ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾನವ ಇಂದು ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಏನನ್ನೋ ಸಾಧಿಸಬೇಕೆನ್ನುವ ಹವ್ಯಾಸದಲ್ಲಿ ತನ್ನನ್ನು ತಾನು ಕಳೆದುಕೊಂಡು ಹಲವಾರು ರೋಗಗಳಿಂದ ಬಳಲುತ್ತಿರುವುದು ಕಾಣುತ್ತಿದ್ದೇವೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಜಯಪುರ ಹಾಗೂ ಸಿಕ್ಯಾಬ ಮಹಿಳಾ ಪದವಿ ಪೂರ್ವ ಕಾಲೇಜು ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ಕ್ರೀಡಾಕೂಟ ೨೦೨೬-೨೭ನೇ ಸಾಲಿನ ಕರಾಟೆ, ಈಜು, ಜಿಮ್ನಾಸ್ಟಿಕ್, ಯೋಗ, ಟೈಕೊಂಡೊ, ಬಾಸ್ಕೆಟ್‌ಬಾಲ್ ಕ್ರೀಡೆಗಳನ್ನು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಕೆ.ಎ. ಉಪ್ಪಾರ ರವರು ಉದ್ಘಾಟಿಸಿ ಮಾತನಾಡಿದರು.
ದೈಹಿಕ ಕಸರತ್ತು ಇಲ್ಲದಿರುವುದು ರೋಗಗಳಿಗೆ ಕಾರಣ. ಯಾಂತ್ರಿಕ ಬದುಕಿನಲ್ಲಿ ಏನೆಲ್ಲಾ ಸೌಲಭ್ಯಗಳಿದ್ದರು ಹತ್ತು ಹಲವಾರು ರೋಗಗಳು ನಮ್ಮನ್ನು ಆವರಿಸಿವೆ. ಇದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಇನ್ನೂ ಹಲವಾರು ರೋಗಗಳಿಂದ ಸಮಾಜ ಮುಕ್ತವಾಗಬೇಕಾದರೆ ಕ್ರೀಡೆ ಬಹುಮುಖ್ಯ. ಮಹಿಳೆಯು ತನ್ನನ್ನು ತಾನು ರಕ್ಷಣೆ ಹೊಂದಲು ಕರಾಟೆಯಂತಹ ಕ್ರೀಡೆ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಅತಿಥಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಬಿ.ಎಸ್. ಗೌರಿ ಇವರು ಮಾತನಾಡುತ್ತಾ, ಯಾವ ಸಂಪತ್ತು ಇದ್ದರೇನು ಆರೋಗ್ಯ ಸಂಪತ್ತೇ ನಿಜವಾದ ಸಂಪತ್ತು. ವ್ಯಾಯಾಮ ಯೋಗ ಇನ್ನೀತರ ಕ್ರೀಡೆಗಳಲ್ಲಿ ಭಾಗವಹಿಸುವುದು ಬಹುಮುಖ್ಯ. ಅದರಿಂದ ಸದೃಢ ದೇಹ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ಯು.ಎನ್. ಕುಂಟೋಜಿ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕ್ರೀಡೆ ಬದುಕಿಗೆ ಜೀವನೋತ್ಸಾಹ ತುಂಬುತ್ತದೆ. ದಿನನಿತ್ಯದ ಸಂತೋಷ, ಉಲ್ಲಾಸಕ್ಕೆ ಕ್ರೀಡೆ ಪೂರಕವಾಗಿದೆ. ಮುಖದಲ್ಲಿ ಕಳೆಯೊಂದಿಗೆ ದೇಹಕ್ಕೆ ಚೈತನ್ಯದಾಯಕವಾಗಿರಲು ಕ್ರೀಡೆ ಸಹಾಯಕವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಎಮ್.ಎಮ್. ಗುರಡಿ ಮಾತನಾಡಿದರು.
ವೇದಿಕೆಯಲ್ಲಿ ದೈಹಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಆರ್. ಮುತ್ತಗಿ, ಕ್ರೀಡಾ ಸಂಯೋಜಕರಾದ ಬಿ.ಎಲ್. ನಾಟಿಕಾರ, ಎಸ್.ವಿ. ರಜಪೂತ, ಕಾಂತು ಒಡೆಯರ ಆಸೀನರಾಗಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಕರಾಟೆ ಅಧ್ಯಕ್ಷ ಎ.ಎಸ್. ಪಟೇಲ, ಮುತ್ತು ಡೋಣಿ, ಪ್ರವೀಣ ವಠಾರ, ಜಗದೀಶ ರೆಡ್ಡಿ, ರಿಯಾಜಅಹ್ಮದ ಬಗಲೂರ, ವಿಜಯ ರಾಠೋಡ, ಎಮ್.ಎಸ್. ಕೆರೂರ, ಶಂಕರ ಸಣ್ಣಪ್ಪ, ರಿಯಾಜಅಹ್ಮದ ಎಮ್.ಜೆ., ಎ.ಎಮ್. ಹೆಬಳಿಕರ, ಮಂಜುಳಾ ಗಟೆಗಾರ ಇನ್ನೀತರ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಸಾದಿಯಾ ಮುರಾಳ ನಿರೂಪಿಸಿದರು. ನಾಜಿಮಾ ಪಠಾಣ ವಂದಿಸಿದರು.
ಯು.ಎನ್. ಕುಂಟೋಜಿ
ಮೊ. ೯೩೪೧೭೯೩೧೦೭
