ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಅನೀಮಿಯಾ ತಡೆಗಟ್ಟುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಮುಖ್ಯವಾಗಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೀಮಿಯಾ ಮುಕ್ತ ಭಾರತವನ್ನು ನಿರ್ಮಾಣ ಮಾಡಲು ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದಕೊಳ್ಳಬೇಕು ಎಂದು ಬಸವೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರವಿ ಗುಮಶೆಟ್ಟಿ ಹೇಳಿದರು.
ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಗುಜರಾತಿನ ರಾಜಚಂದ್ರ ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರ, ಕಲಕೇರಿಯ ಸ್ವಾಭಿಮಾನ ಗ್ರಾಮೀಣಾಭಿವೃದ್ದಿ ಸಂಸ್ಥೆ, ಸ್ಪಂದನ ಸ್ವಯಂ ಸೇವಾ ಸಂಸ್ಥೆ ವಿಜಯಪುರ, ಭಾರತೀಯ ಸುರಾಜ್ಯ ಸಂಸ್ಥೆ ಕನ್ನೂರ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಅನೀಮಿಯಾ ತಡೆಗಟ್ಟುವಿಕೆ ಹಾಗೂ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನೀಮಿಯಾ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಇದಕ್ಕೆ ಮುಖ್ಯ ಕಾರಣ ಇಂದಿನ ಅಹಾರ ಪದ್ದತಿಯಾಗಿದೆ. ಅನೀಮಿಯಾ ಮುಕ್ತ ಭಾರತಕ್ಕಾಗಿ ಸರ್ಕಾರದ ಯೋಜನೆಗಳನ್ನು ಯಶಸ್ವಿಗೊಳಿಸಲು ಇದಕ್ಕೆ ಸಹಕಾರಿಯಾಗಿ ರಾಜ್ಯದಲ್ಲಿ ವಿವಿದ ಸಂಘ ಸಂಸ್ಥೆಗಳು ನಿರಂತರವಾಗಿ ಕೆಲಸವನ್ನು ಮಾಡುತ್ತಿರುವದು ಶ್ಲಾಘನೀಯ ಎಂದರು.
ಸ್ವಾಭಿಮಾನ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಂಚಾಲಕಿಯರಾದ ಅಂಬಿಕಾ ಜಂಬಗಿ ಮಾತನಾಡಿ, ಹಿಮೋಗ್ಲೋಬಿನ್ ದೈಹಿಕ ಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಏಕಾಗ್ರತೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಿ ಉತ್ತಮ ಆರೋಗ್ಯವಂತರಾಗಿರಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಈ ವೇಳೆ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ, ಮತ್ತು ಪದವಿ ಕಾಲೇಜಿನ ವಿಧ್ಯಾರ್ಥಿಗಳಿಗೆ ರಕ್ತ ತಪಾಸಣೆಯನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಿಜಭಾ ಹಿಪ್ಪರಗಿ, ಮಲ್ಲು ಜಂಬಗಿ, ಬಸವರಾಜ ಕುಂಬಾರ, ಶ್ರೀದೇವಿ ಝಳಕಿ, ಶೋಭಾ ಹಡಪದ, ಗುರುರಾಜ ಮಾಡಗಿ, ವಿರೇಶ ಝಳಕಿ ಸೇರಿದಂತೆ ಇತರರು ಇದ್ದರು.

