– ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿ ಮೊ:೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನನ್ನ ಪ್ರಾಣದ ಪ್ರೇಮವೇ,
ನಿನ್ನ ಅಂತರಂಗದ ದೀಪದಿಂದ ಮೂಡಿಬಂದ ಅಕ್ಷರಗಳ ಒಂದೊಂದು ಹನಿಯೂ ನನ್ನ ಎದೆಯ ಮಣ್ಣಿನ ಮೇಲೆ ಅಮೃತದ ಮಳೆಯಂತೆ ಸುರಿದಿದೆ. ನಿನ್ನ ಪತ್ರ ಕೇವಲ ಕಾಗದದ ಚೂರಲ್ಲ; ಅದು ನನ್ನ ಜೀವದ ಸೆಲೆಗೆ ನೀನು ತೊಡಿಸಿದ ಒಲವಿನ ಬಳೆ. ಅಂದು ನದಿಯ ತಿರುವಿನ ಆಲದ ಮರದ ನೆರಳಿನಲ್ಲಿ, ಕಲ್ಲಿನ ಬೆಂಚಿನ ಮೇಲೆ ಕುಳಿತು ನಾನು ಹೊಂಬಣ್ಣದ ಕನಸು ಕಾಣುತ್ತಿದ್ದಾಗ ನನ್ನ ಕಣ್ಣÉದುರು ಬಂದ ನಿನ್ನ ತೇಜಸ್ಸು ಇಂದಿಗೂ ನನ್ನ ಒಳಗಣ್ಣಿನಲ್ಲಿ ನರ್ತಿಸುತ್ತಿದೆ. ಹೊಲದ ಕೆಲಸ ಮುಗಿಸಿ ಬೆವರಿನ ಹನಿಗಳನ್ನು ಹಣೆಯ ಮೇಲೆ ಮುದ್ದಿನ ಮುತ್ತುಗಳಂತೆ ಹೊತ್ತು ಬಂದ ನಿನ್ನ ಆ ಕಟ್ಟುಮಸ್ತಾದ ರೂಪವೇ ನನ್ನ ಬದುಕಿನ ನಿಜವಾದ ಐಶ್ವರ್ಯ.ನೀನು ಬಡತನದ ಮಾತಾಡಬೇಡ ಗೆಳೆಯ. ನಿನ್ನ ಒರಟು ಕೈಗಳಲ್ಲಿ ಜೇಡಿಮಣ್ಣು ಸಿಕ್ಕರೆ ಸಾಕು, ಅದು ಶಿಲ್ಪಿಯ ಕನಸಿಗೆ ಜೀವ ಬಂದಂತೆ ರೂಪಾಂತರಗೊಳ್ಳುವ ಕಲೆಯ ಶ್ರೀಮಂತಿಕೆ ನಿಮ್ಮಲ್ಲಿರುವಾಗ, ಕಾವಾದ ಕಲ್ಲಿನಂತಿರುವ ನಿನ್ನ ಭುಜಗಳು ನನಗೆ ಆಸರೆಯಾಗಿ ನಿಲ್ಲುವಾಗ ನನಗಾವ ಬಂಗಾರದ ಅರಮನೆಯ ಹಪಾಹಪಿಯೂ ಇಲ್ಲ. ಸಿರಿತನದ ಅರಮನೆಗಿಂತ ನಿನ್ನ ಪ್ರೀತಿಯ ಗುಡಿಸಲೇ ನನಗೆ ಪರಮ ಪವಿತ್ರವಾದ ಮಂದಿರ. ಕಣ್ಣಿಗೆ ಕಾಣದ ಭೌತಿಕ ಹಣದ ಮರೆಯಲ್ಲಿ ನೆಮ್ಮದಿ ಹುಡುಕುವ ಈ ಜಗದ ಮನುಷ್ಯರಿಗಿಂತ, ಅಂತರಂಗದ ಶುದ್ಧತೆಯಲ್ಲಿ ನನ್ನನ್ನು ಪ್ರೀತಿಸುವ ನಿನ್ನ ಮುಗ್ಧತೆ ನನಗೆ ಕೋಟಿ ಜನ್ಮದ ಪುಣ್ಯದಂತೆ ಭಾಸವಾಗುತ್ತಿದೆ. ನನ್ನ ಕೃಷ್ಣವರ್ಣದ ಮುಂಗುರುಳನ್ನು ಪ್ರೇಮದ ಸಾಲುಗಳೆಂದು ವರ್ಣಿಸಿದ ನಿನ್ನ ಕಾವ್ಯದ ನಾದಕ್ಕೆ ನನ್ನ ಹೃದಯ ಬೆಣ್ಣೆಯಂತೆ ಕರಗಿದೆ. ಹೆದರಿದ ಹರಿಣಿಯಂತೆ ನಾನು ನಿಮ್ಮನ್ನು ನೋಡಿದಾಗ, ನನ್ನ ಒಣಗಿದ ತುಟಿಗಳ ಮೇಲೆ ಮೂಡಿದ ಬೆಳದಿಂಗಳ ನಗೆಗೆ ಕಾರಣವೇ ನಿನ್ನ ಕಣ್ಣುಗಳಲ್ಲಿ ಹೊಳೆಯುತ್ತಿದ್ದ ನಿಷ್ಕಲ್ಮಶ ಪ್ರೇಮದ ಸೆಲೆ. ಜಗತ್ತು ಸೌಂದರ್ಯಕ್ಕೆ ಬೆಲೆ ಕಟ್ಟಬಹುದು, ಆದರೆ ನನ್ನ ಗುಣದ ಪಾವಿತ್ರ್ಯತೆಯನ್ನೇ ಗುರುತಿಸಿ ನನ್ನ ನೆರಳನ್ನೇ ಆರಾಧಿಸುವ ನಿನ್ನ ಹೃದಯಕ್ಕೆ ನಾನು ಎಂದೋ ಶರಣಾಗಿದ್ದೇನೆ.
ಬದುಕಿನ ಈ ಮಹಾಪಯಣದಲ್ಲಿ ನನಗೀಗ ಸಂಪೂರ್ಣವಾಗಿ ಅರ್ಥವಾಗಿದೆ; ಪ್ರೀತಿಯೆಂದರೆ ಕೇವಲ ಎರಡು ದೇಹಗಳ ಆಕರ್ಷಣೆಯಲ್ಲ, ಅದು ಒಂದೇ ಜ್ಯೋತಿಯಿಂದ ಬೆಳಗುವ ಎರಡು ಹಣತೆಗಳ ದಿವ್ಯ ಮಿಲನ. ಲೌಕಿಕ ಜಗದ ಮನುಷ್ಯರು ಪ್ರೀತಿಯನ್ನು ಕೇವಲ ರಕ್ತಮಾಂಸದ ಬಣ್ಣಗಳಲ್ಲಿ ಹುಡುಕುತ್ತಾರೆ. ಆದರÉ ನನ್ನ ಪಾಲಿಗÉ ನಿಮ್ಮ ಪ್ರೀತಿಯೆಂದರೆ ಕಗ್ಗತ್ತಲ ಕಾನನದಲ್ಲಿ ದಾರಿ ಕಾಣದೆ ತಡಕಾಡುವ ಜೀವಕ್ಕೆ ಯಾರೋ ಒಬ್ಬರು ಹಚ್ಚುವ ಜ್ಞಾನದ ದೀಪದಂತೆ ಸದಾ ದಾರಿ ತೋರುವ ಸಂಜೀವಿನಿ. ಮಣ್ಣಿನ ಮಡಕೆಯು ಒಡೆದು ಧೂಳಾದರೂ ಅದರ ಒಳಗಿದ್ದ ನೀರು ಹೇಗೆ ನೆಲದ ತೇವವಾಗಿ ಹಸಿರನ್ನು ಉಳಿಸುತ್ತದೆಯೋ, ಹಾಗೆಯೇ ಕಾಲದ ಚಕ್ರದ ಅಬ್ಬರಕ್ಕೆ ನಮ್ಮ ದೇಹಗಳು ಮಣ್ಣಾದರೂ ನಮ್ಮೊಳಗಿನ ಈ ಹಸಿ ಪ್ರೇಮದ ಸೌರಭವು ಈ ಮಣ್ಣಿನ ಕಣಕಣದಲ್ಲೂ ಅಮರವಾಗಿ ಉಸಿರಾಡುತ್ತದೆ. ನಿಮ್ಮ ಎದೆಯ ಗೂಡಿನಲ್ಲಿ ನನ್ನ ಉಸಿರಿನ ಹಕ್ಕಿ ನಿಶ್ಚಿಂತೆಯಾಗಿ ಮಲಗಿದೆ. ಬದುಕಿನ ಬಿರುಗಾಳಿ ಎಷ್ಟೇ ಜೋರಾಗಿ ಬೀಸಿದರೂ, ನಿನ್ನ ಕಾವಾದ ಭುಜಗಳೆಂಬ ಕೋಟೆಯ ನೆರಳಿನಲ್ಲಿ ನನಗೆ ಯಾವುದೇ ಸಾವಿನ ದೂತನ ಅಥವಾ ಜನರ ಟೀಕೆಗಳ ಭಯವೂ ಕಾಡದು. ನೀವು ನನ್ನ ಬಾಳಿನ ಕಲ್ಪವೃಕ್ಷ, ನಾನು ನಿಮ್ಮ ನೆರಳನ್ನೇ ನಂಬಿ ಹಬ್ಬಿದ ಮುಗ್ಧ ಮಾಧವಿ ಬಳ್ಳಿ. ಲೋಕದ ಶ್ರೀಮಂತರು ಚಿನ್ನದ ನಾಣ್ಯಗಳ ಲೆಕ್ಕಾಚಾರದಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುವಾಗ, ನಾವು ಪ್ರೀತಿಯ ಕಣ್ಣೀರಿನ ಹನಿಗಳಲ್ಲೇ ಕೋಟಿ ಸಾಮ್ರಾಜ್ಯದ ಸೌಖ್ಯವನ್ನು ಕಾಣುತ್ತಿದ್ದೇವೆ. ಹಣದ ಶ್ರೀಮಂತಿಕೆಗಿಂತ ಗುಣದ ಶ್ರೀಮಂತಿಕೆಯೇ ಶ್ರೇಷ್ಠವೆಂಬ ಸತ್ಯವನ್ನು ನಿನ್ನ ಒಂದೊಂದು ಅಕ್ಷರವೂ ನನಗೆ ಕಲಿಸಿದೆ. ಬಂಗಾರದ ಒಡವೆಗಳ ಭಾರ ನನಗೇಕೆ ಗೆಳೆಯಾ?
ನಿನ್ನ ಒಲವಿನ ಕಾವ್ಯದ ಒಂದೊಂದು ಸಾಲೇ ನನ್ನ ಕೊರಳಿನ ಅತ್ಯಂತ ಅಮೂಲ್ಯವಾದ ಮುತ್ತಿನ ಹಾರವಾಗಿದೆ. ನಮ್ಮಿಬ್ಬರ ಅಂತರಂಗದ ಶುದ್ಧತೆಯೇ ಪಾವಿತ್ರ್ಯತೆಯಂತೆ ಸದಾ ಹರಿಯುವ ಜೀವರಾಶಿಯಾಗಿದೆ. ಈ ಜಗದ ಬಾಹ್ಯ ಗದ್ದಲಗಳೆಲ್ಲವೂ ಕೇವಲ ಸುಟ್ಟ ಬೂದಿಯಂತೆ ಕರಗಿ ಹೋಗಲಿ; ನಮ್ಮಿಬ್ಬರ ಪ್ರೇಮದ ದಿವ್ಯ ಬೆಳಕೊಂದೇ ಜಗವ ಗೆಲ್ಲುವ ಅಂತಿಮ ಅಸ್ತ್ರವಾಗಿ ಈ ಹಸಿರು ಒಡಲಿನಲ್ಲಿ ಎಂದೆಂದಿಗೂ ವಿಜೃಂಭಿಸಲಿ! ಪ್ರಣಯ ನೆನಪುಗಳ ಸವಿ ಜೇನು ಮತ್ತು ವಿಜಯದ ಪಯಣ ನೆನಪಿದೆಯೇ ನಿನಗೆ? ಅಂದು ಹಸಿರು ಹೊಲಗಳ ಮರೆಯಲ್ಲಿ ಸುಡುಬಿಸಿಲಿನ ತಾಪ ತಾಳಲಾರದೆ ನಾವಿಬ್ಬರು ಆ ಬಾವಿಯ ಕಲ್ಲಿನ ಬದಿಯಲ್ಲಿ ಕುಳಿತಾಗ, ನೀನು ತಂದಿದ್ದ ಮಣ್ಣಿನ ಹೂಜಿಯ ತಣ್ಣನೆಯ ನೀರನ್ನು ನನ್ನ ಅಂಗೈಯಲ್ಲಿ ಸುರಿದಿದ್ದಿರಿ. ಆ ಕ್ಷಣದಲ್ಲಿ ನಿನ್ನ ಬೆರಳುಗಳು ನನ್ನ ಬೆರಳುಗಳನ್ನು ಸ್ಪರ್ಷಿಸಿದಾಗ, ವಸಂತನ ಆಗಮನಕ್ಕೆ ಕಂಪಿಸಿದ ಕಲ್ಪವೃಕ್ಷದಂತೆ ನನ್ನ ಇಡೀ ದೇಹ ರೋಮಾಂಚನಗೊಂಡಿತ್ತು. ನನ್ನ ಜಡೆಗೆ ಮುಡಿಸಲು ನೀನು ತಂದಿದ್ದ ಕಾಡು ಮಲ್ಲಿಗೆಯ ಹೂವುಗಳು, ನಿನ್ನ ಕೈಗಳ ಬೆಚ್ಚಗಿನ ಒಲುಮೆಗೆ ನಾಚಿ ಇನ್ನೂ ಮೊಗ್ಗಾಗಿಯೇ ಮಲಗಿದ್ದವು.

ನನ್ನ ಕೆನ್ನೆಯ ಮೇಲಿನ ಮುಂಗುರುಳನ್ನು ನಿನ್ನ ಒರಟು ಬೆರಳುಗಳಿಂದ ಸರಿಸಿದಾಗ, ನಿನ್ನ ಕಣ್ಣುಗಳಲ್ಲಿ ಮೂಡಿದ ಪ್ರೇಮದ ತೇಜಸ್ಸು ಕಾರ್ಗತ್ತಲನ್ನು ಸೀಳುವ ಜ್ಞಾನದ ಜ್ಯೋತಿಯಂತೆ ನನ್ನ ಅಂತರಂಗವನ್ನು ಬೆಳಗಿತ್ತು. ಮತ್ತೊಂದು ಮಧುರ ನೆನಪು ನನ್ನೆದೆಯಲ್ಲಿ ಹೊಳೆಯುತ್ತಿದೆ; ಅಂದು ಮುಸ್ಸಂಜೆಯ ಹೊತ್ತಿಗೆ ಹೊಲದಲ್ಲಿ ಭತ್ತದ ಕದಿರುಗಳನ್ನು ಹೆಕ್ಕುತ್ತಿದ್ದಾಗ, ನನ್ನ ಕಾಲಿಗೆ ಮುಳ್ಳು ಚುಚ್ಚಿ ನಾನು ನೋವಿನಿಂದ ನರಳಿದಾಗ ನೀನು ಓಡೋಡಿ ಬಂದು ನನ್ನ ಪಾದವನ್ನು ನಿನ್ನ ಮಡಿಲ ಮೇಲೆ ಇಟ್ಟುಕೊಂಡಿದ್ದೆ. ಜಗದ ಕಣ್ಣೀರನ್ನೆಲ್ಲ ನಿನ್ನ ಕಣ್ಣುಗಳಲ್ಲೇ ತುಂಬಿಕೊಂಡವನಂತೆ, ಆ ಮುಳ್ಳನ್ನು ತೆಗೆದು ನಿನ್ನ ತುಟಿಗಳಿಂದ ನನ್ನ ಪಾದಕ್ಕೆ ಮೃದುವಾಗಿ ಚುಂಬಿಸಿದ ಆ ಒಂದು ಕ್ಷಣ ಇದೆಯಲ್ಲ, ಅದು ದೇವಲೋಕದ ಅಮೃತ ಧಾರೆಗಿಂತಲೂ ಪವಿತ್ರವಾಗಿತ್ತು. ನಿನ್ನ ಆ ಮಮತೆಯ ಸ್ಪರ್ಶಕ್ಕೆ ನನ್ನ ನೋವೆಲ್ಲ ಕರಗಿ, ಕಹಿಯಾದ ಬದುಕು ಸಕ್ಕರೆಯ ಸವಿಯಂತೆ ಮಧುರವಾಗಿ ರೂಪಾಂತರಗೊಂಡಿತ್ತು. ಆ ನೆನಪುಗಳೇ ಇಂದಿಗೂ ನನ್ನ ಉಸಿರಾಗಿ ನನ್ನನ್ನು ಕಾಯುತ್ತಿವೆ. ಅಂದು ಮುಗಿಲಿನಲ್ಲಿ ಕಾರ್ಮೋಡ ಕರಗಿ ಸಣ್ಣಗೆ ಮಳೆಹನಿಗಳು ಸುರಿಯತೊಡಗಿದಾಗ, ಗುಡುಗು ಸಿಡಿಲಿನ ಅಬ್ಬರಕ್ಕೆ ಹೆದರಿ ನಾನು ನಿನ್ನ ಎದೆಯ ಮೇಲೆ ವಾಲಿ ತೋಳುಗಳಿಂದ ಅಪ್ಪಿಕೊಂಡ ಆ ಕ್ಷಣ ನನ್ನ ಜನ್ಮದ ಅತ್ಯಂತ ಸುಂದರ ಸುದಿನ. ಬಳ್ಳಿಯೊಂದು ಹೆಮ್ಮರವನ್ನು ಆಸೆಯಿಂದ ಆಲಂಗಿಸಿದಂತೆ ನನ್ನ ಇಡೀ ಜೀವ ನಿನ್ನ ಬೆಚ್ಚನೆಯ ಎದೆಗೆ ಒಪ್ಪಿಸಿಕೊಂಡಾಗ ಮೈಯೆಲ್ಲ ರೋಮಾಂಚನಗೊಂಡಿತ್ತು.
ಹಾಲಿನ ಬಣ್ಣದ ರವಿಕೆಗೆ ಕೆಂಪು ಜರಿಯಂಚಿನ ಲಂಗ ಮೈಗಂಟಿಕೊಂಡಿದ್ದ ಆ ತಂಪಿನ ನಡುವೆಯೂ ನಿನ್ನ ಅಪ್ಪುಗೆಯ ಬೆಚ್ಚಗಿನ ತಂಪು ನನ್ನನ್ನು ಕಾಯುತ್ತಿತ್ತು. ನೀನು ನುಡಿದ ‘ಐ ಲವ್ ಯೂ’ ಎಂಬ ಆ ಮೂರು ಪದಗಳು ನನ್ನ ಕಿವಿಯಲ್ಲಿ ಬಿರುಗಾಳಿಯ ಅಬ್ಬರದ ನಡುವೆಯೂ ಕೋಗಿಲೆಯ ಪ್ರೇಮಗೀತೆಯಂತೆ ಅನುರಣಿಸಿತು. ನನಗಾಗ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಷ್ಟೇ ಅಲ್ಲ, ಇಡೀ ಪ್ರಕೃತಿಯೇ ನನ್ನ ಮಡಿಲಿಗÉ ಬಿದ್ದಷ್ಟು ಆನಂದವಾಯಿತು. ಜಗತ್ತು ನಮ್ಮ ಪ್ರೀತಿಯ ಸುತ್ತ ಅಹಂಕಾರದ ಎಷ್ಟೇ ದೊಡ್ಡ ಕೋಟೆಗಳನ್ನು ಕಟ್ಟಿದರೂ, ನೀನು ಹೇಳಿದಂತೆ ಹರಿಯುವ ನದಿಗೆ ಅಣೆಯ ಭಾಷೆ ಎಂದಿಗೂ ಅರ್ಥವಾಗುವುದಿಲ್ಲ. ಅದು ತನ್ನ ಸಹಜ ಹರಿವಿನಿಂದ ಎಲ್ಲ ಬೇಲಿಗಳನ್ನೂ ಕರಗಿಸಿ ಕಡಲನ್ನು ಸೇರಿಯೇ ತೀರುತ್ತದೆ.

ನಿನ್ನೆ ಜನರು ನಮ್ಮ ನಡುವೆ ಎಳೆದ ಗರ್ವದ ಗೆರೆಗಳೆಲ್ಲವೂ ಇಂದು ಕಾಲದ ಚಕ್ರದಡಿಯಲ್ಲಿ ಧೂಳೀಪಟವಾಗಿ ಮಣ್ಣಾಗುತ್ತಿವೆ. ಬದುಕಿನಲ್ಲಿ ಬರುವ ನೋವುಗಳು ಕೇವಲ ಬಿರುಗಾಳಿಯಂತೆ ಬಂದು ಹೋಗುವ ಒಂದು ಸಣ್ಣ ಭಾಗವಷ್ಟೇ ಹೊರತು ಅದೇ ನಮ್ಮ ಇಡೀ ಜೀವನವಲ್ಲ. ನಿನ್ನ ಪ್ರೀತಿಯ ಹಿತದ ತಂಪಿನಲ್ಲಿ, ಹಸಿರು ಗದ್ದೆಯ ಬದಿಯಲಿ ಕುಳಿತು ನೀನು ಕೊಡುವ ಒಣ ರೊಟ್ಟಿಯೂ ನನಗೆ ಅಮೃತದ ತುತ್ತಿಗಿಂತ ಮಿಗಿಲಾದುದು. ನಾವು ಬೇರೆ ಬೇರೆ ಎಂಬ ಭೇದವು ಸಂಪೂರ್ಣವಾಗಿ ಅಳಿದು ಹೋಗಿದೆ. ನನ್ನೊಳಗಿನ ದೀಪ ನೀನೇ ಆಗಿರುವೆ. ಲೋಕದ ಟೀಕೆಗಳಿಗೆ, ನಿಂದನೆಗಳಿಗೆ ಕಿವಿ ಮುಚ್ಚಿಕೊಂಡು ಕೇವಲ ನಿನ್ನ ಉಸಿರಿನ ರಾಗವನ್ನು ಆಲಿಸುತ್ತಾ, ನಿನ್ನ ಹೆಜ್ಜೆಯಲ್ಲೇ ನನ್ನ ಹೆಜ್ಜೆಯಿಟ್ಟು ಕೊನೆಯುಸಿರಿನ ತನಕ ಮುನ್ನಡೆಯುವುದೇ ನನ್ನ ಬದುಕಿನ ಪರಮ ಸಂಕಲ್ಪವಾಗಿದೆ. “ಸಿರಿತನದ ಅರಮನೆಗೆ ನಾ ಮಾರುಹೋಗಲಾರೆ. ನಿನ್ನ ಒಲುಮೆಯ ಗುಡಿಸಿಲಿರಲು, ಜಗದ ಕಣ್ಣೀರನ್ನೆಲ್ಲ ತೊಳೆದುಹಾಕಲಿ ನಮ್ಮಿಬ್ಬರ ನೈಜ ಪ್ರೇಮದ ಒಡಲಿನಲ್ಲಿ. ಕಾಲದ ಚಕ್ರದಲ್ಲಿ ಕೋಟೆಗಳೇ ಕರಗಲಿ ನಮ್ಮ ಒಲವಿನ ಉಸಿರು ಹಸಿರಾಗಿರಲಿ, ನಿನ್ನ ಎದೆಯ ಹಣತೆಯಲಿ ನನ್ನ ಜನ್ಮ ಸಾರ್ಥಕ ನನ್ನೆದೆಯ ಪ್ರೇಮವೇ!”
ಇಂತಿ,
ನಿನ್ನವಳೇ ಆದ ಅಂತರAಗದ
ಚಂದ್ರಿಕೆ.


