ಅಯೋಧ್ಯಾ ಸಂಭ್ರಮೋತ್ಸವದ ಪ್ರಯುಕ್ತ ಜ.೧೮ರಿಂದ ಜ.೨೨ರ ವರೆಗೆ ಶುಲ್ಕರಹಿತ ಹೆರಿಗೆ ಕಾರ್ಯ
ವಿಜಯಪುರ: ಸ್ವಂತಕ್ಕೆ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ಎನ್ನುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತ ಒಂದು ವರ್ಷದ ಅವಧಿಯಲ್ಲಿಯೇ ಜನರ ಪ್ರೀತಿಗೆ ಪಾತ್ರವಾಗಿರುವ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನಿರ್ಮಿತ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇದೇ ತಿಂಗಳ ೨೨ ನೇ ತಾರಿಖಿನಂದು ಅಯೋಧ್ಯೆಯಲ್ಲಿ ಜರುಗಲಿರುವ ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಅಯೋಧ್ಯಾ ಸಂಭ್ರಮೋತ್ಸವನ್ನು ಆಚರಿಸಲಾಗುತ್ತಿದೆ.
ಅದರ ಪ್ರಯುಕ್ತ ನಗರ ಶಾಸಕ ಬಸನಗೌಡ ರಾ.ಪಾಟೀಲ್ ಯತ್ನಾಳ ಅವರ ಅಪೇಕ್ಷೆಯಂತೆ ಜ.೧೮ರಿಂದ ಜ.೨೨ರ ವರೆಗೆ ಐದು ದಿನಗಳ ಕಾಲ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಲ್ಲಿ ಹುಟ್ಟಿದ ಮಗುವನ್ನು ಶ್ರೀ ರಾಮ ಹಾಗೂ ಸೀತಾದೇವಿ ಪ್ರತಿರೂಪವೆಂದು ಪರಿಗಣಿಸಿ ಹೆರಿಗೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೆರವೇರಿಸಲಾಗುತ್ತದೆ. ಈ ಮೂಲಕ ಅಯೋಧ್ಯೆಯಲ್ಲಿ ಜರುಗುವ ರಾಮ ಮಂದಿರದ ಉದ್ಘಾಟನೆಯ ಸಮಯವನ್ನು ಮತ್ತಷ್ಟು ಸಾರ್ಥಕವಾಗಿಸಲಾಗುತ್ತಿದ್ದು ಅವಶ್ಯಕತೆಯುಳ್ಳ ರಾಮ ಭಕ್ತರು ಇದರ ಲಾಭ ಪಡೆದುಕೊಳ್ಳಬೇಕು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಈ ಸಂದರ್ಭದಲ್ಲಿ ಸರ್ವ ಹಿಂದೂಗಳ ಪರವಾಗಿ ನಾಡಿನ ಜನತೆಗೆ ಈ ಮೂಲಕ ಕೊಡುಗೆ ನೀಡಲಾಗುತ್ತಿದೆ ಎಂದು ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

