ವಿಶೇಷ ಲೇಖನ
– ಸಂತೋಷ ಎಸ್ ಬಂಡೆ ಶಿಕ್ಷಕರು, ನಾಗಠಾಣ.

ಸಂಕ್ರಾಂತಿ ಹಬ್ಬವು ತುಂಬಾ ಮಹತ್ವವನ್ನು ಹೊಂದಿರುವಂತಹ ಹಬ್ಬವಾಗಿದೆ. ಈ ಹಬ್ಬವು ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಹಬ್ಬವು ಜನರೊಂದಿಗೆ ಬೆರೆಯುವ ಮೂಲಕ ಸಂತೋಷವನ್ನು ಹಂಚುವ ಹಬ್ಬವಾಗಿದೆ. ನಮ್ಮ ಜೀವನವನ್ನು ಹಾಗೂ ನಮ್ಮ ಜೊತೆ ಇದ್ದವರನ್ನು ಸಂತೋಷದಿಂದಿಡುವ ಹಬ್ಬವಾಗಿದೆ. ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುವ ಗುರಿಯನ್ನು ಕೂಡ ಹೊಂದಿದ ಹಬ್ಬವಾಗಿದೆ. ಈ ಹಬ್ಬವನ್ನು ಸಂತೋಷ, ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ.
ನಮ್ಮ ಆಹಾರ ಬೆಳೆಯುವ ಕೃಷಿ ಭೂಮಿಗೆ ಪ್ರತಿಯೊಬ್ಬರೂ ಕೃತಜ್ಞರಾಗಿರಬೇಕು ಎಂಬುದೇ ಈ ಹಬ್ಬದ ಸುಂದರ ಸಂದೇಶವಾಗಿದ್ದು, ಎಲ್ಲರ ನಡುವೆ ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯನ್ನು ಪಸರಿಸುವುದೇ ಹಬ್ಬದ ಸತ್ವವಾಗಿದೆ. ಈ ಹಬ್ಬದ ದಿನದಂದು ನೀವು ಎಲ್ಲೆಡೆ ಆಚರಣೆಗಳು, ಒಳ್ಳೆಯ ಆಹಾರ, ಹೊಸ ಬಟ್ಟೆ, ಸಂತೋಷ, ಸಂಭ್ರಮ, ಜನರನ್ನು ಭೇಟಿ ಮಾಡಿ ಶುಭಾಶಯ ಕೋರುವುದು ಮತ್ತು ಸಿಹಿ ವಿನಿಮಯ ಮಾಡಿಕೊಳ್ಳುವುದನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ನೋಡಲು ಸಾಧ್ಯ.
ಈ ದಿನದಂದು ರೈತರು ತಮ್ಮ ಕೃಷಿ ಭೂಮಿಯಲ್ಲಿ ಸೂರ್ಯ ದೇವನಿಗೆ ಬೆಳಕನ್ನು ಹೇರಳವಾಗಿ ಸುರಿಸುವಂತೆ ಪ್ರಾರ್ಥಿಸುತ್ತಾರೆ. ಸೂರ್ಯನ ಬೆಳಕು ಗಿಡಮರ ಬೆಳೆಗಳಿಗೆ ತುಂಬಾ ಒಳ್ಳೆಯದು. ಋತುವಿನ ಮೊದಲ ಸುಗ್ಗಿಯನ್ನು ಅವರ ಸುರಕ್ಷತೆ ಮತ್ತು ರಕ್ಷಣೆಗಾಗಿ ಕೃತಜ್ಞತೆಯ ಸಂಕೇತವಾಗಿ ಸೂರ್ಯ ದೇವರಿಗೆ ಅರ್ಪಿಸಲಾಗುತ್ತದೆ.ಇದು ಚಳಿಗಾಲದ ಉತ್ತುಂಗವಾಗಿರುವುದರಿಂದ, ಎಳ್ಳು ಮತ್ತು ಬೆಲ್ಲ ಆಧಾರಿತ ಸಿಹಿತಿಂಡಿಗಳನ್ನು ಸಾಮಾನ್ಯವಾಗಿ ಸೇವಿಸಲಾಗುತ್ತದೆ. ಈ ಎರಡು ಪದಾರ್ಥಗಳಲ್ಲಿ ಪೌಷ್ಟಿಕಾಂಶ ಸಮೃದ್ಧವಾಗಿದ್ದು ದೇಹಕ್ಕೆ ಉಷ್ಣತೆಯನ್ನು ನೀಡುತ್ತವೆ.ಈ ಹಬ್ಬದ ದಿನದಂದು “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಎಂಬ ಜನಪ್ರಿಯ ಮಾತುಗಳೊಂದಿಗೆ ಜನರು ಪರಸ್ಪರ ಶುಭಾಶಯ ಕೋರುತ್ತಾರೆ.
ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ.
ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದಿದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.
ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿದೆ.

*– ಸಂತೋಷ ಎಸ್ ಬಂಡೆ*
ಶಿಕ್ಷಕರು, ನಾಗಠಾಣ.

