ಆಲಮಟ್ಟಿಯ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ
ಆಲಮಟ್ಟಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ. ಎಲ್ಲಾ ೨೮ ಕ್ಷೇತ್ರದಲ್ಲೂ ಗೆಲುವಿನ ಯಶಸ್ವಿಗಾಗಿ ಈಗಿನಿಂದಲೇ ತಮ್ಮ ಬಿಜೆಪಿ ಪಕ್ಷ ಅಗತ್ಯ ಕಾರ್ಯತಂತ್ರ ರೂಪಿಸುತ್ತಿದ್ದು ಆ ಗುರಿ ತಲುಪುವ ಆಚಲ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನುಡಿದರು.
ಆಲಮಟ್ಟಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉತ್ತರಕರ್ನಾಟಕ ಅಭಿವೃದ್ಧಿಗೆ ನಮ್ಮ ತಂದೆ ಯಡಿಯೂರಪ್ಪ ಹಾಗೂ ಬಿಜೆಪಿಯ ಕೊಡುಗೆ ಅಪಾರ ಎಂದರು.
ಕಾಂಗ್ರೆಸ್ ಸರ್ಕಾರ ಕೇವಲ ಶಂಕುಸ್ಥಾಪನೆ ಮಾಡುತ್ತದೆ, ಆದರೆ ಆ ಕೆಲಸ ಪೂರ್ಣಗೊಳಿಸುವುದಿಲ್ಲ, ಆದರೆ ಬಿಜೆಪಿ ಶಂಕುಸ್ಥಾಪನೆ ಜತೆಗೆ ಕಾಮಗಾರಿ ಪೂರ್ಣಗೊಳಿಸಿ ಅದರ ಉದ್ಘಾಟನೆಯನ್ನು ಮಾಡುತ್ತದೆ, ಉತ್ತರಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ, ಬಸವಕಲ್ಯಾಣ ಅಭಿವೃದ್ಧಿ, ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಸೇರಿದಂತೆ ಪ್ರತಿಯೊಂದಕ್ಕೂ ಯಡಿಯೂರಪ್ಪನವರು ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿ ಮಾಡಿದ್ದಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ೨೮ ಕ್ಷೇತ್ರಗಳಲ್ಲಿ ಗೆಲ್ಲಲು ಅಗತ್ಯ ಕಾರ್ಯತಂತ್ರ ರೂಪಿಸುತ್ತಿದೆ, ಆ ಗುರಿ ತಲುಪುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎ.ಎಸ್. ಪಾಟೀಲ (ನಡಹಳ್ಳಿ), ಮುರಗೇಶ ನಿರಾಣಿ, ಮುಖಂಡರಾದ ಶಿವಾನಂದ ಅವಟಿ, ಚಂದ್ರಶೇಖರ ಬೆಳ್ಳುಬ್ಬಿ, ಡಾ ಸಂಗಮೇಶ ಗೂಗಿಹಾಳ, ಡಾ ಸಂತೋಷ ಬಸರಕೋಡ, ಚಂದ್ರಸೇನ ದೇಸಾಯಿ,ಬಸವರಾಜ ದಂಡೀನ ಮತ್ತಿತರರು ಇದ್ದರು.

