ಮಂಡ್ಯ ಮಂಜುನಾಥ ಉಡುಪ
ಬಲ ಹೆಟ್ಟೋ, ಬುದ್ದಿ ಹೆಚೋ ಎಂಬ ವಿಷಯದಲ್ಲಿ ಒಮ್ಮೆ ಸಿಂಹಕ್ಕೂ ನರಿಗೂ ತುಂಬ ಚರ್ಚೆ ನಡೆಯಿತು. ಬಲಕ್ಕಿಂತ ಬುದ್ದಿಯೇ ಹೆಚ್ಚು ಎಂದು ನರಿ ವಾದಿಸಿತು. ಅಷ್ಟೇ ಅಲ್ಲ, ತನ್ನ ಆ ಹೇಳಿಕೆಯನ್ನು ಸಮರ್ಥಿಸಿ ತೋರಿಸಲೂ ಅದು ಸಿದ್ಧವಿತ್ತು. ನರಿಯ ಮಾತಿನ ಸರಣಿ ಸಿಂಹಕ್ಕೆ ಹಿಡಿಸಿತು.
ನರಿಯ ಹೇಳಿಕೆ ನಿಜವಿರಲೂಬಹುದೆಂದು ಅದಕ್ಕೆ ಅನ್ನಿಸತೊಡಗಿತು.
ಹೀಗಿರುತ್ತ ಒಮ್ಮೆ ಅವು ಬೇಟೆಗೆಂದು ಹೊರಟವು.
ನರಿ ತನ್ನ ಹೇಳಿಕೆಯ ಸಮರ್ಥನೆಗಾಗಿ ಒಂದು ಯೋಜನೆ ಹಾಕಿತು. ಸಿಂಹ ಸತ್ತು ಬಿದ್ದಂತೆ ನಟಿಸಬೇಕು. ಇತರ ಪ್ರಾಣಿಗಳು ಸಮೀಪಿಸಿದಾಗ ಧುತ್ತೆಂದು ಎದ್ದು ನಿಂತು ಅವುಗಳ ಮೇಲೆ ಆಕ್ರಮಣ ನಡೆಸಬೇಕು, ಇದು ನರಿಯಯೋಜನೆ.
ಸರಿ, ಸಿಂಹ ಸತ್ತಂತೆ ಬಿದ್ದು ಕೊಂಡಿತು. ನರಿ ಪಕ್ಕದ
ಪೊದೆಯಲ್ಲಿ ಅಡಗಿಕೊಂಡಿದ್ದು ಸಿಂಹಕ್ಕೆ ಸೂಚನೆಗಳನ್ನು ಕೊಡುತ್ತಿತ್ತು. ಅಷ್ಟರಲ್ಲಿ ಆನೆಗಳ ಒಂದು ಹಿಂಡು ಧಾವಿಸುತ್ತ ಬರುವುದು ಕಾಣಿಸಿತು. ಸಿಂಹ ಸಹಜವಾಗಿ ಇಂಥ ಸಂದರ್ಭದಲ್ಲಿ ಎದ್ದು ನಿಲ್ಲಬೇಕು. ಆದರೆ ನರಿ ಅದಕ್ಕೆ ಏಳಬೇಡವೆಂದು ಸೂಚಿಸಿತು. ಆನೆಗಳ ಹಿಂಡು ತೀರ ಹತ್ತಿರ ಬರಲಿ, ಆಗ ಮಿಂಚಿನಂತೆ ಅವುಗಳ ಮೇಲೆ ಎರಗಿದರೆ ಆಯಿತು. ನೀನೀಗ ಏನೂ ಚಿಂತಿಸದೆ ಹಾಗೇ ಬಿದ್ದು
ಕೊಂಡಿರು,” ಎಂದಿತು ನರಿ. ಸಿಂಹಕ್ಕೆ ಉಪಾಯವಿಲ್ಲ. ಬುದ್ದಿಯ ಹಿರಿಮೆಯನ್ನು ಬಲದೊಂದಿಗೆ ಹೋಲಿಸುವ ಸ್ಪರ್ಧೆ ನಡೆಯುತ್ತದೆ ತಾನೇ? ಇಷ್ಟು ಹೊತ್ತಿಗೆ ಆನೆಗಳ ಹಿಂಡು ಮುಂದು ಮುಂದಕ್ಕೆ ನುಗ್ಗಿ ಬಂತು. ಅದನ್ನು ನೋಡಿದ ನರಿ ಕಾಲಿಗೆ ಬುದ್ದಿ ಹೇಳಿತು. ಪಾಪ! ಸಿಂಹ ಏಳಬೇಕೆನ್ನುವಷ್ಟರಲ್ಲಿ ಧಾವಿಸಿ ಬಂದ ಆನೆಗಳು ಅದನ್ನು ಕಚಪಚ ತುಳಿದುಹಾಕಿದುವು.
ಬೆಣ್ಣೆ ತೂಗುವವ ಸುಣ್ಣ ತೂಗುವವನ ಅಭಿಪ್ರಾಯವನ್ನು ನಂಬಿ ಕೂಡಬಾರದು, ಅಲ್ಲವೆ ?