ದೇವಾಂಗ ಸಂಘದ ಪದಾಧಿಕಾರಿಗಳ ಆಯ್ಕೆ & ಸಂಘಟನಾ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ ಅಭಿಮತ
ಮುದ್ದೇಬಿಹಾಳ: ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಸಂಘಟನೆ ಪ್ರಮುಖ ಅಸ್ತ್ರವಾಗಿದ್ದು ಸಂಘಟಿತರಾದಾಗ ಮಾತ್ರ ನಮಗೆ ಸೌಲಭ್ಯಗಳು ದೊರಕಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ದೇವಾಂಗ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ ಹೇಳಿದರು.
ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ದೇವಾಂಗ ಸಂಘದ ತಾಲ್ಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.
ಒಳಪಂಗಡಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಒಟ್ಟುಗೂಡಿಸಿ ನೇಕಾರ ಸಮುದಾಯದ ಹೆಸರಿನಲ್ಲಿ ಸಂಘಟನೆ ಬಲಗೊಳಿಸಬೇಕಿದೆ ಎಂದರು.
ಹಂಪಿ ಶ್ರೀ ಗಾಯತ್ರಿ ಮಹಾಸಂಸ್ಥಾನ ಮಠದ ಟ್ರಸ್ಟಿ ನಾಗೇಶ ಭಾವಿಕಟ್ಟಿ, ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ ಮಾತನಾಡಿ, ದೇವಾಂಗ ಸಮಾಜದ ಬಾಂಧವರು ಸಂಕಷ್ಟದಲ್ಲಿದ್ದಾಗ, ಮಕ್ಕಳಿಗೆ ಶಿಕ್ಷಣದ ಸಲುವಾಗಿ ಸಹಾಯ ಬೇಕಾದಾಗ ಸಮಾಜದ ಸಂಘಟನೆ ಅಗತ್ಯವೆನಿಸುತ್ತದೆ. ಜಿಲ್ಲೆಯ ಸಮುದಾಯದ ಬಾಂಧವರಲ್ಲಿ ಸಂಘಟನೆಯ ಬಗ್ಗೆ ಜಾಗೃತಿ ಮೂಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಕುಮಾರ್ ಕೋಷ್ಠಿ, ಬಾಗಲಕೋಟ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ, ಸಂಘದ ನೂತನ ತಾಲೂಕಾಧ್ಯಕ್ಷ್ಷ ಚೆನ್ನಬಸ್ಸು ಗುಡ್ಡದ, ಗೌರವಾಧ್ಯಕ್ಷ ಬಸವರಾಜ ಪಣೇಗೋಳ ಮಾತನಾಡಿದರು.
ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷ ಬಸವರಾಜ ರೂಢಗಿ, ತಾಲೂಕಾ ದೇವಾಂಗ ನೌಕರರ ಸಂಘದ ಅಧ್ಯಕ್ಷ ಶ್ರೀಶೈಲ ಭಾವಿಕಟ್ಟಿ, ದೇವಾಂಗ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಎಸ್.ಪ್ಯಾಟಿಗೌಡರ, ದೇವಾಂಗ ಸಮಾಜ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಮುತ್ತಣ್ಣ ಪ್ಯಾಟಿಗೌಡರ, ವಿಜಯಪುರ ನಗರ ದೇವಾಂಗ ಸಂಘದ ಅಧ್ಯಕ್ಷ ಪ್ರಸಾದ ಬಸರಕೋಡ, ಸಮಾಜದ ಗಣ್ಯರಾದ ಮಲ್ಲಪ್ಪ ಹೆಬ್ಬಾಳ, ಸುಭಾಷ ರುದ್ರಗಂಟಿ, ಮಲ್ಲಪ್ಪ ಮುದ್ದೇಬಿಹಾಳ, ಬಸಪ್ಪ ಹುಣಶ್ಯಾಳ, ಎಂ.ಎಸ್.ಗೋಡ್ಯಾಳ, ಸಂಗಣ್ಣ ಡಂಬಳ, ಗುರು ಗುಡಗುಂಟಿ ಸೇರಿದಂತೆ ಮತ್ತೀತರರು ಇದ್ದರು.
ಜಿ.ಟಿ.ಮಂಗಳೂರು ಸ್ವಾಗತಿಸಿ ನಿರೂಪಿಸಿದರು. ಶಂಕರ ಹೆಬ್ಬಾಳ ಹಾಗೂ ಶಿವು ಪ್ಯಾಟಿಗೌಡರ ನಿರ್ವಹಿಸಿದರು. ವಿರೇಶ ಮಾಶೆಟ್ಟಿ ವಂದಿಸಿದರು.

