ಜೆಜೆಎಂ ಕಾಮಗಾರಿಗೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಭೂಮಿಪೂಜೆ
ಕಲಕೇರಿ: ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಪ್ರತಿ ಹಳ್ಳಿಗಳ ಪ್ರತಿಯೊಂದು ಮನೆಮನೆಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಸದುದ್ದೇಶದಿಂದ ಜಲಜೀವನ ಮಿಷನ್ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿ ಕಲಕೇರಿ ಗ್ರಾಮಕ್ಕೆ ಅಂದಾಜು ೩ ಕೋಟಿ ೫೨ ಲಕ್ಷ ರೂ.ಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದು, ಗ್ರಾಮಸ್ಥರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೊಡಗಿ ಹೇಳಿದರು.
ರವಿವಾರ ಸಂಜೆ ನಡೆದ ಭಾರತ ಸರಕಾರ, ಕರ್ನಾಟಕ ಸರಕಾರ, ಜಿಪಂ ವಿಜಯಪುರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಿಂದಗಿ ಇವರ ೨೦೨೨-೨೩ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆಮನೆಗೆ ನಳ ಸಂಪರ್ಕ ಯೋಜನೆ ಕಾಮಗಾರಿಗೆ ಗ್ರಾಮದ ಶ್ರೀಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದ ಹತ್ತಿರ ಭೂಮಿಪೂಜೆ ನೆರವೇರಿಸಿ ನಂತರ ಮುಖ್ಯಬಜಾರದಲ್ಲಿ ನಡೆದ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ವೇಳೆ ಜೆಜೆಎಂ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿ, ಗುಣಮಟ್ಟದ ಕಾಮಗಾರಿಯನ್ನು ಕೈಕೊಳ್ಳುವುದರ ಜೊತೆಗೆ ಪ್ರತಿ ಮನೆಗೆ ನೀರಿನ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಮತ್ತು ಶಾಂತಗೌಡ ಪಾಟೀಲ, ಗ್ರಾಪಂ ಸದಸ್ಯ ನಬಿಲಾಲ ನಾಯ್ಕೋಡಿ ಮಾತನಾಡಿದರು.
ಈ ವೇಳೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಶಾಸಕರನ್ನು ಗೌರವಿಸಿ ಸನ್ಮಾನಿಸಿದರು.
ಗ್ರಾಪಂ ಅಧ್ಯಕ್ಷ ರಾಜಹಮ್ಮದ ಸಿರಸಗಿ, ಮಡುಸಾವಕಾರ ಬಿರಾದಾರ, ಸಂಗಾರಡ್ಡಿ ದೇಸಾಯಿ, ವ್ಹಿ.ಆರ್.ಝಳಕಿ, ಮಲಕಾಜಪ್ಪಗೌಡ ಬಿರಾದಾರ, ಸಾಯಬಣ್ಣ ಬಾಗೇವಾಡಿ, ಗುತ್ತಿಗೆದಾರ ಅಶೋಕ ಸಾಲಿಮಠ ಸೇರಿದಂತೆ ಇತರರು ಇದ್ದರು.

