ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕನ್ನಡಿಗರ ಸ್ವಾಭಿಮಾನವನ್ನು ಜಾಗೃತಗೊಳಿಸುವುದರ ಜತೆಗೆ ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದ್ವಜಾರೋಹಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಚಳವಳಿಯ ಹಿಂದೆ ಅನೇಕ ಮಹನೀಯರ ಪರಿಶ್ರಮ, ಹೋರಾಟ ಮತ್ತು ತ್ಯಾಗ ಅಡಗಿದೆ. ಅವರ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು. ಏಕೀಕರಣದ ಫಲವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯದ ಏಕತೆ, ಸಮೃದ್ಧಿ ಹಾಗೂ ಸಾಮರಸ್ಯವನ್ನು ಉಳಿಸಿಕೊಂಡು, ಅಭಿವೃದ್ಧಿ ಹೊಂದಿದ ನಾಡನ್ನು ಕಟ್ಟುವ ಸಂಕಲ್ಪ ಪ್ರತಿಯೊಬ್ಬರದ್ದಾಗಬೇಕು ಎಂದರು.
ರಾಷ್ಟ್ರ ದ್ವಜಾರೋಹಣ ನೆರವೇರಿಸಿ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಮಾತನಾಡಿ, ಕನ್ನಡ ನಾಡಿನ ಇತಿಹಾಸ, ಕರ್ನಾಟಕ ಏಕೀಕರಣದ ಹೋರಾಟ ಹಾಗೂ ಕನ್ನಡಿಗರ ಸ್ವಾಭಿಮಾನದ ಮಹತ್ವವನ್ನು ವಿವರಿಸಿದರು.
ಈ ವೇಳೆ ತಾಪಂ ಇಒ ಅನಿಲ ಹಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ, ಪುರಸಭೆ ಪೌರಾಯುಕ್ತ ರವಿ ಶಿರಗುಪ್ಪಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ, ಸಿಪಿಐ ಸುನೀಲ ಮೂಲಿಮನಿ, ಪಿಎಸ್ಐ ಶ್ರೀಕಾಂತ ಕಾಂಬಳೆ, ಕೃಷಿ ಅಧಿಕಾರಿ ಪ್ರಶಾಂತ ಸಾಣಿ, ಕಂದಾಯ ನೀರಿಕ್ಷಕ ಆಯ್.ಎ.ಮಕಾಂದಾರ, ಎಡಿಎಲ್ಆರ್ ಶಾಂತಪ್ಪ ಅಗಸಬಾಳ, ಶರಣು ಲಂಗೋಟಿ, ರಾಜಶೇಖರ ಕೂಚಬಾಳ, ವೈ.ಸಿ.ಮಯೂರ, ಸಿದ್ಧಲಿಂಗ ಚೌಧರಿ, ಸತೀಶ ಬಸರಕೋಡ, ಸಂದೀಪ ಚೌರ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

