ಮಂಡ್ಯ ಮ.ನಾ.ಉಡುಪ
ಅದೊಂದು ರಾಜ್ಯ. ಅಲ್ಲೊಬ್ಬ ರಾಜನಿದ್ದ. ಆತ ಪ್ರತಿದಿನವೂ ಬ್ರಾಹ್ಮಣರಿಗೆ ಶ್ರದ್ಧೆಯಿಂದ ಅನ್ನಸಂತರ್ಪಣೆ ನಡೆಸುತ್ತಿದ್ದ .
ಒಂದು ದಿನ, ಬಯಲು ಪ್ರದೇಶವೊಂದರಲ್ಲಿ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು . ಮೇಲೆ ಆಕಾಶದಲ್ಲಿ ಗಿಡುಗವೊಂದು, ಸತ್ತ ಹಾವನ್ನು, ಎತ್ತಿಕೊಂಡು ಹೋಗುತ್ತಿತ್ತು. ಆ ಸತ್ತ ಹಾವಿನ ಬಾಯಿಯಿಂದ ಒಂದು ಬಿಂದು ವಿಷ , ರಾಜ ಹಂಚುತ್ತಿದ್ದ ಆಹಾರದ ಮೇಲೆ ಬಿದ್ದಿತು. ಹೀಗಾದದ್ದು ಯಾರಿಗೂ ಗೊತ್ತಾಗಲಿಲ್ಲ. ರಾಜ ಆಹಾರ ಹಂಚುವುದನ್ನು ಮುಂದುವರಿಸಿದ .
ರಾಜನಿಂದ ವಿಷದ ಆಹಾರವನ್ನು ಪಡೆದ ಒಬ್ಬ ಬ್ರಾಹ್ಮಣ ಸತ್ತು ಹೋದ. ರಾಜ ಈ ಘಟನೆಯಿಂದ ತುಂಬಾ ನೊಂದುಕೊಂಡ.
ಈಗ, ಕರ್ಮಫಲದ ಹಂಚಿಕೆ ಮಾಡುವ ಚಿತ್ರಗುಪ್ತನಿಗೆ ಒಂದು ಸಂಧಿಗ್ಧವುಂಟಾಯಿತು. ಈ ಘಟನೆಯಲ್ಲಿ ಬ್ರಾಹ್ಮಣನ ಸಾವಿನ ಪಾಪದ ಫಲವನ್ನು , ಯಾರ ಲೆಕ್ಕಕ್ಕೆ ಬರೆಯುವುದೆಂದು, ಅವನಿಗೆ ತಿಳಿಯಲಿಲ್ಲ. ಅದು ಗಿಡುಗನ ತಪ್ಪಲ್ಲ. ಯಾಕೆಂದರೆ ಅದು ತನ್ನ ಆಹಾರವನ್ನು ತೆಗೆದುಕೊಂಡು ಹೋಗುತ್ತಿತ್ತು. ಸತ್ತ ಹಾವಿನ ತಪ್ಪಂತೂ ಖಂಡಿತಾ ಅಲ್ಲ. ರಾಜನ ತಪ್ಪೂ ಆಗಿರಲು ಸಾಧ್ಯವಿಲ್ಲ. ರಾಜನಿಗೆ ಆಹಾರದ ಮೇಲೆ ವಿಷ ಬಿದ್ದಿದ್ದು ಗೊತ್ತೇ ಇರಲಿಲ್ಲ .
ಚಿತ್ರಗುಪ್ತ ಸೀದಾ ಯಮಧರ್ಮನ ಬಳಿ ಹೋಗಿ ತನ್ನ ಸಮಸ್ಯೆಯನ್ನು ವಿವರಿಸಿದ. ಯಮಧರ್ಮ, ಅವನೊಡನೆ ತಾಳ್ಮೆಯಿಂದ ಕಾಯುವಂತೆ ಹಾಗೂ ಇನ್ನು ಕೆಲವೇ ದಿನಗಳಲ್ಲಿ ಆ ಸಮಸ್ಯೆಗೆ ಉತ್ತರ ಹೊಳೆಯುವುದಾಗಿಯೂ ತಿಳಿಸಿದ.
ಆ ನಂತರ ಸ್ವಲ್ಪ ದಿನಗಳಲ್ಲಿ , ರಾಜನನ್ನು ಭೇಟಿಯಾಗಲು ಕೆಲವು ಮಂದಿ ಬ್ರಾಹ್ಮಣರು, ಆ ಊರನ್ನು ಪ್ರವೇಶಿಸಿದರು. ಅರಮನೆಯ ದಾರಿ ಅವರಿಗೆ ಗೊತ್ತಿರಲಿಲ್ಲ. ಅಲ್ಲಿಯೇ ಮಾರ್ಗದ ಬದಿಯಲ್ಲಿ ಕುಳಿತು ಹೂ ಮಾರುತ್ತಿದ್ದ ಹೆಂಗಸಿನೊಡನೆ, ‘ನಿನಗೆ ಅರಮನೆಯ ದಾರಿ ಗೊತ್ತಿದೆಯೇ ? ನಾವು ಅಲ್ಲಿಗೆ ಹೇಗೆ ಹೋಗಬಹುದು?’ ಎಂದು ವಿಚಾರಿಸಿದರು. ಆಕೆ ಒಪ್ಪಿ, ಸರಿಯಾದ ದಾರಿಯನ್ನು ಅವರಿಗೆ ವಿವರಿಸಿ ಹೇಳಿದ ನಂತರ ಸೇರಿಸಿದಳು. ‘ಆದರೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ಆ ರಾಜ ಬ್ರಾಹ್ಮಣರನ್ನು ಕೊಲ್ಲುವನು.’
ಅವಳು, ರಾಜನು ಮಾಡದ ಪಾಪದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ ಕ್ಷಣದಲ್ಲಿಯೇ ಚಿತ್ರಗುಪ್ತನ ಪ್ರಶ್ನೆಗೆ ಉತ್ತರ ದೊರಕಿತು. ಆತ, ಬ್ರಾಹ್ಮಣ ಸತ್ತ ಪಾಪದ ಫಲವನ್ನು ಆಕೆಯ ಲೆಕ್ಕಕ್ಕೆ ಸೇರಿಸಿದ.
ನಾವು ಯಾರಾದರೊಬ್ಬರ ಪಾಪದ ಬಗ್ಗೆ, ಆಡಿಕೊಂಡರೆ, ಮತ್ತು ನಾವು ಆಡಿದ ಮಾತು ಸುಳ್ಳಾಗಿದ್ದರೆ, ಆ ಪಾಪದ ಫಲ ನಮ್ಮ ಲೆಕ್ಕಕ್ಕೇ ಸಂಪೂರ್ಣವಾಗಿ ಸೇರಿಸಲ್ಪಡುವುದು.
ಆದ್ದರಿಂದ ನಾವು ಇತರರ ಬಗ್ಗೆ ಯೋಚಿಸುವಾಗ, ಮಾತನ್ನಾಡುವಾಗ ಜಾಗರೂಕರಾಗಿರೋಣ.