– ಸುಜಾತಾ ಪ್ರಸಾದ್
ಸಂಸ್ಕೃತ ಮತ್ತು ಗ್ರೀಕ್ ಭಾಷೆಯ ನಂತರ ವಿಶ್ವದಲ್ಲೇ ನಮ್ಮ ಕನ್ನಡ ಮೂರನೇ ಪುರಾತನ ಭಾಷೆ. ಮೂರು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಭಾಷೆ ನಮ್ಮ ಕನ್ನಡ.
‘ಕನ್ನಡ ಎನೆ ಕುಣಿದಾಡುವುದೆನ್ನದೆ, ಕನ್ನಡ ಎನೆ ಕಿವಿ ನಿಮಿರುವುದು’ ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದರಲ್ಲಾಗಲಿ, ‘ ಕನ್ನಡ ಎಂದರೆ ಬರೀ ನುಡಿಯಲ್ಲ ಹಿಂದಿದೆ ಅದರ ಅರ್ಥ,’ ‘ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತೀರ್ಥ’.. ಎಂದು ನಿತ್ಯೋತ್ಸವ ಕವಿ ನಿಸಾರ ಅಹಮದ್ ಬರದಿದ್ದರಲ್ಲಾಗಲಿ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ಕನ್ನಡ ಭಾಷೆಗಿರುವ ಮಹತ್ವವೇ ಅಂತಹುದು. ಅಮೋಘ ವರ್ಷ ‘ಕವಿರಾಜಮಾರ್ಗ’ ರಚಿಸುವಾಗ ಇಂಗ್ಲಿಷ್ ಭಾಷೆ ಇನ್ನೂ ತೊಟ್ಟಿಲೊಳಗಿರುವ ಕೂಸಾಗಿತ್ತು, ಹಿಂದಿ ಭಾಷೆ ಹುಟ್ಟಿರಲೇ ಇಲ್ಲವಂತೆ. ವಿಶ್ವದ ‘ಲಿಪಿಗಳ ರಾಣಿ ‘ ಎಂದರೆ ಕನ್ನಡ ಲಿಪಿ ಎಂದು ಶ್ರೀವಿನೋಭಾಭಾವೇಯವರೇ ಹೇಳಿದ್ದರು ಎಂಬುದು ಕನ್ನಡದ ಶ್ರೇಷ್ಠತೆಗೆ ಸಾಕ್ಷಿ..
ನಮ್ಮ ಕರುನಾಡು ಸಿರಿ ನಾಡು, ಇಲ್ಲಿ ಹರಿಯುವ ನದಿಗಳು, ದಟ್ಟ ಅಭಯಾರಣ್ಯಗಳು, ಗುಡಿ ಗೋಪುರಗಳು, ಇತಿಹಾಸ ಸಾರುವ ಶಿಲಾ ಶಾಸನಗಳು, ಶಿಲ್ಪ ಕಲೆಯ ದೇವಾಲಯಗಳು, ಬೆಟ್ಟಗುಡ್ಡಗಳು, ಹಸಿರಾದ ರಮಣೀಯ ಪೃಕೃತಿ ಸೌಂದರ್ಯ ದಿಂದ ನಮ್ಮ ನಾಡು ಶ್ರೀಮಂತ ವಾಗಿದೆ. ಇಷ್ಟೇ ಅಲ್ಲದೇ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರ, ಕ್ರೀಡಾ ಕ್ಷೇತ್ರ, ಲಲಿತ ಕಲೆಗಳ ಸುಂದರ ಬೀಡಾಗಿದೆ. ನಾವು ನಮ್ಮ ನೆಲ -ಜಲ, ಭಾಷೆ – ಸಂಸ್ಕೃತಿ ಗಳ ಉಳಿವಿಗಾಗಿ ಶ್ರಮಿಸೋಣ, ಭಾಷೆಯನ್ನು ಬೆಳೆಸೋಣ..
ಒಬ್ಬ ವ್ಯಕ್ತಿ ಪರಿಪೂರ್ಣತೆಯನ್ನು ಪಡೆಯಬೇಕಾದರೆ ಮಾತೃಭಾಷೆಯಿಂದ ಮಾತ್ರ ಸಾಧ್ಯ ಮಾತೃಭಾಷೆಯನ್ನು ಕಡೆಗಣಿಸಿದ ವ್ಯಕ್ತಿ ಹೆತ್ತ ತಾಯಿಯನ್ನು ಕಡೆಗಣಿಸಿದಂತೆ.
ಮೊದಲನೆಯದಾಗಿ ಕನ್ನಡಿಗರು ನೆರೆಹೊರೆಯವರಲ್ಲಿ, ಹಾಗೂ ಸಭೆ ಸಮಾರಂಭಗಳಲ್ಲಿ ಯಾವುದೇ ಮುಜುಗರಕ್ಕೆ ಒಳಪಡದೆ ಪರಭಾಷಿಗರನ್ನು ಕನ್ನಡದಲ್ಲೇ ಮಾತನಾಡಿಸಬೇಕು ಹಾಗೂ ಕನ್ನಡ ಕಲಿಯಲು ಪ್ರೇರೇಪಿಸಬೇಕು.
ಆಂಗ್ಲ ಭಾಷೆ ಅಥವಾ ಹಿಂದಿ ಭಾಷೆಯನ್ನು ಕಲಿತರೆ ಮಾತ್ರ ಒಳ್ಳೆಯ ಭವಿಷ್ಯ ಎನ್ನುವ ಭಾವನೆಯನ್ನು ಬಿಟ್ಟು , ಪ್ರಾರ್ಥಮಿಕ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ಕಲಿತು, ನಂತರ ಉನ್ನತ ವಿದ್ಯಾಭ್ಯಾಸ ಕೋಸ್ಕರ ಇಂಗ್ಲಿಷ್ ಕಲಿತರೂ ನಮ್ಮ ಮಾತೃ ಭಾಷೆಯನ್ನು ಮರೆಯಬಾರದು. ಪರಭಾಷೆ ನಮಗೆ ಎಷ್ಟು ಅವಶ್ಯವೋ ಅಷ್ಟನ್ನು ಮಾತ್ರ ಬಳಸಬೇಕು ಅದು ಅತಿಯಾಗಬಾರದು. ಕನ್ನಡ ಮಾತನಾಡುವುದು ಸಹ ಜೀವನದಲ್ಲಿ ಯಶಸ್ವಿಗೆ ಕಾರಣವಾಗುತ್ತದೆ ಎಂಬ ಅರಿವನ್ನು ನಾವು ಇತರರಲ್ಲಿ ಮೂಡಿಸಬೇಕು.
ಈಗ ಹಲವರು ಆಂಗ್ಲಭಾಷೆಯಲ್ಲಿ ಮಾತನಾಡುವುದು, ತಾವು ವಿದ್ಯಾವಂತರು ಅಥವಾ ಉತ್ತಮ ಉದ್ಯೋಗದಲ್ಲಿ ಇದ್ದೇವೆ ಎಂದು ತೋರಿಸಿಕೊಳ್ಳುವುದಕ್ಕೋಸ್ಕರ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಾರೆ, ಇಂತಹ ಪೊಳ್ಳು ಭಾವನೆಯಿಂದ ಹೊರಬಂದು ಕನ್ನಡವನ್ನು ವಿಶ್ವಾಸದಿಂದ, ಹೆಮ್ಮೆಯಿಂದ ಮಾತನಾಡಬೇಕು.
ಮನೆಗಳಲ್ಲಿ ಮಕ್ಕಳು ನೋಡುವ ಡಿಸ್ಕವರಿ ಚಾನೆಲ್ ಅಥವಾ ಕಾರ್ಟೂನ್ ಮುಂತಾದುಗಳನ್ನು ಕನ್ನಡದಲ್ಲಿ ನೋಡುವಂತಾಗಲು, ಟಿವಿ ಸಿಸ್ಟಮ್ ನಲ್ಲಿ ಕನ್ನಡ ಭಾಷೆ ಯನ್ನು ಆಯ್ಕೆ ಮಾಡಿ, ಮಕ್ಕಳು ಕಾರ್ಯಕ್ರಮ ವನ್ನು ಕನ್ನಡ ದಲ್ಲೇ ನೋಡುವ ಹಾಗೆ ಮಾಡಬೇಕು. ಮಕ್ಕಳನ್ನು ಆದಷ್ಟು ಕನ್ನಡ ಭಾಷೆಯ ಕಾರ್ಯಕ್ರಮಗಳು, ಕನ್ನಡ ಅಕ್ಷರ ಜಾತ್ರೆ, ಸಾಹಿತ್ಯ ಸಮ್ಮೇಳನ ಇಂತಹ ಕಾರ್ಯಕ್ರಮಗಳಿಗೆ ಕರೆದೊಯ್ದು ಅವರಿಗೆ ಕನ್ನಡದ ಬಗ್ಗೆ ಅಭಿಮಾನ, ಆಸಕ್ತಿ ಹೆಚ್ಚುವಂತೆ ಮಾಡಬೇಕು.
ಬ್ಯಾಂಕ್ ಅಥವಾ ಇನ್ನಿತರ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವಂತಾಗಬೇಕು ಹಾಗೂ ಕನ್ನಡ ಪರರೊಂದಿಗೆ ಮಾತ್ರ ನಮ್ಮ ವ್ಯಾಪಾರ ವ್ಯವಹಾರಗಳಿದ್ದರೆ ಆಗ ಮಾತ್ರ ಕನ್ನಡಕ್ಕೆ ‘ಆನೆ ಬಲ’ ಬಂದಂತಾಗುವುದು.
ಕಸ್ಟಮರ್ ಕೇರ್ ನಲ್ಲಂತೂ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಆಯ್ಕೆ ಮಾಡಲೇಬಾರದು ಏಕೆಂದರೆ ಇದರಲ್ಲಿ ಸಿಗುವ ದತ್ತಾಂಶಗಳಿಂದಲೇ ಕಂಪನಿಗಳು, ಕನ್ನಡಿಗರ ಮಾರ್ಕೆಟ್, ಅವರಿಗೆ ಸೇವೆ ಒದಗಿಸುವ ಭಾಷೆ, ಕನ್ನಡಿಗರ ಪ್ರೋಗ್ರಾಮ್ಮಿತ್ವವನ್ನು ಲೆಕ್ಕ ಹಾಕುತ್ತಿರುತ್ತದೆ ಆದ್ದರಿಂದ ಇಲ್ಲಿ ಕನ್ನಡ ರಾರಾಜಿಸಲೇಬೇಕು.
ರಾಜ್ಯದ ಪ್ರತಿ ಶಾಲೆಯಲ್ಲೂ ಕನ್ನಡ ಕಲಿಸಲೇಬೇಕು, ಆದಷ್ಟು ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಾದ ಕನ್ನಡದಲ್ಲಿ ಕಲಿಯುವಂತೆ ಪ್ರೇರೇಪಿಸಬೇಕು. ಏಕೆಂದರೆ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಲಿತರೆ , ವಿಷಯಗಳ ಬಗ್ಗೆ ಒಳ್ಳೆಯ ಜ್ಞಾನ, ಹಾಗು ಕಲಿಕೆಗೆ ಭದ್ರಬುನಾದಿ ಸಿಗುತ್ತದೆ .
ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳು ಕನ್ನಡದಲ್ಲಿ ಸಿಗುವಂತೆ ಮಾಡಬೇಕು.
ಸರ್ಕಾರವು ಕನ್ನಡದಲ್ಲಿ ಪ್ರಾರ್ಥಮಿಕ ಶಿಕ್ಷಣ ಕಲಿತವರಿಗೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು.
ಕನ್ನಡ ಕಾದಂಬರಿಗಳು ಪತ್ರಿಕೆಗಳು ಹಾಗೂ ಇತರ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಹಾಗೆಯೇ ಆನ್ಲೈನ್ ನಲ್ಲಿ ಓದುವಾಗ ಕನ್ನಡದ ಆವೃತ್ತಿಗೆ ಆದ್ಯತೆ ನೀಡಬೇಕು.
ಕಾರ್ಪೊರೇಟ್ ಕಚೇರಿಗಳಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಅನ್ಯ ಭಾಷೆಗರು ಕೆಲಸ ಮಾಡುತ್ತಿರುವುದರಿಂದ ಅವರು ತಮ್ಮ ಉದ್ಯೋಗಿಗಳಿಗೆ ಕನ್ನಡವನ್ನು ಕಲಿಸುವ ವ್ಯವಸ್ಥೆ ಮಾಡಬೇಕು.
ನಾವು ನಿರಂತರವಾಗಿ ನಮ್ಮ ಭಾಷೆಯನ್ನು ಹೆಮ್ಮೆಯಿಂದ ಆತ್ಮವಿಶ್ವಾಸದಿಂದ ಬಳಸಿದರೆ ಖಂಡಿತವಾಗಿಯೂ ಅದರ ಬಳಕೆ, ಉಳಿಕೆ ಹೆಚ್ಚಾಗುತ್ತದೆ. ರಾಷ್ಟ್ರಕವಿ ಕುವೆಂಪು ರವರು ಹೇಳಿದ ಹಾಗೆ ‘ ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ಕನ್ನಡವಾಗಿರು’ ಎಂಬಂತೆ, ಯಾವುದೇ ದೇಶದಲ್ಲಿರಲಿ ಕನ್ನಡಿಗರಾಗಿ ನಾವು ಕನ್ನಡ ಮಾತನಾಡೋಣ, ಭಾಷೆಯ ಸೊಗಡನ್ನು ಎಲ್ಲೆಡೆ ಪಸರಿಸೋಣ.
ಕನ್ನಡ ರಾಜ್ಯೋತ್ಸವದ ವೇಳೆಯಲ್ಲಿ ಮಾತ್ರ ನಾವು ಕನ್ನಡ ಭಾಷೆಯ ಬಗ್ಗೆ ಜಾಗೃತವಾಗುವುದನ್ನು ಬಿಟ್ಟು ಪ್ರತಿದಿನ, ಪ್ರತಿಕ್ಷಣವೂ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಉಳಿಸೋಣ, ಬೆಳೆಸೋಣ.