ಸಂಸದ ಡಿಕೆ ಸುರೇಶ್ ನೀಡಿದ ಹೇಳಿಕೆ | ಬಿಜೆಪಿ ನಾಯಕರ ಖಂಡನೆ | ತಮ್ಮನ ಅಭಿಪ್ರಾಯ ಒಪ್ಪದ ಡಿಕೆಶಿ
ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬೆನ್ನಲ್ಲೇ, ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್, ಇದೇ ರೀತಿ ಮುಂದುವರಿದರೆ ಪ್ರತ್ಯೇಕ ದೇಶದ ಬೇಡಿಕೆ ಮುಂದಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ದೆಹಲಿಯಲ್ಲಿ ಸಂಸತ್ತಿನ ಹೊರಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು ಟೀಕಿಸುವ ಸಂದರ್ಭದಲ್ಲಿ ಸುರೇಶ್ ಈ ಹೇಳಿಕೆ ನೀಡಿದ್ದಾರೆ. ಇದು ಸಕತ್ ಕಿಡಿ ಹಬ್ಬಿಸಿದ್ದು, ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಎಂಪಿ ರೇಣುಕಾಚಾರ್ಯ, ಆರ್. ಅಶೋಕ್, ಸುನೀಲ್ ಕುಮಾರ್ ಅವರಂತಹ ನಾಯಕರು ಭಾರಿ ಖಂಡನೆ ವ್ಯಕ್ತಪಡಿಸಿದ್ದಾರೆ.
“ಅಖಂಡ ಭಾರತವನ್ನು ತುಂಡು ಮಾಡಿದ ಕಾಂಗ್ರೆಸ್ಸಿಗರ ಮನಸ್ಥಿತಿ ಇಂದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ದೇಶವನ್ನು ಮತ್ತೊಮ್ಮೆ ವಿಭಜಿಸುವ ಬಹುದೊಡ್ಡ ಷಡ್ಯಂತ್ರ ಸಂಸದ ಡಿ. ಕೆ. ಸುರೇಶ್ ಅವರ ಬಾಯಲ್ಲಿ ಬಂದಿದೆ!. ದೇಶವನ್ನೇ ತುಂಡು ಮಾಡುವ ಮತಾಂಧ ಜಿಹಾದಿಗಳನ್ನು ಬಳಸಿಕೊಂಡು ಅವರನ್ನು ಪೋಷಣೆ ಮಾಡುತ್ತಿರುವ ಕಾಂಗ್ರೆಸ್, ಇಂದು ಜಿಹಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.
ಧರ್ಮದ ಆಧಾರದ ಮೇಲೆ ಭಾರತವನ್ನು ಒಡೆದಾದ ಮೇಲೂ ಕಾಂಗ್ರೆಸ್‌ಗೆ, ದೇಶವನ್ನು ಛಿದ್ರ ಮಾಡುವ ಮಹದಾಸೆ ಈಡೇರದೆ ಇರುವುದೇ ಇಂತಹ ಮತಿಗೇಡಿ ಹೇಳಿಕೆಗಳು ಹೊರ ಬರಲು ಕಾರಣ!” ಎಂದು ಕರ್ನಾಟಕ ಬಿಜೆಪಿ ಖಂಡಿಸಿದೆ.

