ಸ್ಥಳ ಪರಿಶೀಲಿಸಿ ನಿರ್ಮಾಣ | ಶಾಸಕ ಶಿವಾನಂದ ಪಾಟೀಲ ಭರವಸೆ | ಸುಳ್ಳು ಸುದ್ದಿಗೆ ಕಿವಿಗೊಡದಿರಲು ಉಪಾಧ್ಯಕ್ಷ ಬಸವರಾಜ ವಂದಾಲ ಮನವಿ
ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಮಿನಿ ವಿಧಾನಸೌಧ ಸೇರಿದಂತೆ ನಾನಾ ಕಚೇರಿಗಳನ್ನು ನಿಡಗುಂದಿ ಪಟ್ಟಣದಲ್ಲಿಯೇ ಸ್ಥಳ ಪರಿಶೀಲಿಸಿ ನಿರ್ಮಿಸಲಾಗುವುದು ಎಂದು ಶಾಸಕ ಶಿವಾನಂದ ಪಾಟೀಲರು ಭರವಸೆ ನೀಡಿದ್ದು, ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಕಿವಿಗೊಡಬಾರದು ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ವಂದಾಲ ಹೇಳಿದರು.
ಪಟ್ಟಣದಲ್ಲಿ ಪಪಂ ಅಧ್ಯಕ್ಷೆ ಜಂಬಕ್ಕ ದೇಸಾಯಿ ವಿಭೂತಿ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಲ್ಲ ಸರ್ಕಾರಿ ಕಚೇರಿಗಳನ್ನು ಪಟ್ಟಣದಿಂದ ೫-೧೦ ಕಿ.ಮೀ ದೂರದ ಪ್ರದೇಶದಲ್ಲಿ ನಿರ್ಮಿಸಲಾಗುತ್ತದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸಾರ್ವಜನಿಕರು ಅದಕ್ಕೆ ಕಿವಿಗೊಡಬಾರದು. ಪಟ್ಟಣದಲ್ಲಿ ಈಗಾಗಲೇ ಒಂದೆರಡು ಕಡೆ ಸ್ಥಳ ಗುರುತಿಸಲಾಗಿದೆ. ಅಲ್ಲದೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪಟ್ಟಣದಲ್ಲಿರುವ ಸರ್ಕಾರಿ ಪ್ರದೇಶಗಳ ಸ್ಥಳ ಪರಿಶೀಲಿಸಿದ ನಂತರ ಸೂಕ್ತ ಸ್ಥಳದಲ್ಲಿ ಎಲ್ಲ ಕಚೇರಿಗಳನ್ನು ನಿರ್ಮಿಸಲಾಗುತ್ತದೆ ಎಂದರು.
ಈ ಮುಂಚೆ ಒಂದು ಕಡೆ ಸ್ಥಳ ನಿಗದಿಪಡಿಸಲಾಗಿತ್ತು. ಆದರೆ ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಬಂದ ಕಾರಣ ಬೇರೆ ಕಡೆ ಸ್ಥಳ ಪರಿಶೀಲಿಸಲಾಗುತ್ತಿರುವುದರಿಂದ ಸ್ವಲ್ಪ ತಡವಾಗಿದೆ ಎಂದರು.
ಪಪಂ ಸದಸ್ಯ ಸಂಜೀವ ರಾಠೋಡ ಮಾತನಾಡಿದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕರಿಯಪ್ಪ ಸಿಂದಗಿ, ಸದಸ್ಯರಾದ ನಬಿರಸೂಲ ಬಾಣಕಾರ, ಶರಣಮ್ಮ ವಾರದ, ಆರ್. ರಾಜು, ದಾವಲಮಾ ಪೆಂಡಾರಿ ಇದ್ದರು.

