ಬರಪರಿಹಾರದಲ್ಲಿ ಅನ್ಯಾಯ | ತೆರಿಗೆ ಪಾಲಿನಲ್ಲಿ ವಂಚನೆ | ಬಿಜೆಪಿ ಲೋಕಸಭಾ ಸದಸ್ಯರ ಬಾಯಿಗೆ ಬೀಗ
ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು: ಬರಪರಿಹಾರದಲ್ಲಿ ಅನ್ಯಾಯ, ತೆರಿಗೆ ಪಾಲಿನಲ್ಲಿ ವಂಚನೆ, ಹಣಕಾಸು ಆಯೋಗದ ಅನುದಾನದಲ್ಲಿ ಮೋಸ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣ ನೀಡದೆ ಅನ್ಯಾಯ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಒಂದೇ ಎರಡೇ? ಹೀಗಿದ್ದರೂ ರಾಜ್ಯದ 25 ಬಿಜೆಪಿ ಲೋಕಸಭಾ ಸದಸ್ಯರು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಬರಪೀಡಿತ ಪ್ರದೇಶದ ರೈತರಿಗೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಪರಿಹಾರದ ಹಣ ನೀಡದೆ ಕಳೆದ ಐದು ತಿಂಗಳಿನಿಂದ ಗೋಳಾಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲಾಗದ ರಾಜ್ಯದ ಪುಕ್ಕಲು ಬಿಜೆಪಿ ನಾಯಕರು ನಮ್ಮ ವಿರುದ್ಧ ”ಪರಿಹಾರ ಕೊಡಿ ಕುರ್ಚಿ ಬಿಡಿ” ಎಂಬ ನಾಟಕ ಪ್ರದರ್ಶನಕ್ಕೆ ಹೊರಟಿರುವುದು ಹಾಸ್ಯಾಸ್ಪದ ಮಾತ್ರವಲ್ಲ ನಾಡಿನ ರೈತರಿಗೆ ಬಗೆಯುತ್ತಿರುವ ದ್ರೋಹವಾಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾಗ ಬೀಜ-ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಸಾಯಿಸಿದ ಪಕ್ಷ ಬಿಜೆಪಿ, ಪರಿಹಾರ ಕೊಡಿ ಎಂದು ಕೇಳಿದಾಗೆಲ್ಲ ನಾವೇನು ನೋಟ್ ಪ್ರಿಂಟಿಂಗ್ ಮೆಷಿನ್ ಇಟ್ಟು ಕೊಂಡಿದ್ದೆವೆಯೇ ಎಂದು ಧಾಷ್ಟ್ಯದಿಂದ ಕೇಳಿದ್ದು ಇದೇ ಬಿಜೆಪಿ ಮುಖ್ಯಮಂತ್ರಿಗಳು. ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಕೂಡಾ ಇದೇ ಬಿಜೆಪಿ. ಇಂತಹ ಹುಟ್ಟು ರೈತ ವಿರೋಧಿ ಬಿಜೆಪಿ ನಾಯಕರು ಈಗ ವೇಷ ಬದಲಿಸಿ ಸುರಿಸುವ ಕಣ್ಣೀರು ಮೊಸಳೆಯದ್ದು ಎಂದು ಅರ್ಥಮಾಡಿಕೊಳ್ಳದಷ್ಟು ರೈತರು ದಡ್ಡರಲ್ಲ ಎಂದು ಕಿಡಿಕಾರಿದ್ದಾರೆ.
ಕಂದಾಯ ಸಚಿವ ಕೃಷ್ಣಭೈರೇಗೌಡರ ಜೊತೆ ನಾನು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಕೃಷಿ ಸಚಿವರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಇಲ್ಲಿಯ ವರೆಗೆ ಬರ ಪರಿಹಾರ ಕೋರಿ 17 ಪತ್ರಗಳನ್ನು ಬರೆದಿದ್ದೇವೆ. ಯಾವುದಕ್ಕೂ ಉತ್ತರವೂ ಇಲ್ಲ, ನಯಾಪೈಸೆ ಪರಿಹಾರವನ್ನೂ ಕೊಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ನಾಯಕರು ಯಾವ ಮುಖ ಹೊತ್ತು ಬರಪೀಡಿತ ರೈತರ ಬಳಿ ನಮ್ಮ ವಿರುದ್ಧ ದೂರು ತೆಗೆದುಕೊಂಡು ಹೋಗುತ್ತಾರೆ? ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದಿಂದ ಈಗಾಗಲೇ ರಾಜ್ಯದ ರೈತರು ರೊಚ್ಚಿಗೆದ್ದಿದ್ದಾರೆ ಎಂದಿದ್ದಾರೆ.
ಹೀಗಿದ್ದರೂ ರಾಜ್ಯದ 25 ಬಿಜೆಪಿ ಲೋಕಸಭಾ ಸದಸ್ಯರು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ. ಇವರೆಲ್ಲ ಯಾವ ಮುಖ ಹೊತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಕೇಳಲು ಜನರ ಬಳಿ ಹೋಗುತ್ತಾರೆ? ಇಂತಹವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ. ರೈತರಿಗೆ ದ್ರೋಹ ಬಗೆದರೆ ಯಾವ ಶ್ರೀರಾಮಚಂದ್ರನೂ ಕಾಪಾಡಲಾರ ತಿಳಿದಿರಲಿ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.

