ವೀರ ಸಾವರ್ಕರ್ ಭಾವಚಿತ್ರ ಅಂಟಿಸಿದ ಪ್ರಕರಣ | ವಿಜಯಪುರ ನ್ಯಾಯಾಲಯದಿಂದ ಬಿಡುಗಡೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 2021ರಲ್ಲಿ ವಿಜಯಪುರದ ಕಾಂಗ್ರೆಸ್ ಕಚೇರಿಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರದ ಸ್ಟಿಕ್ಕರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮುಖಂಡ ಹಾಗೂ ಆಲಮೇಲದ ಬಸವರಾಜ ಹೂಗಾರ ಅವರನ್ನು ವಿಜಯಪುರದ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯವು ನಿರ್ದೋಷಿಯೆಂದು ಘೋಷಿಸಿ ಬಿಡುಗಡೆಗೊಳಿಸಿದೆ.
ವೀರ ಸಾವರ್ಕರ್ ಅವರ ಭಾವಚಿತ್ರ ಅಂಟಿಸುವ ಮೂಲಕ ಸಾರ್ವಜನಿಕರಲ್ಲಿ ದ್ವೇಷ, ವೈಷಮ್ಯ ಉಂಟುಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಯೊಬ್ಬರು ದೂರು ದಾಖಲಿಸಿದ್ದರು. ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಕಲಂ 447 ಮತ್ತು 505(1)(b) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಜಯಪುರದ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹೇಶ್ ಚಂದ್ರಕಾಂತ್ ಅವರು ದಿನಾಂಕ 02-11-2026ರಂದು ಸಿಆರ್ಪಿಸಿ ಕಲಂ 248(1)ರ ಅಡಿಯಲ್ಲಿ ಆರೋಪಗಳಿಂದ ಬಸವರಾಜ ಹೂಗಾರ ಅವರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಅವರ ಜಾಮೀನು ಬಾಂಡ್ಗಳನ್ನು ರದ್ದುಗೊಳಿಸುವಂತೆಯೂ ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿ ಬಸವರಾಜ ಹೂಗಾರ ಅವರ ಪರವಾಗಿ ಹಿರಿಯ ನ್ಯಾಯವಾದಿ ತುಳಸಿರಾಮ್ ಸೂರ್ಯವಂಶಿ ಅವರು ವಾದ ಮಂಡಿಸಿದ್ದರು.

