ವಿಜಯಪುರ: ನಗರದ ಚಿಕ್ಕಮಕ್ಕಳ ತಜ್ಞ ಡಾ. ಎಲ್.ಎಚ್.ಬಿದರಿಯವರ ೪೦ ವರ್ಷಗಳ ವೈದ್ಯಕೀಯ ಸೇವೆಯ ಗರಿಯಲ್ಲಿ ಇನ್ನೊಂದು ಗರಿ ಸೇರ್ಪಡೆಯಾಗಲಿದ್ದು, ಎಚ್.ಟಿ.ಬಿದರಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ “ಡಾ.ಬಿದರಿ ಚೈಲ್ಡ್ ಅಕಾಡೆಮಿ”ಯು ಇದೇ ರವಿವಾರ ನವ್ಹೆಂಬರ್ ೧೯ರಂದು ಸಂಜೆ ೫ ಗಂಟೆಗೆ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಲೋಕಾರ್ಪಣೆಯಾಗಲಿದೆ.
ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಅಪ್ಪಾಜಿ ನಾಡಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿ.ಪಂ. ಸಿ.ಇ.ಓ.ರಾಹುಲ್ ಶಿಂಧೆ, ಮಕ್ಕಳ ಹಕ್ಕುಗಳ ವಿಶ್ವ ರಾಯಭಾರಿ ಶ್ರೀಮತಿ ವನಿತಾ ತೊರವಿ ಆಗಮಿಸಲಿದ್ದಾರೆ. ಈ ವೇದಿಕೆಯ ಕುರಿತು ಹೆಚ್ಚಿನ ಮಾಹಿತಿ ನೀಡಿದ ಡಾ|| ಎಲ್.ಎಚ್.ಬಿದರಿಯವರು ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳು, ಮಕ್ಕಳಲ್ಲಿ ಹುದುಗಿರುವ ಕಲೆಗಳನ್ನು ಗುರುತಿಸಲು ರಸಪ್ರಶ್ನೆಗಳು, ಚಿತ್ರಕಲೆ, ಪೇಂಟಿಂಗ್, ರಂಗೋಲಿ, ಪ್ರಬಂಧಗಳು, ನೃತ್ಯ, ಗಾಯನ, ಸಾಮಾನ್ಯ ಜ್ಞಾನ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುವುದು, ಅಲ್ಲದೆ ಪ್ರೇರಣೆ ನೀಡುವ ಮಾತುಗಳು, ಭಾಷಣ ಕಲೆ, ವಾತಾವರಣದ ಅರಿವು ಮೂಡಿಸುವುದು, ಹದಿಹರೆಯದ ಸಮಸ್ಯೆಗಳು, ಆತ್ಮಹತ್ಯೆ ಪ್ರವೃತ್ತಿಗಳು, ಪರೀಕ್ಷೆಯ ಭಯ, ವೈಫಲ್ಯತೆಗಳು, ನಾಯಕತ್ವ ಗುಣಗಳು ಇದಲ್ಲದೆ ಬೇಸಿಗೆ ರಜೆಯಲ್ಲಿ ಟೆನಿಸ್, ಈಜು, ಚೆಸ್ ಮುಂತಾದ ಆಟಗಳ ತರಬೇತಿ, ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯವಂತ ಶಿಶುಗಳ ಬೆಳವಣಿಗೆ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ದತ್ತು ತೆಗೆದುಕೊಳ್ಳುವಿಕೆ, ವಿಜಯಪುರ ನಗರದ ಸರ್ಕಾರಿ ಶಾಲೆ ನಂ. ೫ನ್ನು ದತ್ತು ತೆಗೆದುಕೊಳ್ಳುವುದು, ವಿದ್ಯಾರ್ಥಿ ವೇತನ ನೀಡುವುದು ಹೀಗೆ ಮುಂತಾದ ಯೋಜನೆಗಳನ್ನು ಹಾಕಿಕೊಂಡಿದ್ದು, ಇದರಡಿಯಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು ಮೊದಲ ಹಂತದಲ್ಲಿ ೮ ರಿಂದ ೧೬ ವರ್ಷದ ಮಕ್ಕಳಿಗಾಗಿ “ಲಿಟಲ್ ಸಿಂಗಿಂಗ್ ಸ್ಟಾರ‍್ಸ್” ಗಾಯನ ಸ್ಪರ್ಧೆಯಲ್ಲಿ ಸುಮಾರು ೧೮೦ ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುತ್ತಾರೆ ಹಾಗೂ ಅದರಲ್ಲಿ ಫಿನಾಲೇ ಸುತ್ತಿನಲ್ಲಿ ೧೬ ಮಕ್ಕಳು ತಮ್ಮ ಗಾನಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಜೋಗಿ ಸುನಿತಾ ಅವರು ನಿರ್ಣಾಯಕರಾಗಿ ಆಗಮಿಸಲಿದ್ದಾರೆ. ಅದೇ ರೀತಿ “ಆರ್ಟಬೀಟ್ ಚಿತ್ರಕಲಾ ಸ್ಪರ್ಧೆ”ಯಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಆಯ್ದ ಅತ್ಯುತ್ತಮ ಚಿತ್ರಗಳನ್ನು ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಪ್ರದರ್ಶಿಸಲಾಗುವುದು. ಈ ಕಲಾಕೃತಿಗಳನ್ನು ಸಾರ್ವಜನಿಕರು ಗೌರವಧನ ನೀಡಿ ಖರೀದಿಸಬಹುದಾಗಿದೆ.
ಇದಲ್ಲದೆ “ಮಕ್ಕಳಲ್ಲಿ ನೈತಿಕ ಮೌಲ್ಯಗಳು” ಕುರಿತು ವಿಶೇಷ ಪ್ರಬಂಧ ಸ್ಪರ್ಧೆಯಲ್ಲಿ ಹೈಸ್ಕೂಲ್ ವಿಭಾಗ ಸುಮಾರು ೧೨೫ ಮಕ್ಕಳು ಭಾಗವಹಿಸಿ ತಮ್ಮ ಭಾಷಾಜ್ಞಾನವನ್ನು ಹಂಚಿಕೊಂಡಿರುತ್ತಾರೆ. ಇದಲ್ಲದೆ ಬಿ.ಪಿ.ಎಲ್. ಕಾರ್ಡಧಾರಕರಿಗಾಗಿ “ಆರೋಗ್ಯವಂತ ಶಿಶುಗಳ ಸ್ಪರ್ಧೆ” ಕೂಡ ಹಮ್ಮಿಕೊಂಡಿದ್ದು ವಿಶೇಷವಾಗಿದೆ. ಈ ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ಅತ್ಯಾಕರ್ಷಕ ನಗದು ಬಹುಮಾನ, ಪಾರಿತೋಷಕ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ರವಿವಾರ ಸಂಜೆ ೫ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಜಿಲ್ಲೆಯ ಮಕ್ಕಳು, ಪಾಲಕರು ಹಾಗೂ ಸಾರ್ವಜನಿಕರು ಆಗಮಿಸಬೇಕೆಂದು ಡಾ|| ಎಲ್.ಎಚ್.ಬಿದರಿಯವರು ವಿನಂತಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

