ಶ್ರೀ ಸಿದ್ದೇಶ್ವರ ಜಾನುವಾರು ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಶಾಸಕ ಬಸನಗೌಡ ಯತ್ನಾಳ ಅಭಿಮತ
ವಿಜಯಪುರ: ವೈಜ್ಞಾನಿಕ ಕಾರಣಗಳಿಂದಲೇ ಋಷಿಮುನಿಗಳು, ಹಿರಿಯರು ಆಕಳನ್ನು ಗೋಮಾತೆ ಅಂದಿದ್ದಾರೆ. ಜೋಳ ಬೆಳೆಯುವುದು ಕಡಿಮೆ ಆಗಿದ್ದರಿಂದ, ಕ್ರಮೇಣ ಗೋ ಸಂಪತ್ತು ಕಡಿಮೆ ಆಗುತ್ತಿದ್ದು, ಮುಂದಿನ ಅಧಿವೇಶನದಲ್ಲಿ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ, ಕ್ವಿಂಟಲ್ ಗೆ ರೂ.5 ಸಾವಿರ ನಿಗದಿಪಡಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಹೇಳಿದರು.
ನಗರ ಮತಕ್ಷೇತ್ರ ವ್ಯಾಪ್ತಿಯ ತೊರವಿ ಸಮೀಪ ಸಿದ್ದೇಶ್ವರ ಸಂಕ್ರಮಣ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀ ಸಿದ್ದೇಶ್ವರ ಜಾನುವಾರು ಜಾತ್ರಾ ಮಹೋತ್ಸವದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದಾಗ ಈ ದೇಶದಲ್ಲಿ ಗಣತಿ ಪ್ರಕಾರ 120 ಕೋಟಿ ಪಶು ಸಂಪತ್ತು ಇತ್ತು. ಆಗ ಜನಸಂಖ್ಯೆ ಕೇವಲ 35 ಕೋಟಿ ಇದ್ದರೆ, ಇಂದು 150 ಕೋಟಿ ನಾವುಗಳಿದ್ದರೆ, 25 ಕೋಟಿಗೆ ಅವು ಬಂದಿವೆ. ಮೇವಿನ ಕೊರತೆಯೇ ಇದಕ್ಕೆ ಕಾರಣವಾಗಿದ್ದು, ಜೋಳ ಬೆಳೆದರೆ ಕಣಕಿ ಸಿಗುತ್ತದೆ, ಅದರಿಂದ ದನಗಳನ್ನು ಸಾಕಬಹುದು. ದನಗಳಿದ್ದರೆ ಗೊಬ್ಬರ ದೊರೆಯುತ್ತದೆ, ಜೋಳಕ್ಕೆ ಬೆಲೆ ಇಲ್ಲದ್ದರಿಂದ ಈ ಚೈನ್ ಕಳೆದುಕೊಂಡಿದ್ದು, ಮತ್ತೆ ಜೋಳ ಬೆಳೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಜೋಳಕ್ಕೆ ಕನಿಷ್ಠ 5 ಸಾವಿರ ಘೋಷಣೆಗೆ ಧ್ವನಿ ಎತ್ತಲಾಗಿತ್ತು. ಮತ್ತೆ ಬೆಂಗಳೂರು ಅಧಿವೇಶನದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಘೋಷಣೆ ಮಾಡಲು ಒತ್ತಾಯಿಸಲಾಗುವುದು ಎಂದರು.
ಪ್ರತಿಯೊಬ್ಬರೂ ಗೋವಿನ ಮಹತ್ವ ತಿಳಿದು, ಸಾಕುವುದು ಮತ್ತು ರಕ್ಷಣೆಯ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಅತ್ಯುತ್ತಮ ರಾಸುಗಳಿಗೆ 10 ಗ್ರಾಂ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಸೇರಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು, ಸಿಬ್ಬಂದಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಮತ್ತಿತರರು ಇದ್ದರು.

