ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಭಾಷೆಗೆ ಎರಡುವರೆ ಸಾವಿರ ವರ್ಷಗಳ ಶ್ರೀಮಂತ ಇತಿಹಾಸವಿದೆ. ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವೇ ಮಧುರ ಕನ್ನಡ ಭಾಷೆಯಾಗಿದೆ ಎಂದು ಪ್ರೊ. ಯು.ಎನ್. ಕುಂಟೋಜಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಭಾ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ೮೭ನೇಯ ಶಿವಾನುಭವ ಗೋಷ್ಠಿಯಲ್ಲಿ ಕನ್ನಡ ನಾಡು, ನುಡಿ ಕುರಿತು ಅವರು ಮಾತನಾಡಿದರು.
ಕನ್ನಡ ಭಾಷೆ ನಮ್ಮೆಲ್ಲರ ಬದುಕಿಗೆ ಪ್ರೇರಕವಾಗಿದೆ. ಅದು ನಮ್ಮ ಬುದ್ಧಿಶಕ್ತಿ, ವಿವೇಕ ವಿಸ್ತರಿಸಿ ನಮ್ಮ ಚಿಂತನೆಗಳಿಗೆ ಆಕಾರ ನೀಡುತ್ತದೆ. ಕನ್ನಡ ನಾಡು ನಮಗೆ ಬದುಕು, ನೆಮ್ಮದಿ ಸಿರಿಸಂಪತ್ತಿನ ಜೊತೆಗೆ ಗೌರವ ಕೊಟ್ಟಿದೆ. ಹೀಗಾಗಿ ಕನ್ನಡ ತಾಯಿಯ ಸೇವೆ ನಮ್ಮ ಮೊದಲ ಆದ್ಯತೆ. ನಾಡಿನ ಸಾಂಸ್ಕೃತಿ, ಪರಂಪರೆಯ ಸೊಗಡು ಅಡಗಿದೆ. ಕನ್ನಡ ಅಂದರೆ ಖುಷಿ. ನವೆಂಬರ್ ೧, ನಂಬರ ೧ ಆಗಬೇಕು. ಕನ್ನಡ ಜೀವನದ ಕನ್ನಡಿಯಾಗಬೇಕು. ಅದು ನಾಲಿಗೆ ಭಾಷೆಯಾಗದೆ ಹೃದಯದ ಭಾಷೆಯಾಗಬೇಕು. ಕನ್ನಡ ಬೆಳವಣಿಗೆಗೆ ಉಳಿಸುವ ಜವಾಬ್ದಾರಿ ನಮ್ಮದಾಗಬೇಕು. ಅದೊಂದು ಭಾವೈಕ್ಯತೆಯ ತಾಣ. ಕನ್ನಡ ಶ್ರೀಮಂತ ಭಾಷೆ ಎಂದು ಹೇಳಿದರು.
ಮಹಾಸಭೆಯ ನಿರ್ದೇಶಕ ಡಾ. ಸಂಗಮೇಶ ಮೇತ್ರಿ ಮಾತನಾಡಿ, ಕನ್ನಡಿಗರಾದ ನಾವು ನಮ್ಮ ನಾಡಿನ ಜಲ, ಭಾಷೆ, ಸಾಂಸ್ಕೃತಿಗಳ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಎಂದರು.
ಮಹಾಸಭೆಯ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ೭೧ನೇಯ ಕನ್ನಡ ರಾಜ್ಯೋತ್ಸವ ಹಬ್ಬವಿದ್ದಂತೆ, ಹುಯಿಲಗೋಳ ನಾರಾಯಣರು ರಚಿಸಿದ ಉದಯವಾಗಲಿ ನಮ್ಮ ಚಲವು ಕನ್ನಡ ನಾಡು ನಮಗೆಲ್ಲ ಮಾದರಿ. ಕನ್ನಡ ಭಾಷೆ ಅಭಿಮಾನ ಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜ್ಯೋತಿ ಬಾಗಲಕೋಟ, ಸೋಮಶೇಖರ ಕುರ್ಲೆ, ಅಶ್ವಿನಿ ಅಣೆಪ್ಪನವರ ಕನ್ನಡ ಗೀತೆ ಪ್ರಸ್ತುತಪಡಿಸಿದರು. ನಂತರ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ಮಹಾಸಭೆಯ ಉಪಾಧ್ಯಕ್ಷ ಸಹದೇವ ನಾಡಗೌಡ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎನ್. ಶಿವಣಗಿ, ಜಗದೀಶ ಮೋಟಗಿ, ಓಂಕಾರ ಅಥರ್ಗಾ, ಮೋದಿ ದಂಪತಿ, ಮಲ್ಲಿಕಾರ್ಜುನ ಅಮರೆಣ್ಣವರ, ಎಮ್.ವಾಯ್. ಜಾವಡಗಿ, ಸುಭಾಸ ಬೆಟಗೇರಿ, ವಿಠ್ಠಲ ತೇಲಿ, ಕಾಶಿನಾಥ ಅಣೆಪ್ಪನವರ, ಶರಣರು ಶರಣೇಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

