ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಶ್ರೇಷ್ಠ ಸಂತ, ದಾರ್ಶನಿಕ ಹಾಗೂ ಸಮಾಜ ಸುಧಾರಕ ಭಕ್ತ ಕನಕದಾಸರ ಜಯಂತಿಯನ್ನು ಅತ್ಯಂತ ಭಕ್ತಿ, ಗೌರವ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಅವರು ಮಾತನಾಡಿ, “ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ಪದ್ಧತಿ, ಅಸಮಾನತೆ ಹಾಗೂ ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಸಂತರು. ಅವರ ತತ್ವ, ಆದರ್ಶ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು. ಅಲ್ಲದೆ, ಕನಕದಾಸರ ಆಧ್ಯಾತ್ಮಿಕ ಪಯಣ, ಅವರ ಸಾಹಿತ್ಯಿಕ ಕೊಡುಗೆ ಹಾಗೂ ಸಮಾಜ ಸುಧಾರಣೆಯ ಕಾರ್ಯಗಳ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ವಿಶ್ವವಿದ್ಯಾಲಯದ ಕುಲಸಚಿವ ಡಾ. ಆರ್. ವಿ. ಕುಲಕರ್ಣಿ ಅವರು ಮಾತನಾಡಿ, “ಭಕ್ತ ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಸಂತವಾಗಿರದೆ, ಇಡೀ ಸಮಾಜ ಹಾಗೂ ಜಗತ್ತಿಗೆ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದ ಮಹಾನ್ ದಾರ್ಶನಿಕರು. ಅವರ ಆದರ್ಶಗಳನ್ನು ನಾವು ನಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಂಡು ಮುನ್ನಡೆದರೆ, ಸಮಾಜದಲ್ಲಿ ಉತ್ತಮ ಬದಲಾವಣೆ ಹಾಗೂ ಸುಧಾರಣೆ ತರಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ, ಉಪಪ್ರಾಂಶುಪಾಲ ಡಾ. ಆನಂದ ಪಿ. ಅಂಬಲಿ, ಹಿರಿಯ ಉಪಪ್ರಾಚಾರ್ಯ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಡೀನ ಅಲೈಡ ಹೆಲ್ತ ಸೈನ್ಸ, ಡಾ. ಎಸ್. ವಿ. ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ಎಸ್. ಎನ್. ಬೆಂಟೂರ, ನಿರ್ದೇಶಕರು, ಆರ್ & ಡಿ, ಡಾ. ಎಮ್. ಎಮ್. ಪಾಟೀಲ, ಪ್ಯಾಥಲಾಜಿ ವಿಭಾಗದ ಮುಖ್ಯಸ್ಥೆ, ಡಾ. ಸುರೇಖಾ ಹಿಪ್ಪರಗಿ, ಡಾ. ಪ್ರಕಾಶ ಪಾಟೀಲ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಡಾ. ಆರ್. ಜಿ. ಕುಲಕರ್ಣಿ, ಹಣಕಾಸು ಅಧಿಕಾರಿ ಶ್ರೀ ಬಿ. ಎಸ್. ಪಾಟೀಲ, ಸಹಾಯಕ ಕುಲಸಚಿವ ಡಾ. ಶ್ರೀಧರ ಬಗಲಿ, ಡಾ. ಮಹಾದೇವಿ ವಾಲಿ, ಆನಂದ ಪಾಟೀಲ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

