ವಿಜಯಪುರ: ೨೦೨೨-೨೩ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಅಕ್ರಮ ನಡೆಯದಂತೆ ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಅವರು ಮಾತನಾಡಿ, ಸನ್ ೨೦೨೨-೨೩ನೇ ಸಾಲಿನ ಜಲಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಸರ್ಕಾರ ಪ್ರತಿಮನೆಗೆ ಶುದ್ಧ ಕುಡಿಯುವ ನೀರಿನ್ನು ಒದಗಿಸುವ ಉತ್ತಮ ಯೋಜನೆಯನ್ನು ಹಮ್ಮಿಕೊಂಡಿದೆ. ಆದರೆ ಸರ್ಕಾರಿ ಅಧಿಕಾರಿಗಳ ಮತ್ತು ಶಾಸಕರ ದಿವ್ಯ ನಿರ್ಲಕ್ಷದಿಂದಾಗಿ ಈಗಾಗಲೇ ಕೆಲವೊಂದು ಹಳ್ಳಿಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ ಇನ್ನು ಕೆಲವೊಂದು ಹಳ್ಳಿಗಳಲ್ಲಿ ಚಾಲನೆಗೊಳ್ಳುತ್ತಿದೆ. ಈ ಯೋಜನೆ ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸವಾಗುತ್ತಿದೆ. ಆದ್ದರಿಂದಾಗಿ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದು ದೇವರಹಿಪ್ಪರಗಿ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದರ ಮೂಲಕ ಬರಗಾಲದ ನಾಡಿಗೆ ಜೀವ ಜಲ ಒದಗಿಸಿದ ಪುಣ್ಯ ಸರ್ಕಾರಕ್ಕೆ ಮತ್ತು ಪ್ರಾಮಾಣಿಕ ಅಧಿಕಾರಿ ವರ್ಗಕ್ಕೆ ತಟ್ಟುತ್ತದೆ. ಜೀವ ಜಲದ ವಿಷಯದಲ್ಲಿ ಭ್ರಷ್ಟಾಚಾರದ ವಾಸನೆ ತಾಗದೆ ಪ್ರಾಮಾಣಿಕವಾದ ಕಾಯಕದಿಂದ ಈ ಯೋಜನೆ ಯಶಸ್ವಿಯಾಗಿ ಜನರ ಮನೆ ಮನಗಳಿಗೆ ಮುಟ್ಟುವಂತೆ ಮಾಡಬೇಕಾಗಿದೆ.
ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆಗಿರುವ ಜೆಜೆಎಂ (ಜಲಜೀವನ್ ಮಷೀನ್) ದೇಶದ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಪ್ರಜೆಗೂ ಶುದ್ಧ ಕುಡಿವಿನ ನೀರನ್ನು ಒದಗಿಸುವ ಮಹತ್ತರವಾದ ಯೋಜನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ ೨೦೨೪ರ ಹೊತ್ತಿಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಆದರೆ ಇಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಈ ಹಿಂದಿನ ವರ್ಷದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಪ್ರತಿಶತ ೯೦%ರಷ್ಟು ಈ ಯೋಜನೆ ದುರುಪಯೋಗಕ್ಕೆ ಒಳಗಾಗಿದೆ ಮತ್ತು ವ್ಯಾಪಕವಾದ ಭ್ರಷ್ಟಾಚಾರದಿಂದ ಕೂಡಿದೆ. ಸದ್ಯ ಶಾಸಕರು ಚಾಲನೆ ನೀಡುತ್ತಿರುವ ೨೦೨೨-೨೩ರ ಕಾಮಗಾರಿಗಳು ಗುಣಮಟ್ಟವನ್ನು ಕಾಯ್ದುಕೊಳ್ಳಲಿ ಮತ್ತು ಬರದ ನಾಡಿಗೆ ನೀರು ಒದಗಿಸಿದ ಪುಣ್ಯ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ತಟ್ಟಲಿ. ನಮ್ಮ ಭಾಗದ ಮಹಿಳೆಯರು ಒಂದರಿಂದ ಎರಡು ಕಿಲೋ ಮೀಟರ್ ದೂರದವರೆಗೆ ಬಿಂದಿಗೆಯನ್ನು ಹೊತ್ತುಕೊಂಡು ನೀರು ತರುವುದು ಸರ್ವೇಸಾಮಾನ್ಯವಾಗಿದೆ. ಯೋಜನೆಗಳು ಕೇವಲ ದಾಖಲೆಗಳಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಲಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ರಾಕೇಶ ಇಂಗಳಗಿ ಹಮೀದ್ ಇನಾಮದಾರ ಪ್ರವೀಣ ಕನಸೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

