ದಾವಣಗೆರೆ ಸಮ್ಮೇಳನದಲ್ಲಿ ಘಟಕಕ್ಕೆ ಪ್ರಶಸ್ತಿ ಪ್ರದಾನ | ಸಂಭ್ರಮಿಸಿದ ಕಾನಿಪ ಸದಸ್ಯರು
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕಕ್ಕೆ ರಾಜ್ಯ ಘಟಕ ಕೊಡಮಾಡುವ ಉತ್ತಮ ಸಾಧನೆಗೈದ ಸಂಘ ಪ್ರಶಸ್ತಿಗೆ ಪುರಸ್ಕೃತವಾಗಿದ್ದು, ಸಂಘದ ಸದಸ್ಯರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ರಾಜ್ಯದ ಮೂರು ಜಿಲ್ಲಾ ಘಟಕಗಳಿಗೆ ಈ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ವಿಜಯಪುರ ಕಾರ್ಯನಿರತ ಪತ್ರಕರ್ತರ ಸಂಘವೂ ಈ ಪ್ರಶಸ್ತಿಗೆ ಪಾತ್ರವಾಗಿದ್ದು, ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳ ಹರ್ಷದ ಹೊನಲಿಗೆ ಕಾರಣವಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ತಿಳಿಸಿದ್ದಾರೆ.
ಕಳೆದ ವರ್ಷ ಫೆ. ೪ ಮತ್ತು ೫ ರಂದು ವಿಜಯಪುರ ಜಿಲ್ಲಾ ಘಟಕ ೩೭ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿತ್ತು. ಈ ಸಮ್ಮೇಳನ ಯಶಸ್ಸಿಗೆ ಸಂಘದ ಸದಸ್ಯರು ಹಾಗೂ ಹಾಗೂ ಹಿತೈಷಿಗಳು ದಣಿವರಿಯದೇ ದುಡಿದಿದ್ದನ್ನು ಇಲ್ಲಿ ಸ್ಮರಿಸಬಹುದು.
ದಾವಣಗೆರೆಯಲ್ಲಿ ಇದೇ ಫೆ. ೩ ಮತ್ತು ೪ ರಂದು ನಡೆಯಲಿರುವ ೩೮ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ವಿಜಯಪುರ ಜಿಲ್ಲಾ ಘಟಕಕ್ಕೆ ಕೆಯುಡಬ್ಲೂಜೆ ವಾರ್ಷಿಕ ಪ್ರಶಸ್ತಿ ನೀಡಿ ರಾಜ್ಯ ಘಟಕ ಗೌರವಿಸಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಸದಸ್ಯರ ಸಂಭ್ರಮ : ಜಿಲ್ಲಾ ಸಂಘ ರಾಜ್ಯ ಘಟಕದ ಪ್ರಶಸ್ತಿಗೆ ಪುರಸ್ಕೃತವಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸಂಘದ ಸದಸ್ಯರು, ಪದಾಕಾರಿಗಳು ಹಾಗೂ ಹಿತೈಷಿಗಳು ಪರಸ್ಪರ ಅಭಿನಂದನೆ ವಿನಿಮಯ ಮಾಡಿಕೊಂಡರು. ಜೊತೆಗೆ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕಕ್ಕೆ ಕೆಯುಡಬ್ಲೂಜೆ ವಾರ್ಷಿಕ ಪ್ರಶಸ್ತಿ ಲಭಿಸಿದ್ದಕ್ಕೆ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ’ಉದಯರಶ್ಮಿ’ ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ವಿಜಯಪುರದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ಸಾಂಘಿಕ ಶ್ರಮದಿಂದ ೩೭ನೇ ರಾಜ್ಯ ಪತ್ರಕರ್ತರ ಸಮ್ಮೇಳನ ತುಂಬ ಯಶಸ್ವಿಯಾಗಿತ್ತು. ಸಂಘದ ಕಾರ್ಯಚಟುವಟಿಕೆ ಮತ್ತು ಶ್ರಮವನ್ನು ರಾಜ್ಯ ಘಟಕದ ಕ್ರಿಯಾಶೀಲ ಅಧ್ಯಕ್ಷ ಶಿವಾನಂದ ತಗಡೂರ ಮತ್ತು ಪದಾಧಿಕಾರಿಗಳು ಗುರುತಿಸಿದ್ದು, ನಮಗೆಲ್ಲ ಇನ್ನೂ ಹೆಚ್ಚಿನ ರೀತಿಯ ಸೇವೆಗೈಯಲು ಸ್ಪೂರ್ತಿ ನೀಡಿದೆ ಎಂದು ಇಂದುಶೇಖರ ತಿಳಿಸಿದ್ದಾರೆ.


