ಆಲಮಟ್ಟಿ: ಇಲ್ಲಿಯ ವಿವಿಧ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಕಾರ್ಮಿಕರಿಗೆ ಆರು ತಿಂಗಳಿಂದ ವೇತನ ಪಾವತಿ ಮಾಡದಿರುವುದನ್ನು ಖಂಡಿಸಿ ಅರಣ್ಯ ದಿನಗೂಲಿಗಳು ಮಂಗಳವಾರ ಇಲ್ಲಿ ಪ್ರತಿಭಟಿಸಿದರು.
ರಾಕ್ ಉದ್ಯಾನದಿಂದ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ ೧೦೦ ಕ್ಕೂ ಹೆಚ್ಚು ಕಾರ್ಮಿಕರು ಮೆರವಣಿಗೆ ನಡೆಸಿ ವೇತನ ವಿಳಂಬ ಧೋರಣೆ ಖಂಡಿಸಿದರು.
ಮುಖ್ಯ ಎಂಜಿನಿಯರ್ ಕಚೇರಿ ಎದುರು ಸಂಜೆಯವರೆಗೂ ಪ್ರತಿಭಟನೆ ನಡೆಸಿದ ನೂರಾರು ಕಾರ್ಮಿಕರು ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ, ಇದರಿಂದ ನಮ್ಮ ನಿತ್ಯ ಜೀವನದ ಸಾಗಿಸುವುದು ದುಸ್ತರವಾಗಿದೆ ಎಂದು ನೊಂದು ನುಡಿದರು.
ಪ್ರತಿಭಟನೆ ಮಾಡಿದಾಗಷ್ಟೇ ನಮಗೆ ವೇತನವಾಗುತ್ತದೆ, ಇಲ್ಲದಿದ್ದರೇ ನಮ್ಮ ಗೋಳು ಕೇಳುವವರೂ ಯಾರೂ ಇಲ್ಲ ಎಂದರು.
ಕಳೆದ ೨೦ ವರ್ಷಗಳಿಂದ ಇಲ್ಲಿ ಕನಿಷ್ಠ ಕೂಲಿಗಾಗಿ ದುಡಿಯುತ್ತಿದ್ದೇವೆ, ಉದ್ಯಾನವನ ನಿರ್ಮಾಣ, ನಿರ್ವಹಣೆಯಲ್ಲಿ ನಮ್ಮ ಪಾತ್ರ ಅಧಿಕ, ಇಂತಹ ಪರಿಸ್ಥಿತಿಯಲ್ಲಿ ಆರು ತಿಂಗಳಿಂದ ವೇತನ ಆಗಿಲ್ಲ ಎಂದರೇ ನಮ್ಮ ಜೀವನ ನಿರ್ವಹಣೆ ಹೇಗೆ? ಎಂದು ಅವರು ಪ್ರಶ್ನಿಸಿದರು.
*ಬಾರದ ಮುಖ್ಯ ಎಂಜಿನಿಯರ್:*
ಮುಖ್ಯ ಎಂಜಿನಿಯರ್ ಕಚೇರಿಯ ಎದುರು ಸಂಜೆಯವರೆಗೂ ಕುಳಿತರೂ ಆಲಮಟ್ಟಿಯಲ್ಲಿದ್ದರೂ ಮುಖ್ಯ ಎಂಜಿನಿಯರ್ ಸೇರಿದಂತೆ ಯಾವೊಬ್ಬ ಕೆಬಿಜೆಎನ್ ಎಲ್ ಅಧಿಕಾರಿಗಳು ಇವರ ಸಮಸ್ಯೆ ಆಲಿಸಲಿಲ್ಲ.
ಅಧಿಕಾರಿಗಳ ನಿರ್ಲಕ್ಷ, ದೊರೆಯದ ಭರವಸೆಯಿಂದ ರೊಚ್ಚಿಗೆದ್ದ ಕಾರ್ಮಿಕರು ಕೊನೆಗೆ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದರು. ಮಂಗಳವಾರ ಸಂಜೆಯಿಂದ ಅಲ್ಲಿಯೇ ಟೆಂಟ್ ಹೊಡೆದು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಧರಣಿಯಲ್ಲಿ ಅರಣ್ಯ ದಿನಗೂಲಿ ಕಾರ್ಮಿಕರಾದ ಮಲ್ಲಿಕಾರ್ಜುನ ಎಚ್.ಟಿ, ಲಕ್ಷ್ಮಣ ಬ್ಯಾಲ್ಯಾಳ, ಯಮನಪ್ಪ ತುಬಾಕಿ, ದ್ಯಾಮಣ್ಣ ಬಿರಾದಾರ, ಮಹೇಶ ತೆಲಗಿ, ಸತೀಶ ಮುಕಾರ್ತಿಹಾಳ, ರಮೇಶ ಅಸ್ಕಿ, ನಿಜವ್ವ ಗಾಂಜಿ, ಯಲ್ಲವ್ವ ಗುರುವರ ಮಕಬೂಲ್ ಬಾಗವಾನ, ರಫೀಕ್ ಅಥಣಿ, ಮಹೇಶ ತೆಲಗಿ, ಸುನಿತಾ ಚವ್ಹಾಣ ಮತ್ತೀತರರು ಇದ್ದರು.
*ಉದ್ಯಾನ ಬಂದ್:*
ದಿನಗೂಲಿ ಕಾರ್ಮಿಕರ ಪ್ರತಿಭಟನೆಯ ಕಾರಣ, ಆಲಮಟ್ಟಿಯ ರಾಕ್ ಉದ್ಯಾನ, ಕೃಷ್ಣಾ ಉದ್ಯಾನ, ಲವಕುಶ ಉದ್ಯಾನ ಸಂಪೂರ್ಣ ಬಂದ್ ಮಾಡಲಾಗಿತ್ತು. ಉದ್ಯಾನ ನಿರ್ವಹಣೆಯಿಲ್ಲದೇ ರಸ್ತೆಯುದ್ದಕ್ಕೂ ಉದುರಿದ ಎಲೆಗಳ ಕಸದ ರಾಶಿಯೇ ಬಿದ್ದಿತ್ತು. ಅದನ್ನು ತೆಗೆಯುವವರೂ ಯಾರೂ ಇರಲಿಲ್ಲ.
Subscribe to Updates
Get the latest creative news from FooBar about art, design and business.
Related Posts
Add A Comment

