-ಮನು ಪತ್ತಾರ, ಕಲಕೇರಿ

೧೯೪೫ರಲ್ಲಿ ದ್ವಿತೀಯ ಮಹಾಯುದ್ಧವು ಕೊನೆಗೊಂಡ ನಂತರ ಭಾರತದಲ್ಲಿ ಬ್ರಿಟಿಷರಿಂದ ಸ್ವಾತಂತ್ರ‍್ಯ ಪಡೆದುಕೊಳ್ಳುವ ಪ್ರಶ್ನೆ ಬಹು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಸ್ವಾತಂತ್ರ‍್ಯವನ್ನು ಹಸ್ತಾಂತರಿಸಲು ಬ್ರಿಟೀಷ ಸರಕಾರ ತನ್ನ ಮಂತ್ರಿಗಳಿಂದ ಕೂಡಿದ ತ್ರಿ-ಸದಸ್ಯರ ಕ್ಯಾಬಿನೆಟ್ ಆಯೋಗವನ್ನು ಭಾರತಕ್ಕೆ ಕಳುಹಿಸಿಕೊಟ್ಟಿತ್ತು. ಅದು ಇಲ್ಲಿಯ ಪರಿಸ್ಥಿತಿಯ ಅಧ್ಯಯನ ನಡೆಸಿ ೧೯೪೬ ಮಾರ್ಚ ೧೬ರಂದು ತನ್ನ ವರದಿಯನ್ನು ಮಂಡಿಸುತ್ತದೆ. ಭಾರತವು ತನ್ನ ಸುಗಮ ಆಡಳಿತದ ನಿರ್ವಹಣೆಗಾಗಿ ಒಂದು ಸಂವಿಧಾನವನ್ನು ರಚಿಸಲು ರಾಜ್ಯಾಂಗ ಸಭೆಯನ್ನು ರಚಿಸಿಕೊಳ್ಳಬೇಕೆಂದು ಆಯೋಗವು ಶಿಫಾರಸ್ಸು ಮಾಡುತ್ತದೆ. ಈ ಶಿಫಾರಸ್ಸಿನಂತೆ ರಾಜ್ಯಾಂಗ ರಚನಾ ಸಭೆಗೆ ಸದಸ್ಯರ ಆಯ್ಕೆಗೆ ಚುನಾವಣೆಗಳು ನಡೆಯುತ್ತವೆ. ಪ್ರಾಂತೀಯ ವಿಧಾನಸಭೆಗಳು ಈ ಚುನಾವಣೆ ನಡೆಸಿ ಸದಸ್ಯರನ್ನು ಆಯ್ಕೆ ಮಾಡಿ, ರಾಜ್ಯಾಂಗ ಸಭೆಗೆ ಕಳುಹಿಸಿಕೊಡುತ್ತವೆ.
ಡಾ. ಬಿ. ಆರ್. ಅಂಬೇಡ್ಕರ್ ಅವರು ಬಂಗಾಳ ವಿಧಾನಸಭೆಯಿಂದ ಆಯ್ಕೆಗೊಂಡು ಸಂವಿಧಾನ ರಚನಾ ಸಭಗೆ ಪ್ರವೇಶಿಸುತ್ತಾರೆ. ಸ್ವತಂತ್ರ ಭಾರತದ ಸಂವಿಧಾನ ರಚಿಸಲು ರಾಜ್ಯಾಂಗ ಸಭೆಯು ೧೯೪೬ ಡಿಸೆಂಬರ್ ೯ರಂದು ಆರಂಭಗೊಳ್ಳುತ್ತದೆ. ೨೯೬ ಸದಸ್ಯರ ಪೈಕಿ ೨೦೭ ಸದಸ್ಯರು ಪ್ರಥಮ ಅಧಿವೇಶನ ಸಭೆಯಲ್ಲಿ ಹಾಜರಾಗುತ್ತಾರೆ. ಎರಡು ದಿನಗಳ ನಂತರ ಅಂದರೆ ೧೯೪೬ ಡಿಸೆಂಬರ್ ೧೧ರಂದು ಡಾ. ರಾಜೇಂದ್ರ ಪ್ರಸಾದ್ ಅವರನ್ನು ರಾಜ್ಯಾಂಗ ರಚನಾ ಸಭೆಯ ಖಾಯಂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ.
೧೯೪೬ರ ಡಿಸೆಂಬರ್ ೧೩ರಂದು ಜವಾಹರಲಾಲ್ ನೆಹರು ಅವರು ರಾಜ್ಯಾಂಗ ಸಭೆಯ ಧ್ಯೇಯೋದ್ದೇಶಗಳನ್ನು ಕುರಿತು ನಿರ್ಣಯವನ್ನು ಮಂಡಿಸುತ್ತಾರೆ. ಡಿಸೆಂಬರ್ ೧೭ರಂದು ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅವರು ಅನಿರೀಕ್ಷಿತವಾಗಿ ಡಾ. ಅಂಬೇಡ್ಕರ್ ಅವರನ್ನು ತಮ್ಮ ಅಭಿಪ್ರಾಯವನ್ನು ಹೇಳಬೇಕೆಂದು ಆಹ್ವಾನಿಸುತ್ತಾರೆ. ಸಂವಿಧಾನದ ಧ್ಯೇಯೋದ್ದೇಶಗಳ ಕುರಿತಂತೆ ಅತ್ಯಂತ ಸ್ಪಷ್ಟವಾಗಿ ಮಾತನಾಡಿದ ಡಾ. ಬಿ. ಆರ್. ಅಂಬೇಡ್ಕರ್ ಅವರ ಮಾತುಗಳನ್ನು ಕೇಳಿದ ಸದಸ್ಯರೆಲ್ಲರೂ ಹರ್ಷೋದ್ಗಾರ ವ್ಯಕ್ತಪಡಿಸಿ ಜೋರಾದ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ. ಅವರ ಈ ಭಾಷಣ ಭವಿಷ್ಯದ ಭಾರತಕ್ಕೆ ರಾಜ್ಯಮಾರ್ಗ ತೋರಿದಂತ್ತಿತ್ತು ಹಾಗೂ ಡಾ. ಅಂಬೇಡ್ಕರ್ ಅವರು ಇಲ್ಲದೇ ಸಂವಿಧಾನ ರಚನೆ ಅಸಾಧ್ಯ ಅನ್ನುವ ಮಟ್ಟಿಗೆ ಅಧ್ಯಕ್ಷ ಹಾಗೂ ಸದಸ್ಯರ ಮೇಲೆ ಪರಿಣಾಮ ಬೀರಿತು. ಹೀಗೆ, ಅಂದು ಅಂಬೇಡ್ಕರರು ಯಾರ ಮೇಲೂ ಹರಿಹಾಯದೆ ರಾಜಕೀಯ ಮುತ್ಸದ್ದಿತನದ ಮಾತುಗಳನ್ನಾಡಿ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರೆ.
೧೯೪೭ ಜನವರಿ ೨೪ರಂದು ಸದನವು ಒಂದು ನಿರ್ಣಯ ಕೈಗೊಂಡು ಸರ್ದಾರ ಪಟೇಲ್‌ರ ಅಧ್ಯಕ್ಷತೆಯಲ್ಲಿ ಐವತ್ತು ಜನ ಸದಸ್ಯರನ್ನೊಳಗೊಂಡ ಸಲಹಾ ಸಮಿತಿಯನ್ನು ರಚಿಸಲಾಗುತ್ತದೆ. ಡಾ. ಅಂಬೇಡ್ಕರರು ಸಲಹಾ ಸಮೀತಿಯ ಒಬ್ಬ ಸದಸ್ಯರಾಗಿರುತ್ತಾರೆ. ಸಲಹಾ ಸಮಿತಿಯು ನಾಲ್ಕು ಉಪಸಮಿತಿಗಳನ್ನು ನೇಮಿಸುತ್ತದೆ. ಒಂದನೆಯದ್ದು, ಮೂಲಭೂತಹಕ್ಕುಗಳ ಉಪಸಮಿತಿ, ಎರಡನೆಯದ್ದು ಅಲ್ಪ ಸಂಖ್ಯಾತರ ಉಪಸಮಿತಿ. ಮೂರನೆಯದ್ದು ಈಶಾನ್ಯ ಗಡಿಯ ಆದಿವಾಸಿ ಪ್ರದೇಶಗಳ ಉಪಸಮಿತಿ, ನಾಲ್ಕನೆಯದ್ದು ಪ್ರತ್ಯೇಕವಾದ ಮತ್ತು ಭಾಗಶಃ ಪ್ರತ್ಯೇಕವಾದ ಪ್ರದೇಶಗಳ ಉಪಸಮಿತಿ. ಡಾ. ಅಂಬೇಡ್ಕರರವರು ಮೊದಲ ಎರಡು ಉಪಸಮಿತಿಗಳ ಸದಸ್ಯರಾಗಿರುತ್ತಾರೆ. ಈ ಸಮಿತಿಗಳು ನಡೆಸಿದ ಚರ್ಚೆಗಳಲ್ಲಿ ಭಾಗವಹಿಸಿ ಗಾಢವಾದ ಆಸಕ್ತಿಯನ್ನು ತೋರಿಸುತ್ತಾರೆ. ತಮ್ಮ ಮನಸ್ಸಿನಲ್ಲಿದ್ದ ವಿಚಾರಗಳಿಗೆ ಗಟ್ಟಿಯಾದ ರೂಪವನ್ನು ಕೊಟ್ಟು ಮೂಲ ಹಕ್ಕುಗಳ ಸಮಿತಿಗೆ ಟಿಪ್ಪಣಿಯನ್ನು ಕೊಡುತ್ತಾರೆ.
೧೯೪೭ ಎಪ್ರೀಲ್ ೩೦ರಂದು ಸಂವಿಧಾನ ಸಭೆಯು ಮತ್ತೆ ಮೂರು ಸಮಿತಿಗಳನ್ನು ರಚಿಸುತ್ತದೆ. ೧.ಕೇಂದ್ರ ಅಧಿಕಾರ ಸಮಿತಿ ೨. ಕೇಂದ್ರ ಸಂವಿಧಾನ ಸಮಿತಿ ೩. ತಾತ್ಕಾಲಿಕ ಸಂವಿಧಾನ ಸಮಿತಿ. ಡಾ. ಅಂಬೇಡ್ಕರ್ ಅವರು ಕೇಂದ್ರ ಸಂವಿಧಾನ ಸಮಿತಿಯ ಸದಸ್ಯರಾಗುತ್ತಾರೆ. ಹೀಗಾಗಿ, ಬಹುತೇಕ ಎಲ್ಲಾ ಪ್ರಮುಖ ಸಮಿತಿಗಳಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸ್ಥಾನವನ್ನು ಪಡೆದಿದ್ದು ಅವರ ವಿದ್ವತ್ತಿಗೆ ಸಾಕ್ಷಿಯಾಗಿದೆ. ಅಂಬೇಡ್ಕರ ಅವರು ಬಂಗಾಳದಿಂದ ಆಯ್ಕೆಯಾಗಿ ಸಂವಿಧಾನ ರಚನಾ ಸಭೆಗೆ ಬಂದಿರುತ್ತಾರೆ. ಆದರೆ ಬಂಗಾಳ ವಿಭಜನೆಯಿಂದ ಸ್ವಾತಂತ್ರ‍್ಯಾನಂತರ ಅವರ ಸದಸ್ಯತ್ವ ರದ್ದಾಗಿ ಅವರು ಸಂವಿಧಾನ ರಚನಾ ಸಭೆಯಿಂದ ಹೊರಗುಳಿಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಡಾ. ಅಂಬೇಡ್ಕರ್ ಅವರ ಸೇವೆ ಇಲ್ಲದೆ ಶಾಸನ ರಚನಾ ಕಾರ್ಯ ಸುಲಭವಲ್ಲ ಎಂಬುದನ್ನು ಅರಿತ ಕಾಂಗ್ರೆಸ್ ೧೯೪೭ರ ಜುಲೈ ೩೦ರಲ್ಲಿ ಮುಂಬಯಿಯಿಂದ ಸಂವಿಧಾನ ಸಭೆಯ ಸದಸ್ಯರಾಗಿ ಆಯ್ಕೆಯಾಗಿ ಬರಲು ಸಂಪೂರ್ಣ ಸಹಕಾರ ನೀಡಿ ಅವರನ್ನು ಆಯ್ಕೆ ಮಾಡುತ್ತದೆ.
೧೯೪೭ ಅಗಸ್ಟ್ ೧೫ರಂದು ಭಾರತವು ಬ್ರಿಟೀಷ್ ಆಡಳಿತದಿಂದ ಮುಕ್ತವಾಗಿ ಸ್ವಾತಂತ್ರ‍್ಯಗೊಳ್ಳುತ್ತದೆ. ಪಂಡಿತ ಜವಾಹರಲಾಲ ನೆಹರೂರವರು ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಗಳಾಗುತ್ತಾರೆ. ನೆಹರೂರವರು ತಮ್ಮ ಸಚಿವ ಸಂಪುಟಕ್ಕೆ ಸೇರಬೇಕೆಂದು ಅಂಬೇಡ್ಕರ್‌ರರನ್ನು ಆಹ್ವಾನಿಸುತ್ತಾರೆ. ಆಹ್ವಾನವನ್ನು ಅಂಗೀಕರಿಸಿ ಡಾ. ಅಂಬೇಡ್ಕರರು ಭಾರತದ ಮೊದಲನೆಯ ಕಾನೂನು ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುತ್ತಾರೆ. ೧೯೪೭ ಅಗಸ್ಟ್ ೨೯ರಂದು ಅಸೆಂಬ್ಲಿಯು ಅವರನ್ನು ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡುತ್ತದೆ. ಕರಡು ರಚನಾ ಸಮಿತಿಗೆ ೧. ಶ್ರೀ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ೨. ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ೩. ಕೆ.ಎಂ. ಮುನ್ಸಿ ೪. ಸೈಯದ್ ಮಹಮದ್ ಸಾದುಲ್ಲಾ ೫. ಸರ್ ಬಿ. ಎಲ್. ಮಿಟ್ಟರ್ ೬. ಡಿ.ಪಿ. ಖೈತಾನ್‌ರವರುಗಳನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಸಂವಿಧಾನ ಕರಡನ್ನು ತಯಾರಿಸುವ ಕೆಲಸವನ್ನು ಈ ಸಮಿತಿಗೆ ಒಪ್ಪಿಸಿದ್ದರಿಂದ ಸಂವಿಧಾನ ರಚನೆಯ ಹೊರೆ ಅಂಬೇಡ್ಕರ್ ಅವರ ಮೇಲೆ ಬೀಳುತ್ತದೆ.
೧೯೪೭ ಅಗಸ್ಟ್ ೩೦ರಂದು ಕರಡು ರಚನಾ ಸಮಿತಿಯು ತನ್ನ ಮೊದಲ ಸಭೆಯನ್ನು ನಡೆಸುತ್ತದೆ. ಸಮಿತಿಯು ನಂತರದಲ್ಲಿ ೧೯೪೭ ಅಕ್ಟೋಬರ್ ೨೭ರಿಂದ ೧೯೪೮ ಫೆಬ್ರುವರಿ ೧೩ರವರೆಗೆ ನಿರಂತರವಾಗಿ ೪೪ ದಿನಗಳ ಕಾಲ ಸಭೆ ನಡೆಸಿ, ಸಂವಿಧಾನ ಸಲಹಾಕಾರರ ಕಛೇರಿಯು ಸಿದ್ದಪಡಿಸಿದ ಕರಡಿನ ಅನುಚ್ಛೇದಗಳನ್ನು ಒಂದೊಂದಾಗಿ ಚರ್ಚಿಸಿ, ಪರಿಷ್ಕರಿಸುತ್ತದೆ. ಡಾ. ಅಂಬೇಡ್ಕರ್ ಅವರೇ ಈ ಎಲ್ಲಾ ಸಭೆಗಳ ಕಲಾಪಗಳನ್ನು ನಿರ್ವಹಿಸುತ್ತಾರೆ. ಕರಡು ರಚನಾ ಸಮಿತಿಯು ಅಂತಿಮವಾಗಿ ಅಂಗೀಕರಿಸಿದ ರೂಪದಲ್ಲಿ ಸಂವಿಧಾನದ ಹೊಸ ಕರಡನ್ನು ಅಸೆಂಬ್ಲಿಯ ಅಧ್ಯಕ್ಷರಿಗೆ ೧೯೪೮ ಫೆಬ್ರುವರಿ ೨೧ರಂದು ಒಪ್ಪಿಸುತ್ತದೆ.
ಡಾ. ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಕರಡು ಸಂವಿಧಾನವನ್ನು ಪರಿಶೀಲನೆಗಾಗಿ ೧೯೪೮ರ ನವೆಂಬರ್ ೪ರಂದು ಮಂಡನೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಅಸೆಂಬ್ಲಿಯಲ್ಲಿ ಅಂಬೇಡ್ಕರ್ ಅವರು ‘ಕರಡು ಸಂವಿಧಾನವನ್ನು ಎಂಟು ತಿಂಗಳ ಕಾಲ ಜನತೆಯ ಮುಂದಿರಿಸಲಾಗಿತ್ತು. ಈ ಎಂಟು ತಿಂಗಳ ಕಾಲಾವಧಿಯಲ್ಲಿ ಕರಡು ಸಂವಿಧಾನದ ವಿರುದ್ಧವಾಗಿ ಬಂದಿರುವ ವಿರೋಧಿ ಟೀಕೆಗಳನ್ನು ವ್ಯವಹರಿಸಿದ್ದೇನೆ ಮತ್ತು ಅತ್ಯಂತ ಮುಖ್ಯವಾದ ಟೀಕೆಗಳನ್ನು ನಾನು ಕೈಬಿಟ್ಟಿಲ್ಲ. ಯಾವ ಸಂವಿಧಾನವೂ ಪರಿಪೂರ್ಣವಲ್ಲ. ಕರಡು ರಚನಾ ಸಮಿತಿಯು ಸಿದ್ಧಪಡಿಸಿರುವ ಈ ಸಂವಿಧಾನವು ಈ ದೇಶದಲ್ಲಿ ಪ್ರಾರಂಭಕ್ಕೆ ಸಾಕಷ್ಟು ಉತ್ತಮವಾಗಿದೆ ಎಂದು ಧೈರ್ಯವಾಗಿ ಹೇಳುತ್ತಿದ್ದೇನೆ. ಸಂವಿಧಾನವು ನವ್ಯವಾಗಿದೆ, ಶಾಂತಿಕಾಲ-ಯುದ್ಧಕಾಲಗಳೆರಡರಲ್ಲೂ ದೇಶವನ್ನು ಒಂದಾಗಿ ಹಿಡಿದಿರಲು ತಕ್ಕಷ್ಟು ಬಲವಾಗಿದೆ. ನೂತನ ಸಂವಿಧಾನದ ಪ್ರಕಾರ ಏನಾದರೂ ಹಾನಿಯುಂಟಾದರೆ ಅದಕ್ಕೆ ಕಾರಣ ನಮ್ಮಲ್ಲಿ ಕೆಟ್ಟದಾದ ಸಂವಿಧಾನವಿರುವುದಿಲ್ಲ. ಮನುಷ್ಯನು ಕೆಟ್ಟವನಾಗಿದ್ದನು ಎಂದು ಹೇಳಬೇಕಾಗುತ್ತದೆ’ ಹೇಳಿ ಅಂಬೇಡ್ಕರರು ಸಂವಿಧಾನದ ಮೇಲಿನ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾರೆ. ನಂತರ ಸಂವಿಧಾನ ಸಭೆಯ ಸದಸ್ಯರುಗಳಲ್ಲಿ ಒಬ್ಬರಾದ ಶ್ರೀ ಟಿ.ಟಿ. ಕೃಷ್ಣಮಾಚಾರಿ ಅವರು ಮಾತನಾಡುತ್ತಾ ಸದನದಲ್ಲಿ ಡಾ. ಅಂಬೇಡ್ಕರ್ ಅವರ ಭಾಷಣವನ್ನು ಗಮನವಿಟ್ಟು ಕೇಳಿದವರಲ್ಲಿ ನಾನೂ ಒಬ್ಬ. ಈ ಸಂವಿಧಾನದ ಕರಡು ತಯಾರಿಸುವುದರಲ್ಲಿ ಅವರು ಪಟ್ಟಿರುವ ಶ್ರಮ ಉತ್ಸಾಹ ಇವುಗಳ ಅರಿವು ನನಗಿದೆ, ಮಾನ್ಯ ಅಧ್ಯಕ್ಷರೆ ನೀವು ನೇಮಿಸಿದ ಏಳು ಜನ ಸದಸ್ಯರಲ್ಲಿ ಒಬ್ಬರು ಸದನಕ್ಕೆ ರಾಜೀನಾಮೆ ಕೊಟ್ಟರು, ಒಬ್ಬರು ಮೃತರಾದರು, ಒಬ್ಬರು ಅಮೇರಿಕಕ್ಕೆ ಹೋದರು, ಇನ್ನೊಬ್ಬ ವ್ಯಕ್ತಿ ಸರಕಾರದ ಕೆಲಸದಲ್ಲಿ ತೊಡಗಿದ್ದರು, ಒಬ್ಬಿಬ್ಬರು ದೆಹಲಿಯಿಂದ ಬಹುದೂರದಲ್ಲಿದ್ದರು, ಆದ್ದರಿಂದ ಅಂತಿಮವಾಗಿ ಈ ಸಂವಿಧಾನದ ಕರಡು ಸಿದ್ಧಪಡಿಸುವ ಕೆಲಸವು ಡಾ. ಅಂಬೇಡ್ಕರ್ ಅವರ ಮೇಲೆ ಬಿದ್ದಿತು. ನಿಸ್ಸಂದೇಹವಾಗಿ ಪ್ರಶಂಸಾರ್ಹವಾದ ರೀತಿಯಲ್ಲಿ ಈ ಕೆಲಸವನ್ನು ನಿರ್ವಹಿಸಿರುವುದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದರು.
ಇನ್ನೋರ್ವ ಸದಸ್ಯರಾದ ಶ್ರೀ ಖಾಜೀ ಸೈಯದ್ ಕರೀಮುದ್ದೀನ್ ಅವರು ‘ಭಾರತದ ಕರಡು ಸಂವಿಧಾನದ ಪರಿಶೀಲನೆಗೆ ಸೂಚನೆಯನ್ನು ಮಂಡಿಸಿರುವುದಕ್ಕಾಗಿ ಡಾ. ಅಂಬೇಡ್ಕರ್ ಅವರನ್ನು ನಾನು ಅಭಿನಂದಿಸುತ್ತೇನೆ.’ ಎಂದರು ಸಂವಿಧಾನದ ಸಭೆಯಲ್ಲಿ ಈ ಮಹನೀಯರ ಸದಸ್ಯರಿಬ್ಬರ ಮಾತುಗಳನ್ನು ನೋಡಿದಾಗ ಸಂವಿಧಾನ ರಚನೆಯ ಸಂಪೂರ್ಣ ಜವಾಬ್ದಾರಿ ಡಾ. ಬಾಬಾಸಾಹೇಬ ಅಂಬೇಡ್ಕರರ ಮೇಲೆ ಬಿದ್ದಿರುವುದು ಸ್ಪಷ್ಟವಾಗುತ್ತದೆ. ಜಾತಿ-ಮತ, ಭಾಷೆಯ ಭೇದಗಳೆನ್ನದೆ ಗಂಡು-ಹೆಣ್ಣು ಬಡವ-ಬಲ್ಲಿದನೆಂಬ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ನ್ಯಾಯ, ಸ್ವಾತಂತ್ರ‍್ಯ ಸಮಾನತೆ ಮತ್ತು ಸೋದರತ್ವಗಳೊಂದಿಗೆ ಮುನ್ನಡೆಯುವ ಮಾರ್ಗ ಹಾಕಿ ಕೊಟ್ಟು ದೇಶಪ್ರೇಮ ಮತ್ತು ಮಾನವ ಪ್ರೇಮಗಳೊಂದಿಗೆ ಕಲ್ಯಾಣ ರಾಷ್ಟ್ರಕ್ಕಾಗಿ ಪ್ರಜಾಪ್ರಭುತ್ವದ ತಳಹದಿಯನ್ನು ಹಾಕಿಕೊಟ್ಟ ಮಹಾ ಮಾನವತಾವಾದಿ ಮಹಾ ಮೇಧಾವಿ ಬಾಬಾ ಸಾಹೇಬರು ದೇಶದ ಸರ್ವಶ್ರೇಷ್ಠ ಮಹಾನಾಯಕರಾಗಿದ್ದಾರೆ.
ಸಂವಿಧಾನದ ದ್ವಿತೀಯ ವಚನವು ೧೯೪೮ ನವೆಂಬರ್ ೧೫ರಿಂದ ಪ್ರಾರಂಭವಾಗಿ ೧೯೪೯ ಅಕ್ಟೋಬರ್ ೧೭ರವರೆಗೆ ಸಂವಿಧಾನದ ಒಂದೊಂದು ಒಳಪ್ರಕರಣಗಳ ವಿವರವಾದ ಚರ್ಚೆ ನಡೆಯುತ್ತದೆ. ಅಂತಿಮವಾಗಿ ಸಂವಿಧಾನ ಸಭೆಯು ೧೯೪೯ ನವೆಂಬರ್ ೧೭ರಂದು ಬೆಳಿಗ್ಗೆ ೧೦ ಗಂಟೆಗೆ ಡಾ. ಬಾಬು ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ ಸಭೆ ಸೇರುತ್ತದೆ. ಸಭಾಧ್ಯಕ್ಷರು ಮೂರನೆಯ ಸುತ್ತಿನ ಪಠಣವನ್ನು ಆರಂಭಿಸುತ್ತಾರೆ. ಅನೇಕ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ಮಾತುಗಳನ್ನಾಡಿದ ನಂತರ ಡಾ. ಅಂಬೇಡ್ಕರರು ಕೊನೆಗೆ ತಮ್ಮ ಅಮೋಘವಾದ ಭಾಷಣವನ್ನು ಪ್ರಾರಂಭಿಸುತ್ತಾರೆ.
ಸಂವಿಧಾನ ಸಭೆಯ ಕಾರ್ಯವನ್ನು ಒಮ್ಮೆ ಅವಲೋಕಿಸಿದಾಗ ಅದು ೧೯೪೬ ಡಿಸೆಂಬರ್ ೯ರಂದು ಪ್ರಥಮ ಬಾರಿಗೆ ಸಮಾವೇಶಗೊಂಡು ಎರಡು ವರ್ಷ ಹನ್ನೊಂದು ತಿಂಗಳು ಹದಿನೇಳು ದಿನಗಳು ಪೂರ್ಣಗೊಂಡಿವೆ. ಈ ಕಾಲಾವಧಿಯಲ್ಲಿ ಸಂವಿಧಾನ ಸಭೆಯು ಒಟ್ಟು ೧೧ ಸಭೆಗಳನ್ನು ನಡೆಸಿದೆ. ಸಭೆಗೆ ೧೬೫ ದಿನಗಳನ್ನು ಪರಿಶೀಲನೆಗೆ ೧೧೪ ದಿನಗಳನ್ನು ತೆಗೆದುಕೊಳ್ಳಬೇಕಾಯಿತೆಂದು ಅಂಬೇಡ್ಕರರು ಕರಡು ಸಮಿತಿಯ ಕಾರ್ಯನಿರ್ವಹಿಸಿದ ರೀತಿಯನ್ನು ವಿವರಿಸುವರು. ಕರಡು ರಚನಾ ಸಮಿತಿಯನ್ನು ೧೯೪೭ ಅಗಸ್ಟ್ ೨೯ರಂದು ಸಂವಿಧಾನ ಸಭೆಯು ಚುನಾಯಿಸುತ್ತದೆ. ಅದು ಅಗಸ್ಟ್ ೩೦ರಂದು ತನ್ನ ಮೊದಲ ಸಭೆ ಸೇರಿ ಸಂವಿಧಾನವನ್ನು ರಚಿಸಲು ೧೪೧ ದಿನಗಳನ್ನು ತೆಗೆದುಕೊಂಡು ಅಂತಿಮವಾಗಿ ಸಂವಿಧಾನವು ರೂಪುಗೊಳ್ಳುವ ಹೊತ್ತಿಗೆ ೩೯೫ ವಿಧಿಗಳೂ, ೮ ಅನುಸೂಚಿಗಳು ಅದರಲ್ಲಿ ಒಳಗೊಂಡಿವೆ. ಕರಡು ಸಂವಿಧಾನದ ರಚನಾ ಅವಧಿಯಲ್ಲಿ ೭೬೩೫ ತಿದ್ದುಪಡಿಗಳು ದಾಖಲಾಗುತ್ತವೆ. ಅವುಗಳನ್ನು ಪರಿಶೀಲಿಸಿ ಮಹತ್ವದ ೨೪೭೩ ತಿದ್ದುಪಡಿಗಳನ್ನು ವಾಸ್ತವವಾಗಿ ಸದನದ ಮುಂದೆ ಚರ್ಚಿಗೆ ತರಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಅವರು ೬೦ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿದ ಅತ್ಯಂತ ಶ್ರೇಷ್ಠ ಸಂವಿಧಾನಿಕ ತಜ್ಞರಾಗಿದ್ದಾರೆ. ಭಾರತದ ಸಂವಿಧಾನದ ಪಿತಾಮಹರೆಂದು, ಸಂವಿಧಾನದ ಶಿಲ್ಪಿ ಎಂದು ಅವರನ್ನು ಗೌರವಿಸಲಾಗುತ್ತಿದೆ ೨೬ ನವೆಂಬರ್ ೧೯೪೯ರಂದು ಭಾರತದ ಸಂವಿಧಾನ ಪೂರ್ಣಗೊಂಡು ೧೯೫೦ ಜನೇವರಿ ೨೬ನೇ ದಿನದಿಂದ ಜಾರಿಗೆ ಬಂದಿತು. ಅಂದಿನಿಂದ ಜನವರಿ ೨೬ನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತಿದೆ.
ಸಾಮಾಜಿಕ ಮತ್ತು ಆರ್ಥಿಕ ಧೈಯಗಳನ್ನು ಈಡೇರಿಸಿಕೊಳ್ಳಲು ಜನರು ಸಂವಿಧಾನಿಕ ವಿಧಾನಗಳನ್ನು ಅನುಸರಿಸಬೇಕು. ಕಾಯ್ದೆ ಭಂಗ, ಅಸಹಕಾರ, ಮತ್ತು ರಕ್ತಪಾತದಂತಹ ಮಾರ್ಗಗಳನ್ನು ಸಂಪೂರ್ಣವಾಗಿ ತೊರೆಯಬೇಕು. ಆರ್ಥಿಕ ಮತ್ತು ಸಾಮಾಜಿಕ ಆಶೋತ್ತರಗಳ ಈಡೇರಿಕೆಗೆ ಸಂವಿಧಾನ ಸಮ್ಮತವಾದ ಕಾನೂನಿನ ಮಾರ್ಗಗಳನ್ನು ಅನುಸರಿಸಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಸ್ವರೂಪವನ್ನು ಅದರ ತತ್ವ ಸಿದ್ಧಾಂತವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಂವಿಧಾನದ ಮೂಲಕ ಡಾ. ಬಿ. ಆರ್. ಅಂಬೇಡ್ಕರ್ ಅವರು ಭಾರತದ ಭವಿಷ್ಯತ್ತಿನ ಮಾರ್ಗವನ್ನು ತೋರಿಸಿದ್ದಾರೆ. ಈ ಮಾರ್ಗದಲ್ಲಿ ನಾವೆಲ್ಲ ಮುನ್ನಡೆಯುವುದು ಆದ್ಯ ಕರ್ತವ್ಯವಾಗಿದೆ, ನಮ್ಮ ಭವಿಷ್ಯವಿದೆ, ರಾಷ್ಟ್ರಭಕ್ತಿ ಅಡಗಿದೆ. ಒಂದು ವೇಳೆ ಇದನ್ನು ಮರೆತರೆ ಅಥವಾ ಅಲಕ್ಷ್ಯ ಧೋರಣೆ ತೋರಿದರೆ ನಾವುಗಳು ಸಮಾನತೆ, ಸ್ವಾತಂತ್ರ‍್ಯ, ಸಹೋದರತೆಗಳನ್ನು ಕಳೆದುಕೊಂಡು ಮತ್ತೊಮ್ಮೆ ಗುಲಾಮಗಿರಿ ಸಂಕೋಲೆಯಲ್ಲಿ ಸಿಕ್ಕು ಹಾಕಿಕೊಳ್ಳಬೇಕಾಗುವುದು ಎಂಬ ಈ ಎಚ್ಚರಿಕೆಯನ್ನು ನಮ್ಮೊಳಗೆ ಯಾವತ್ತೂ ಜಾಗ್ರತವಾಗಿಟ್ಪುಕೊಂಡು ಮಂದೆ ಸಾಗುವ ಜರೂರು ಕಂಡು ಬರುತ್ತಿದೆ.

- ಮನು ಪತ್ತಾರ ಕಲಕೇರಿ
(ಕೃಪೆ: ಸೋಮಲಿಂಗ ಗೆಣ್ಣೂರು ಅವರ ಅಂಬೇಡ್ಕರ್ ಮಾರ್ಗ)

