ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ನಲ್ಲಿ ನವೆಂಬರ್ 4 ಮತ್ತು 5 ರಂದು ಎರಡು ದಿನ ಸೆಂಟಮ್ ಎಲೆಕ್ಟ್ರಾನಿಕ್ಸ್ ನಡೆಸಿದ ಪೂಲ್ ಕ್ಯಾಂಪಸ್ ಸಂದರ್ಶನದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಜಾಗತಿಕ ಮಟ್ಟದ ಪ್ರಮುಖ ಎಲೆಕ್ಟ್ರಾನಿಕ್ಸ್ ವಿನ್ಯಾಸ ಹಾಗೂ ಉತ್ಪಾದನೆ ಸಂಸ್ಥೆ ‘ಸೆಂಟಮ್ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್’ (Centum Electronics Pvt. Ltd.) ವತಿಯಿಂದ ಅಂತಿಮ ವರ್ಷದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಈ ಕ್ಯಾಂಪಸ್ ಸಂದರ್ಶನ ಆಯೋಜಿಸಿತ್ತು. ನಾನಾ ಪಾಲಿಟೆಕ್ನಿಕ್ ಕಾಲೇಜುಗಳಿಂದ ಒಟ್ಟು 120ಕ್ಕೂ ಹೆಚ್ಚು ವಿದ್ಯಾರ್ಥಿಗಗಳು ಪಾಲ್ಗೋಂಡಿದ್ದರು.
ಪ್ರಾಥಮಿಕ ಸುತ್ತಿನ ನಂತರ ಅರ್ಹತೆ ಪಡೆದ 90 ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನ ಪ್ರಕ್ರಿಯೆಗಳನ್ನು ನಡೆಸಲಾಯಿತು. ತಾಂತ್ರಿಕ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತಿಮವಾಗಿ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಅವರಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿ.ಎಲ್.ಡಿ.ಇ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಾಗಿರುವುದು ಗಮನಾರ್ಹವಾಗಿದೆ. ಆಯ್ಕೆಯದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಅಧಿಕೃತ ನೇಮಕಾತಿ ಪತ್ರವನ್ನು (Offer Letter) ನೀಡಲಾಯಿತು.
ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ವತಿಯಿಂದ ಸಹಾಯಕ ವ್ಯವಸ್ಥಾಪಕ ಎಚ್. ಆರ್. ಅಂಶಿತ, ಸಹಾಯಕ ವ್ಯವಸ್ಥಾಪಕ(ಕಾರ್ಯಾಚರಣೆ) ನರಸಿಂಹನ್ ಅವರು ನೇಮಕಾತಿ ನಡೆಸಿದರು.
ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಪ್ರಭುದೇವ ಬಿ. ಕಳಸಗೊಂಡ, ಉದ್ಯೋಗಾಧಿಕಾರಿ ಸುಧನ್ವ ವಿ. ಕುಲಕರ್ಣಿ, ಸಿಬ್ಬಂದಿಯಾದ ಶಿಲ್ಪಾ ಜಗದಾಳ , ಸಂತೋಷ ಹಿರೇಮಠ, ಪಾಂಡುರಂಗ ಅಸ್ಲಂಕರ, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಮೆಕ್ಯಾನಿಕಲ್ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.
ಸ್ಥಳೀಯ ಮತ್ತು ಗ್ರಾಮೀಣ ಭಾಗದ ತಾಂತ್ರಿಕ ವಿದ್ಯಾರ್ಥಿಗಳಿಗೆ ಖ್ಯಾತ ಕೈಗಾರಿಕೆ ಸಂಸ್ಥೆಯಲ್ಲಿ ಉನ್ನತ ಉದ್ಯೋಗಾವಕಾಶ ಪಡೆಯಲು ಯಶಸ್ವಿಯಾದ ಎಲ್ಲ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ ಶಾಸಕ ಸುನೀಲಗೌಡ ಬ. ಪಾಟೀಲರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

