ಬಿಜಾಪುರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಖಜಾಂಚಿ ವಿನೋದ ಖೇಡ ಸರಕಾರಕ್ಕೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯನ್ನು 371(ಜೆ ) ಮೀಸಲಾತಿಯಿಂದ ಕೈಬಿಟ್ಟಿದ್ದಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷಣ, ಯುವಜನರಿಗೆ ಉದ್ಯೋಗದಲ್ಲಿ ದೊಡ್ಡ ಅನ್ಯಾಯವಾಗುತ್ತಿದೆ ಕೂಡಲೇ ರಾಜ್ಯ ಸರಕಾರ ಜಿಲ್ಲೆಗೆ ಮೀಸಲಾತಿ ಒದಗಿಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿಕೊಟ್ಟು ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಬೇಕೆಂದು ಬಿಜಾಪುರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಖಜಾಂಚಿ ವಿನೋದ ಖೇಡ ಸರಕಾರಕ್ಕೆ ಆಗ್ರಹಿಸಿದರು.
ಅವರು ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಹೋರಾಟ ಕುರಿತು ವಿಜಯಪುರ ಜಿಲ್ಲಾ 371(ಜೆ ) ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪತ್ರ ಚಳುವಳಿಯಲ್ಲಿ ಮಾತನಾಡಿದರು.
ಜಿಲ್ಲೆಯ ಮಕ್ಕಳಿಗೆ ಶಿಕ್ಷಣ ಮತ್ತು ಯುವಜನರಿಗೆ ಉದ್ಯೋಗಾವಕಾಶಕ್ಕಾಗಿ 371(ಜೆ ) ಮೀಸಲಾತಿ ಅತ್ಯಂತ ಅವಶ್ಯಕವಾಗಿದೆ, ವಿಜಯಪುರ ಜಿಲ್ಲಾ 371(ಜೆ ) ಹೋರಾಟ ಸಮಿತಿಯ ಹೋರಾಟಕ್ಕೆ ಜಿಲ್ಲೆಯ ಪ್ರತಿಗ್ರಾಮದ ಜನ ಬೆಂಬಲಿಸಬೇಕೆಂದು ಮನವಿ ಮಾಡಿದ ಅವರು ಇಂಡಿ ತಾಲೂಕಿನ ಖೇಡಗಿಯ ಸ್ವಾಮಿ ರಾಮಾನಂದ ತೀರ್ಥರು ಹೈದ್ರಾಬಾದ್ ವಿಮೋಚನಾ ಚಳುವಳಿಯ ನೇತೃತ್ವ ವಹಿಸಿದ್ದರಿಂದ ಆ ಪ್ರಾಂತ ಭಾರತ ಒಕ್ಕೂಟದ ಭಾಗವಾಗಿದೆ ಎಂಬುದು ಸರಕಾರ ಮರೆಯಬಾರದು ಅತ್ಯಂತ ಹಿಂದುಳಿದ ಮತ್ತು ವಿಮೋಚನಾ ಚಳುವಳಿ ನೇತೃತ್ವ ವಹಿಸಿದ ವಿಜಯಪುರ ಜಿಲ್ಲೆಗೆ ಕೂಡಲೇ ಮೀಸಲಾತಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಪತ್ರ ಚಳುವಳಿಯಲ್ಲಿ 180 ಜನ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ 371ಜೆ ಮೀಸಲಾತಿಗೆ ಒತ್ತಾಯಿಸಿ ಪತ್ರ ಬರೆದು ಹೋರಾಟಕ್ಕೆ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ದತ್ತಾತ್ರೇಯ ಕುಲಕರ್ಣಿ, ಎಂ ಎಂ ಮಾಣಿ,ವೈ ಜಿ ಬಿರಾದಾರ, ಸಿದ್ರಾಮ ಹಳ್ಳೂರ ಮಾತನಾಡಿದರು.
ಈ ಸಂದರ್ಭದಲ್ಲಿ ನಂದಾ ನಾಯಿಕ, ಹಣಮಂತರಾಯ ದೇವರಮನಿ, ಶೀಲು ಕಲ್ಲೋಳ್ಳಿ, ಸುನೀಲ ಅಥನೂರ, ಉದಯಕುಮಾರ ಪೂಜಾರಿ, ದೇವಯ್ಯ ಹಿರೇಮಠ, ಕಾಶೀನಾಥ ಸಾಳುಂಕೆ, ಶಾಂತಾಬಾಯಿ ಬ್ಯಾಳಿ, ರಾಜು ನಡಕಟ್ಟಿ, ಆಕಾಶ ಬಿದರಕೋಟಿ, ರಾಜು ಉದಂಡೆ ಸೇರಿದಂತೆ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

