ಕರ್ನಾಟಕ ಬಾಲವಿಕಾಸ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪತ್ರಿಕಾರಂಗದಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ಸಮರ್ಪಣಾ ಭಾವದಿಂದ ಯಾವುದೇ ಕಪ್ಪುಚುಕ್ಕೆಯಿಲ್ಲದಂತೆ ಸೇವೆಯಲ್ಲಿ ತೊಡಗಿರುವ ಹಿರಿಯ ಪತ್ರಕರ್ತ ಇಂದುಶೇಖರ ಮಣೂರ ಅವರ ಕಾರ್ಯತತ್ಪರತೆ ಶ್ಲಾಘನೀಯ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಅಭಿಪ್ರಾಯಪಟ್ಟರು.
ಬುಧವಾರ ನಗರದ ತಮ್ಮ ಗೃಹಕಚೇರಿಯಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ “ಜಿಲ್ಲಾ ರಾಜ್ಯೋತ್ಸವ” ಪುರಸ್ಕಾರ ಪಡೆದ ಪ್ರಯುಕ್ತ ’ಉದಯರಶ್ಮಿ’ ದಿನಪತ್ರಿಕೆ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸನ್ಮಾನಕ್ಕೆ ಪ್ರತಿಯಾಗಿ ಮಾತನಾಡಿದ ಇಂದುಶೇಖರ ಮಣೂರ ಅವರು, ರಾಜ್ಯೋತ್ಸವ ಗೌರವ ಹಾಗೂ ತಮ್ಮ ಸಮಾಜಮುಖಿ ಕಾರ್ಯಗಳಿಂದ ಹೆಸರಾಗಿರುವ ಮಾನವೀಯ ಕಳಕಳಿಯ ಸಂಗಮೇಶ ಬಬಲೇಶ್ವರ ಅವರ ಈ ಸನ್ಮಾನ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆಗೈಯಲು ಪ್ರೇರಣೆ ನೀಡಿದೆ ಎಂದು ಹೇಳಿದರು.
’ಉದಯರಶ್ಮಿ ’ ಪತ್ರಿಕೆಯ ಪ್ರಕಾಶಕಿ ಶೈಲಾ ಮಣೂರ ಸೇರಿದಂತೆ ಕಚೇರಿ ಸಿಬ್ಬಂದಿ ಇದ್ದರು.

