. ಸಿ. ಉಪ್ಪಿನ, ಡಾ. ಅನುಜಾ ಎಂ. ಕೆ, ಡಾ. ವಿಜಯ ಕಟ್ಟಿ, ಡಾ. ಶೈಲಜಾ ಪಾಟೀಲ, ಡಾ. ವಿಜಯಕುಮಾರ ವಾರದ, ಡಾ. ಸುಮಂಗಲಾ ಪಾಟೀಲ, ಡಾ. ಎಂ. ಆರ್. ಗುಡದಿನ್ನಿ, ಡಾ. ಉದಯಕುಮಾರ ನುಚ್ಚಿ, ಡಾ. ಶ್ರೀಧರ ಪಾಟೀಲ, ಡಾ. ವೆಂಕಟರಮಣ ಸತೀಶ ಜೋಷಿ ಮುಂತಾದವರು ಉಪಸ್ಥಿತರಿದ್ದರು.
ಉಪಪ್ರಾಚಾರ್ಯ ಡಾ. ಆನಂದ ಪಾಟೀಲ ಸ್ವಾಗತಿಸಿದರು. ಡಾ. ಪ್ರತೀಕ್ಷಾ ಮತ್ತು ಡಾ. ಗೌತಮ ನಿರೂಪಿಸಿದರು. ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ವಂದಿಸಿದರು.
ಉದ್ಘಾಟನೆ ಕಾರ್ಯಕ್ರಮ ನಂತರ ಕ್ಯಾನ್ಸರ್ ಕುರಿತು ತಜ್ಞವೈದ್ಯರಿಂದ ದಿನವಿಡಿ ನಾನಾ ವಿಷಯಗಳ ಕುರಿತು ಗೋಷ್ಠಿಗಳು ನಡೆದವು.
Subscribe to Updates
Get the latest creative news from FooBar about art, design and business.
Related Posts
Add A Comment

