ಯೌವನಾವಸ್ಥೆಯ ಹೊಸ್ಥಿಲಲ್ಲಿ ಹೊಸ ಅನುಭವಗಳು, ಅಕರ್ಷಣೆಗಳು ಕುತೂಹಲಗಳು ಮತ್ತು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತವಾಗಿದೆ. ಈ ಸಂಧರ್ಭದಲ್ಲಿ ಯುವಜನತೆ ಸ್ನೇಹಿತರ ಒತ್ತಡ, ತಪ್ಪುತಿಳುವಳಿಕೆ, ಮಾದಕ ವಸ್ತುಗಳ ಬಳಕೆ, ಅಸುರಕ್ಷಿತ ಲೈಂಗಿಕ ನಡುವಳಿಕೆ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ಹರಡುವ ತಪ್ಪು ಕಲ್ಪನೆಗಳು ಇವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಲೇಖನ
– ಡಾ.ಸಂತೋಷ ಟೆಂಗಳಿ.
ಐ.ಸಿ.ಟಿ.ಸಿ ಆಪ್ತಸಮಾಲೋಚಕರು
ಸಮುದಾಯ ಆರೋಗ್ಯ ಕೇಂದ್ರ
ಕಲಕೇರಿ – ವಿಜಯಪುರ ಜಿಲ್ಲೆ
ಮೋ.ನಂ:೯೯೧೬೨೮೯೦೨೫
ಉದಯರಶ್ಮಿ ದಿನಪತ್ರಿಕೆ
ಯವಜನತೆ ದೇಶದ ಭವಿಷ್ಯದ ಶಕ್ತಿ ದೇಶದ ಅಭಿವೃದ್ಧಿ ಸಾಮಾಜಿಕ ಬದಲಾವಣೆ ಹಾಗೂ ಅರೋಗ್ಯಕರ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದರೇ ಇಂದಿನ ಯುವಜನರು ಎದುರಿಸುತ್ತಿರುವ ಪ್ರಮುಖ ಆರೋಗ್ಯ ಸವಾಲುಗಳಲ್ಲಿ ಹೆಚ್.ಐ.ವಿ/ಏಡ್ಸ್ ಕೂಡಾ ಒಂದಾಗಿದೆ ಇದರ ಕುರಿತು ಸರಿಯಾದ ಮಾಹಿತಿ, ಅರಿವು ಮತ್ತು ಜವಬ್ದಾರಿಯುತ ನಡವಳಿಕೆ ಇಲ್ಲದಿರುವುದು, ಆತುರತೆ ಸಮೂಹಗಳ ಪ್ರಭಾವ ಕುಟುಂಬದ ನಿರ್ಲಕ್ಯತೆ, ಸೋಷಿಯಲ್ ಮೀಡಿಯಾದ ಪ್ರಭಾವ ಮತ್ತು ವೈಜ್ಞಾನಿಕ ಮಾಹಿತಿ ಇಲ್ಲದೇ ಇರುವುದು ಇವೆಲ್ಲಾ ಅಂಶಗಳು ಸೊಂಕು ಹರಡುವ ಅಪಾಯವನ್ನು ಹೆಚ್ಚಿಸಬಹುದು.
ಯುವಜನತೆ ಏಕೆ ಹೆಚ್ಚು ಜಾಗೃತರಾಗಬೇಕೆಂದರೇ, ಯೌವನಾವಸ್ಥೆಯ ಹೊಸ್ಥಿಲಲ್ಲಿ ಹೊಸ ಅನುಭವಗಳು, ಅಕರ್ಷಣೆಗಳು ಕುತೂಹಲಗಳು ಮತ್ತು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತವಾಗಿದೆ. ಈ ಸಂಧರ್ಭದಲ್ಲಿ ಯುವಜನತೆ ಸ್ನೇಹಿತರ ಒತ್ತಡ, ತಪ್ಪುತಿಳುವಳಿಕೆ, ಮಾದಕ ವಸ್ತುಗಳ ಬಳಕೆ, ಅಸುರಕ್ಷೀತ ಲೈಂಗಿಕ ನಡುವಳಿಕೆ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ಹರಡುವ ತಪ್ಪು ಕಲ್ಪನೆಗಳು ಇವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಯುವಜನರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಆದರಿಂದ ಆಗುವ ದುಷ್ಪರಿಣಾಮಗಳನ್ನು ಅರಿತುಕೊಳ್ಳಬೇಕು. ದುಡುಕಿನ ನಿರ್ಧಾರ ತೆಗೆದುಕೊಂಡು ಕ್ಷಣಿಕ ಸುಖಗೊಸ್ಕರ ತಮ್ಮ ಜೀವನವನ್ನು ಬಲಿಕೊಡಬಾರದು. ಇದರ ಜೊತೆಗೆ ಲೈಂಗೀಕ ವಿಷಯಗಳು ಹಾಗೂ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡುವುದು ವೈಜ್ಞಾನಿಕ ಮಾಹಿತಿಯನ್ನು ತಿಳಿದುಕೊಳ್ಳವುದು ಮತ್ತು ಆಗತ್ಯವಿದ್ದಾಗ ಆರೋಗ್ಯ ಕಾರ್ಯಕರ್ತರ ಸಲಹೆಯನ್ನು ಪಡೆದುಕೊಳ್ಳಬೇಕು.ಯುವಜನತೆ ಹೆಚ್.ಐ.ವಿ/ಏಡ್ಸ್ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳಲ್ಲಿ ಮುಖ್ಯವಾಗಿ ಹೆಚ್.ಐ.ವಿ ಕುರಿತು ವೈಜ್ಞಾನಿಕ ಮತ್ತು ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು, ಲೈಂಗೀಕ ಸಂಪರ್ಕದಲ್ಲಿ ಪ್ರತಿಬಾರಿಯೂ ಸರಿಯಾಗಿ ಕಾಂಡೋಮ್ ಬಳಸಬೇಕು, ಅಗತ್ಯವಿದ್ದಾಗ ಹೆಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳಬೇಕು, ಇತರರು ಬಳಸಿದ ಸೂಜಿ ಸಿರೆಂಜಗಳನ್ನು ಬಳಸಬಾರದು, ರಕ್ತವರ್ಗಾವಣೆ ಸುರಕ್ಷಿತವಾಗಿ ಟೆಸ್ಟ ಮಾಡಿದ ರಕ್ತವನ್ನೇ ಬಳಸಬೇಕು ಹಾಗೂ ಮಾದಕ ವಸ್ತುಗಳು ಮತ್ತು ಅಪಾಯಕಾರಿ ನಡುವಳಿಕೆಯಿಂದ ದೂರವಿರಬೇಕು.
ಹೆಚ್.ಐ.ವಿ ಪರೀಕ್ಷೆಗೆ ಹಿಂಜರಿಕೆ ಬೇಡ

ಹೆಚ್.ಐ.ವಿ ಪರೀಕ್ಷೆಗೆ ಹಿಂಜರಿಕೆ ಮಾಡಬಾರದು ಏಕೆಂದರೆ ಹೆಚ್.ಐ.ವಿ ಸೋಂಕು ಗುರುತುಪಡಿಸಲು ಇರುವ ಏಕೈಕ ಮಾರ್ಗ ಎಂದರೇ ಅದು ರಕ್ತ ಪರೀಕೆ. ಇದರಿಂದ ಅಪಾಯದ ವರ್ತನೆವುಳ್ಳವರು ಹಾಗೂ ಯುವಜನತೆಗೆ ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುತ್ತದೆ ಅಲ್ಲದೇ ಹೆಚ್.ಐ.ವಿ ಸೋಂಕು ಧೃಡಪಟ್ಟರೆ ತಕ್ಷಣವೇ ಎ.ಆರ್,ಟಿ ಚಿಕಿತ್ಸೆಯನ್ನು ಪ್ರಾರಂಬಿಸುವುದರಿAದ ವೈರಲ್ ಲೋಡ್ ಪ್ರಮಾಣವನ್ನು ನಿಯಂತ್ರಿಸಬಹುದು ಮತ್ತು ಆರೋಗ್ಯಕರ ಜೀವನ ನಡೆಸಲು ಸಹಾಯವಾಗುತ್ತದೆ.
ಸಮಾಜದಲ್ಲಿ ಹೆಚ್.ಐ.ವಿ ಸೊಂಕಿತರ ಬಗ್ಗೆ ಇನ್ನು ಕೆಲವು ತಪ್ಪು ಕಲ್ಪನೆಗಳು ಹಾಗೂ ಭಯಗಳು ಕಂಡುಬರುತ್ತವೆ ಅವುಗಳಲ್ಲಿ ಮುಖ್ಯವಾಗಿ, ಕೈಕುಲುಕುವುದರಿಂದ, ಅಪ್ಪಿಕೊಳ್ಳುವುದರಿಂದ, ಒಟ್ಟಿಗೆ ಊಟ ಮಾಡುವುದರಿಂದ ಒಂದೇ ಶೌಚಾಲಯ ಬಳಸುವುದರಿಂದ ಹಾಗೂ ಸೊಳ್ಳೆ ಕಚ್ಚುವುದರ ಮೂಲಕ ಹರಡುವುದಿಲ್ಲ
ಹೆಚ್.ಐ.ವಿ/ಏಡ್ಸ್ ಜಾಗೃತಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳು
ಸರ್ಕಾರದಿಂದ ೧೦೯೭ ಎಂಬ ಉಚಿತ ಸಹಾಯವಾಣಿಯನ್ನು ಮಾಡಲಾಗಿದೆ ಇಲ್ಲಿ ಹೆಚ್.ಐ.ವಿ ಕುರಿತು ಸಮಗ್ರವಾದ ಮಾಹಿತಿಯನ್ನು ಫೋನ್ ಕರೆ ಮಾಡುವ ಮುಖಾಂತರ ತಿಳಿದುಕೊಳ್ಳಬಹುದು ಹಾಗೂ ಇಲ್ಲಿ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ಜೊತೆಗೆ ಬ್ರೇಕ್ ಫ್ರೀ ಇಂಡಿಯಾ ಎಂಬ ಜಾಲತಾಣವನ್ನು ಬಿಡುಗಡೆ ಮಾಡಿದೆ ಇಲ್ಲಿ ಕ್ಯೂ.ಆರ್ ಕೋಡ್ ಮಾಡಲಾಗಿದೆ ಈ ಕ್ಯೂ.ಆರ್ ಕೋಡ್ ಸ್ಕಾö್ಯನ್ ಮಾಡುವ ಮುಖಾಂತರ ನೀವು ಅಪಾಯದ ಅಂಚಿನಲ್ಲಿ ಇದ್ದಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗೂ ನೀವು ಒಂದು ವೇಳೆ ಅಪಾಯದ ಅಂಚಿನಲ್ಲಿ ಇದ್ದರೆ ಮುಂದಿನ ಸೂಕ್ತ ಕ್ರಮಗಳಿಗೆ ಅಲ್ಲಿ ದೇಶದ ಎಲ್ಲಾ ಐ.ಸಿ.ಟಿ.ಸಿ ಆಪ್ತಸಮಾಲೋಚಕರ ದೂರವಾಣಿ ಸಂಖ್ಯೆ ಹಾಗೂ ಕೇಂದ್ರಗಳ ಲೋಕೆಶನ್ ನೀಡಿರುತ್ತಾರೆ ಮತ್ತು ಇಲ್ಲಿಯೂ ಸಹ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ಇದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಹದಿಹರೆಯದವರ ಆರೋಗ್ಯ ಶಿಕ್ಷಣ, ರೆಡ್ ರಿಬ್ಬನ್ ಕ್ಲಬ್‌ಗಳ ಸ್ಥಾಪನೆ ಪ್ಲಾಸ್ಮಾ ಮೋಬೈಲ್, ರೀಲ್ಸ್ ರಂಗೋಲಿ ಸ್ಪರ್ಧೆ ಮ್ಯಾರಾಥನ್ ರಸಪ್ರಶ್ನೆ ಸ್ಪರ್ದೆ ಹಾಗೂ ಬೈಕ್ ರ‍್ಯಾಲಿ ಮುಖಾಂತರ ಹೆಚ್.ಐ.ವಿ/ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ.

ಕೊನೆಯದಾಗಿ ಹೆಚ್.ಐ.ವಿ ಸೋಂಕಿತರನ್ನು ಯಾವದೇ ಕಾರಣಕ್ಕೂ ದೂರವಿಡುವುದು, ಅವಮಾನಿಸುವುದು ಮಾನವೀಯ ಮೌಲ್ಯಗಳಗೆ ವಿರುದ್ದವಾಗಿದೆ. ಅವರಿಗೆ ಕುಟುಂಬದಿಂದ ಮತ್ತು ಸಮಾಜದಿಂದ ಪ್ರೀತಿ ಮಾನಸಿಕ ಬೆಂಬಲ ಹಾಗೂ ಗೌರವ ಮತ್ತು ಚಿಕಿತ್ಸೆಗೆ ಸಹಕಾರ ನೀಡುವುದು ನಮ್ಮ ನಿಮ್ಮೇಲ್ಲರ ಕರ್ತವ್ಯವಾಗಿದೆ. ಯುವಜನತೆ ಬದಲಾವಣೆಯ ಹರಿಕಾರರಾಗಬೇಕು ಅವರು ಸರ್ಕಾರದಿಂದ ಹೆಚ್.ಐ.ವಿ ತಡೆಗಟ್ಟಲು ಇರುವ ಅಂಶಗಳನ್ನು ಗಮನಿಸಿ ತಮಗೆ ದೊರೆತ ವೈಜ್ಞಾನಿಕ ಮಾಹಿತಿಯನ್ನು ತಮ್ಮ ಸ್ನೇಹಿತರು ಕುಟುಂಬದವರು ಶಾಲಾ-ಕಾಲೇಜು ವಿದ್ಯಾಥಿಗಳು ಹಾಗೂ ಸಮುದಾಯದ ಜನರೊಂದಿಗೆ ಹಂಚಿಕೊಳ್ಳಬೇಕು.ಸಾಮಾಜಿಕ ಜಾಲತಾಣಗಳು ತಪ್ಪು ಮಾಹಿತಿಯನ್ನು ನೀಡುವ ಬದಲು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಸಾಧನಗಳಾಗಬೇಕು. ಹೆಚ್.ಐ.ವಿ/ಏಡ್ಸ್ ಕೇವಲ ವೈಯಕ್ತಿಕ ಸಮಸ್ಯೆಯಲ್ಲ ಇದು ಸಾಮಾಜಿಕ ಅರಿವು ಮಾನವೀಯತೆ ಮತ್ತು ಜವಬ್ದಾರಿಯ ಪ್ರಶ್ನೆಯೂ ಆಗಿದೆ. ಹೆಚ್.ಐ.ವಿ ಸೊಂಕನ್ನು ತಡೆಗಟ್ಟಲು ಭಯಕ್ಕಿಂತ ಜಾಗೃತಿ ಅತಿ ಅವಶ್ಯ, ತಾರತಮ್ಯಕ್ಕಿಂತ ಮಾನವೀಯತೆ ಮುಖ್ಯ ಹಾಗೂ ಮೂಢನಂಬಿಕೆಗಳಿಗಿಂತ ವೈಜ್ಞಾನಿಕ ಅರಿವು ಮುಖ್ಯವಾಗಿರುತ್ತದೆ ಯುವಜನತೇಯ ಜಾಗೃತಿಯಿಂದಲೇ ಹೆಚ್.ಐ.ವಿ/ಏಡ್ಸ್ ಮುಕ್ತ ದೇಶ ನಿರ್ಮಾಣ ಮಾಡಲು ಸಾದ್ಯ.


