ಜ.೧೩ ರಿಂದ ನಡೆಯುವ ಪ್ರದರ್ಶನ | ಉತ್ತಮ ಕೈತೋಟ, ತಾರಸಿತೋಟ ಪ್ರದರ್ಶನಕ್ಕೆ ಬಹುಮಾನ
ವಿಜಯಪುರ: ನಗರದ ತೋಟಗಾರಿಕೆ ಇಲಾಖೆಯ ಆವರಣದ ಬಸವವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ (ರಿ), ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಜಿಲ್ಲಾ ಹಾಪ್‌ಕಾಮ್ಸ್ ವಿಜಯಪುರ ಇವರ ಸಹಯೋದಲ್ಲಿ, ಜನವರಿ ೧೩ರಿಂದ ೧೫ರವರೆಗೆ ಮೂರು ದಿನಗಳ ಕಾಲ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನ ಕಾರ್ಯಕ್ರಮ ನಡೆಯಲಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ರಾಹುಲ ಬಾಗಲದೊಡ್ಡಿ ತಿಳಿಸಿದ್ದಾರೆ.
ವಿವಿಧ ಬಗೆಯ ಸಿರಿಧಾನ್ಯಗಳನ್ನು ಹಾಗೂ ವಿವಿಧ ಬಣ್ಣ-ಬಣ್ಣದ ಹೂಗಳನ್ನು ಬಳಸಿ ಶ್ರೀ ಸಿದ್ದೇಶ್ವರ ಶ್ರೀಗಳ ಪ್ರತಿಕೃತಿ ನಿರ್ಮಿಸಿ, ಶತಮಾನದ ಸಂತ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ನಮನ ಸಲ್ಲಿಸಲಾಗುತ್ತಿದೆ.ಅದರಂತೆ ಗಣಪತಿ, ನವಿಲು, ಪ್ರಾಣಿಗಳ ಆಕೃತಿಯ ಕಲಾಕೃತಿಯ ಪ್ರದರ್ಶನವೂ ಸಹ ನಡೆಯಲಿದೆ. ಈ ತೋಟಗಾರಿಕೆ ಅಭಿಯಾನದಲ್ಲಿ ಐತಿಹಾಸಿಕ ಚಂದ್ರಯಾನ-೩ರ ಯಶೋಗಾಥೆಯನ್ನು ಸಾರುವ ನಿಟ್ಟಿನಲ್ಲಿ ಫಲ-ಪುಷ್ಪಗಳಿಂದ ವಿಕ್ರಮ್ ಲ್ಯಾಂಡರ್‌ನ ಮಾದರಿಗಳನ್ನು ಸಿದ್ಧಪಡಿಸಲಾಗುತ್ತಿದೆ.
ಶಾಲಾ ಮಕ್ಕಳಿಗೆ ತರಬೇತಿ: ಈ ಮೇಳದಲ್ಲಿ ಫ್ರೌಡಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕೆ, ತಾರಸಿ ಕೃಷಿ, ಕೈತೋಟದ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ಸರಕಾರಿ ಶಾಲೆಯ ಆಯ್ದ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರಿಗೆ ತರಬೇತಿ ನೀಡುವುದರ ಜೊತೆಗೆ ವಿವಿಧ ತರಕಾರಿಯ ಬೀಜಗಳು, ಸಸಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ.
*ಉತ್ತಮ ಕೈತೋಟ, ತಾರಸಿತೋಟ ಪ್ರದರ್ಶನಕ್ಕೆ ಬಹುಮಾನ:*
ಜಿಲ್ಲೆಯ ನಾಗರಿಕರು ತಮ್ಮ ಮನೆಯಲ್ಲಿ ಕೈತೋಟ, ತಾರಸಿ ತೋಟ ಹಾಗೂ ಬೋನ್ಸಾಯ್ ಬೆಳೆದ ಸಾರ್ವಜನಿಕರು ತಾವು ಬೆಳೆದ ಬೆಳೆಗಳೊಂದಿಗೆ ಜಿಲ್ಲಾ ತೋಟಗಾರಿಕೆ ಇಲಾಖೆಯಲ್ಲಿ ಜ.೧೪ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಇಲಾಖೆಯಿಂದ ಐದು ಜನರ ತಂಡ ನೊಂದಣಿ ಮಾಡಿಕೊಂಡವರ ಮನೆಗಳಿಗೆ ತೆರಳಿ ವೀಕ್ಷಣೆ ಮಾಡಲಿದೆ. ಅತ್ಯುತ್ತಮ ಕೈ ತೋಟ, ತಾರಸಿ ತೋಟ ಬೊನ್ಸಾಯ್ ಬೆಳೆದವರಿಗೆ ಬಹುಮಾನ ಸಹ ನೀಡಲಾಗುವುದು.
ಜಲಕೃಷಿಯ ಪ್ರದರ್ಶನ: ಸಾರ್ವಜನಿಕರು ತಮ್ಮ ಮನೆಯಲ್ಲಿ, ತಾರಸಿಯಲ್ಲಿ ತಾವೇ ಕೃಷಿ ಮಾಡಬಹುದು ಎಂಬುದನ್ನು ಪ್ರೇರೆಪಣೆ ನೀಡಲು ಹೈಡ್ರೋಪೋನಿಕ್ಸ್ ಜಲಕೃಷಿ (ಮಣ್ಣು ರಹಿತ) ಪ್ರದರ್ಶನ ನಡೆಯಲಿದೆ.
ಮನೆಯಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್, ಕೈಚೀಲ, ಪೈಪ್, ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಸಿಕೊಂಡು ಕೇವಲ ನೀರನ್ನು ಉಪಯೋಗಿಸಿ, ಮಣ್ಣು ರಹಿತ ಕೃಷಿ ಹೇಗೆ ಮಾಡಬಹುದು ಎಂಬುದರ ಸಮಗ್ರ ಮಾಹಿತಿ ಈ ಮೇಳದಲ್ಲಿ ನೀಡಲಾಗುವುದು.
*ಲಿಂಬೆ ಬೆಳೆಗಾರರ ವಿಚಾರ ಸಂಕಿರಣ:*
ವಿಜಯಪುರ ಜಿಲ್ಲೆಯೂ ಲಿಂಬೆಯ ನಾಡು ಎನಿಸಿಕೊಂಡಿದೆ. ಇಲ್ಲಿ ಬೆಳೆಯುವ ಲಿಂಬೆಗೆ ಜಿಆಯ್ ಟ್ಯಾಗ್ ಲಭಿಸಿದೆ. ಲಿಂಬೆ ಬೆಳೆಯ ಮಾರಾಟ, ರಫ್ತು, ಮೌಲ್ಯವರ್ಧನೆ, ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಮೇಳದಲ್ಲಿ ಲಿಂಬೆ ಬೆಳೆಗಾರರ ವಿಚಾರ ಸಂಕಿರಣ ನಡೆಯಲಿದೆ.
*ಮಳಿಗೆಗಳ ವಿವರಗಳು:*
ತೋಟಗಾರಿಕೆ ಮೇಳದಲ್ಲಿ ಸುಮಾರು ೪೫ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಜಿಲ್ಲೆಯ ವಿವಿಧ ರೈತರು ತಮ್ಮ ತೋಟದಲ್ಲಿ ಬೆಳೆದಂತಹ ಹಣ್ಣು, ತರಕಾರಿಗಳ ಪ್ರದರ್ಶನವನ್ನು ಮಾಡಲಿದ್ದಾರೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್‌ನ ಮಳಿಗೆಗಳು ಸಹ ಇರಲಿವೆ. ಯಂತ್ರೋಪಕರಣಗಳ ಮಳಿಗೆಗಳಲ್ಲಿ, ಟ್ರಾಕ್ಟರ್, ರೋಟೋವೇಟರ್, ಸ್ಪ್ರೆಯರ್, ವೀಡರ್ ನಂತಹ ಕೃಷಿ ಸಲಕರಣೆಗಳ ಪ್ರರ್ದಶನ ಮತ್ತು ಮಾರಾಟ ಮಳಿಗೆ ಸಹ ಸ್ಥಾಪಿಸಲಾಗುವುದು. ಸಿಸಿ ಕ್ಯಾಮರಾ, ಸೋಲಾರ್ ಪಂಪ್‌ಸೆಟ್ ಪ್ರದರ್ಶನವು ಇರಲಿದೆ.
ಕೃಷಿಹೊಂಡ, ಬೆಳೆಗಳ ರಕ್ಷಣೆಗೆ ಹಾಗೂ ಮಲ್ಚಿಂಗ್ ಮಾಡಲು ಫಾಲಿಥೀನ್ / ತಾಡಪತ್ರೆ ಪ್ರದರ್ಶನ ಹಾಗೂ ಮಾರಾಟ, ರೈತ ಉತ್ಪಾದಕ ಸಂಘದಿಂದ ತೋಟಗಾರಿಕೆ ಬೆಳೆಗಳಿಂದ ಹಲವು ಬಗೆಯ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮಾರಾಟವು ನಡೆಯಲಿದೆ.ಈ ಮಳಿಗೆಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಹಣ್ಣುಗಳಿಂದ ಒಣದ್ರಾಕ್ಷಿ, ಉಪ್ಪಿನಕಾಯಿ, ಚಿಪ್ಸ್, ಬೆಲ್ಲ, ಸಾಸ್ ತಯಾರಿಸಿ ಲಾಭ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಪ್ರದರ್ಶನದಲ್ಲಿ ತಿಳಿಸಿಕೊಡುವ ಮೂಲಕ ಮಾಹಿತಿ ನೀಡಲಾಗುವುದು. ವಿವಿಧ ಬ್ಯಾಂಕ್‌ಗಳಲ್ಲಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಯತ್ರೋಪಕರಣಗಳ ಸಾಲದ ಮಾಹಿತಿ, ಠೇವಣಿ, ಇನ್ಸೂರೆನ್ಸ್ ಬಗ್ಗೆ ತಿಳುವಳಿಕೆ ಮೂಡಿಸುವ ಮಳಿಗೆಗಳು ಲಭ್ಯ ಇರಲಿವೆ.
ಸಂಕ್ರಾಂತಿ ಹಬ್ಬ ಇರುವುದರಿಂದ ಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಹಬ್ಬಕ್ಕೆ ಬೇಕಾಗುವ ಕಬ್ಬು, ಎಳ್ಳು, ಸುಲಗಾಯಿ, ಬೆಲ್ಲ ವಿವಿಧ ರೀತಿಯ ಪದಾರ್ಥಗಳನ್ನು ಮೇಳದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ನೀರಿನ ನಿರ್ವಹಣೆ, ತೇವಾಂಶ, ಗಾಳಿ, ಮಳೆಯ ವಾತಾವರಣ ತಿಳಿಸುವ ಉಪಕರಣದ ಪ್ರದರ್ಶನ, ಮಾವು, ಪೇರು, ತೆಂಗು, ಚಿಕ್ಕು ತೋಟಗಾರಿಕೆ ಸಸಿಗಳ ಪ್ರದರ್ಶನ ಹಾಗೂ ಮಾರಾಟವು ಇರಲಿದೆ.
ಜಿಲ್ಲೆಯು ವಿವಿಧ ಹಣ್ಣು ಹಾಗೂ ತರಕಾರಿ ಬೆಳೆಯುವ ಪ್ರದೇಶವಾಗಿರುವುದರಿಂದ ರೈತರಿಗೆ ಹಲವು ವೈಜ್ಞಾನಿಕ ಮಾಹಿತಿಗಳನ್ನು ನೀಡಲಾಗುತ್ತದೆ. ಕಡಿಮೆ ನೀರಿನಲ್ಲಿ ತೋಟಗಾರಿಕೆ ಮಾಡುವುದು, ರೋಗರುಜಿನಗಳ ನಿರ್ವಹಣೆ, ಮಾರುಕಟ್ಟೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
