ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜೀವಕಿಶೋರ ಮಾಹಿತಿ
ಆಲಮಟ್ಟಿ: ಬದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ ನಾಲ್ಕು ರೈಲು ನಿಲ್ದಾಣಗಳನ್ನು ಅಮೃತ ರೈಲು ಯೋಜನೆಯಡಿ ಸೇರಿಸಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಗೊಂಡಿವೆ. ವಿಜಯಪುರ-ಬಾಗಲಕೋಟೆ ರೈಲು ನಿಲ್ದಾಣದ ಆಧುನೀಕರಣ ಮುಕ್ತಾಯ ಹಂತಕ್ಕೆ ಬಂದಿವೆ ಎಂದು ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜೀವಕಿಶೋರ ಹೇಳಿದರು.
ಆಲಮಟ್ಟಿಯ ರೈಲು ನಿಲ್ದಾಣಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅಮೃತ ರೈಲು ನಿಲ್ದಾಣದ ಕಾಮಗಾರಿ, ದ್ವಿಪಥ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಗದಗ-ಹೊಟಗಿ ಮಾರ್ಗದ ರೈಲ್ವೆ ಡಬಲಿಂಗ್ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಬಾಗಲಕೋಟೆ-ವಂದಾಲ ಮಧ್ಯೆ ಮಾತ್ರ ಬಾಕಿಯಿದೆ. ಆಲಮಟ್ಟಿ-ಬಾಗಲಕೋಟೆ ಮಧ್ಯೆ ಮೇ-೨೦೨೪ ಕ್ಕೆ ಪೂರ್ಣಗೊಳ್ಳಲಿದೆ, ಆಲಮಟ್ಟಿ-ವಂದಾಲ ಮಧ್ಯೆ ಬರುವ ಕೃಷ್ಣಾ ನದಿಯ ಸೇತುವೆ ಕಾಮಗಾರಿ ನಡೆದಿದೆ. ಅದು ಬಹುತೇಕ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು. ಆಲಮಟ್ಟಿ-ಗದಗ ಮಧ್ಯೆ ಎಲೆಕ್ಟ್ರಿಫಿಕೇಶನ್ ಕಾಮಗಾರಿಯೂ ಜೂನ್-೨೦೨೪ ಕ್ಕೆ ಪೂರ್ಣಗೊಳ್ಳಲಿದೆ ಎಂದರು.
ಆಲಮಟ್ಟಿಯಲ್ಲಿ ಮೂರು ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ರೈಲು ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮತಿ ಬಂದ ನಂತರ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಜಯಪುರ ರೈಲು ನಿಲ್ದಾಣದಲ್ಲಿ ಫಿಟ್ ಲೈನ್ ನಿರ್ಮಿಸಿ, ಅಲ್ಲಿ ಈ ಭಾಗದಲ್ಲಿ ಸಂಚರಿಸುವ ರೈಲುಗಳ ದುರಸ್ತಿ ಹಾಗೂ ನಿರ್ವಹಣೆ ಮತ್ತು ಹೊಸ ರೈಲುಗಳ ನಿರ್ವಹಣೆಯ ಕಾರ್ಯ ನಡೆಯಲಿದೆ. ಈ ಫಿಟ್ ಲೈನ್ ನಿರ್ಮಾಣದ ನಂತರ ಈ ಭಾಗದಲ್ಲಿ ರೈಲುಗಳ ಸಂಚಾರ ಹೆಚ್ಚಲಿದೆ ಎಂದರು.
ಆಲಮಟ್ಟಿ-ಯಾದಗೀರ ಹಾಗೂ ಆಲಮಟ್ಟಿ-ಚಿತ್ರದುರ್ಗ ನೂತನ ರೈಲು ಮಾರ್ಗ ನಿರ್ಮಾಣದ ಸಮೀಕ್ಷೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಸಮೀಕ್ಷೆ ಪೂರ್ಣಗೊಂಡ ನಂತರ ರೈಲು ಮಂಡಳಿಗೆ ಕಳುಹಿಸಲಾಗುವುದು ಎಂದು ಸಂಜೀವ ಕಿಶೋರ ತಿಳಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ರೈಲ್ವೆ ಡಿವಿಷನಲ್ ಮ್ಯಾನೇಜರ್ ಹರ್ಷ ಖರೆ, ಪ್ರಿನ್ಸಿಪಲ್ ಚೀಪ್ ಕಮರ್ಷಿಯಲ್ ಮ್ಯಾನೇಜರ್ ಎಸ್.ಪಿ.ಶಾಸ್ತ್ರಿ, ಮುಖ್ಯ ಆಡಳಿತಾಧಿಕಾರಿ ರಾಮಗೋಪಾಲ, ಬ್ರಹ್ಮಾನಂದಮ್, ವಿನಯಕುಮಾರ ಅಗರವಾಲ, ಸಂತೋಷ ಹೆಗಡೆ ಮತ್ತೀತರರು ಇದ್ದರು.

