ಮುಳವಾಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ “ಉದಯರಶ್ಮಿ” ದಿನಪತ್ರಿಕೆಯ ಸಂಪಾದಕ ಇಂದುಶೇಖರ ಮಣೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳಿಗೆ ಬಾಲ್ಯದಲ್ಲಿಯೇ ಆಸೆ-ಆಮಿಷಗಳನ್ನೊಡ್ಡಿ ಪಾಲಕರು ಕೆಲಸ ಮಾಡಿಸಿಕೊಳ್ಳುವುದಕ್ಕೆ ಮುಂದಾಗುವುದು ಭ್ರಷ್ಟಾಚಾರದ ಮುನ್ನುಡಿ ಎಂದು ವಿಜಯಪುರ ಸಹಾಯಕ ಕೃಷಿ ನಿರ್ದೇಶಕ (ಕೇಂದ್ರ) ಶಿವನಗೌಡ ಪಾಟೀಲ ಹೇಳಿದರು.
ಜಿಲ್ಲೆಯ ಮುಳವಾಡ ಗ್ರಾಮದ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್ ಪ್ರಾಂತೀಯ ಕಾರ್ಯಾಲಯ ಬಳ್ಳಾರಿ ಹಮ್ಮಿಕೊಂಡಿರುವ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ “ಗ್ರಾಮ ಸಭೆ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೃಷಿ ಇಲಾಖೆಯ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಶಿವನಗೌಡ ಗ್ರಾಮಸ್ಥರಿಗೆ ವಿವರಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ “ಉದಯರಶ್ಮಿ” ದಿನಪತ್ರಿಕೆಯ ಸಂಪಾದಕ ಇಂದುಶೇಖರ ಮಣೂರ ಮಾತನಾಡಿ, ಭ್ರಷ್ಟಾಚಾರವೆಂಬುದು ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಸಾಮಾಜಿಕ ಪಿಡುಗು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ನಮ್ಮ ಮನಸ್ಸು ಮತ್ತು ನಡೆ ಪ್ರಾಮಾಣಿಕವಾಗಿರಬೇಕು. ಬದಲಾವಣೆ ನಮ್ಮಿಂದಲೇ ಆರಂಭವಾಗಲಿ ಎಂದು ಕರೆ ನೀಡಿದರು.
ಎಂಎಫ್ಎಲ್ ಪ್ರಾಂತೀಯ ಮಾಜಿ ವ್ಯವಸ್ಥಾಪಕ ಹಾಗೂ ಮಾಹೂರಿ ಅಗ್ರಿ ಕ್ಲಿನಿಕ್ ಮಾಲಿಕ ಡಿ.ಎಸ್.ದೇಶಪಾಂಡೆ ಮಾತನಾಡಿ, ಎಂಎಫ್ಎಲ್ ಸಂಸ್ಥೆ ಪ್ರತಿವರ್ಷ ಇಂತಹ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿದೆ. ಮಕ್ಕಳು ನಾಳಿನ ಜವಾಬ್ದಾರಿಯುತ ನಾಗರಿಕರು. ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಪ್ರಾಮಾಣಿಕತೆ ಮತ್ತು ನೈತಿಕತೆಯ ಅರಿವು ಮೂಡಿಸುವುದು ಅತ್ಯಂತ ಅಗತ್ಯ. ಅದಕ್ಕಾಗಿ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಮನಗೂಳಿ ಕ್ರೈಂ ಪಿಎಸೈ ಗುರುಬೆಟ್ಟಿ ಅವರು, ಭ್ರಷ್ಟಾಚಾರ ನಿರ್ಮೂಲನೆಗಾಗಿ ಪ್ರತಿಜ್ಞೆ ವಿಧಿ ಭೋದಿಸಿದರು.
ಎಂಎಫ್ಎಲ್ ಬೆಂಗಳೂರಿನ ಮುಖ್ಯ ವ್ಯವಸ್ಥಾಪಕ ಉಮಾಶಂಕರ ನಾಯ್ಡು ಮತ್ತು ಎಂಎಫ್ಎಲ್ ವಿಜಯಪುರ ಹೆಚ್ಚುವರಿ ವ್ಯವಸ್ಥಾಪಕ ಬಸವರಾಜ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ಎಪಿಎಂಸಿ ನಿವೃತ್ತ ಅಧಿಕಾರಿ ಎಲ್.ಎ.ಶಿಂಧೆ, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಎಸ್.ಆರ್.ಪಾಟೀಲ, ಕೃಷಿ ಇಲಾಖೆಯ ಕೃಷ್ಣಾ ತೆಲಗಿ ಮಾತನಾಡಿದರು.
ಮುಳವಾಡದ ಗಣ್ಯರಾದ ಎ.ಎಸ್.ಐಹೊಳ್ಳಿ, ಎ.ಜಿ.ಕಳಸಗೊಂಡ, ಬಸಲಿಂಗಪ್ಪ ಗೊಳಸಂಗಿ, ಎಸ್.ಬಿ.ಐಹೊಳ್ಳಿ, ಎಸ್.ಎಸ್.ಬೀಳಗಿ, ವೆಂಕನಗೌಡ ಪಾಟೀಲ, ಶಿವಪ್ಪ ಕಳಸಗೊಂಡ, ಎಲ್.ಎಂ.ಹಂಚಿನಾಳ, ಕೌಸರಬಾನು ಗೋಡ್ಯಾಳ ಮತ್ತು ಶಾಲಾ ಮುಖ್ಯ ಗುರು ಎಂ.ಐ.ಉಣ್ಣಿಬಾವಿ ವೇದಿಕೆ ಮೇಲಿದ್ದರು.
ಶಿಕ್ಷಕ ಸಿ.ಎಂ.ಕೆಂಗನಾಳ ನಿರೂಪಿಸಿದರು. ಎಂಎಫ್ಎಲ್ ವ್ಯವಸ್ಥಾಪಕ ಜಿ.ಬಿ.ಪಾಟೀಲ ವಂದಿಸಿದರು.
ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ
ಇದೇ ವೇಳೆ ಭ್ರಷ್ಟಾಚಾರ ವಿಷಯ ಕುರಿತ ರಸಪ್ರಶ್ನೆ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.

ಭ್ರಷ್ಟಾಚಾರ ವಿರುದ್ಧ ರ‌್ಯಾಲಿ
ಕಾರ್ಯಕ್ರಮಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಹಾಗೂ ಎಂಎಫ್ಎಲ್ ಅಧಿಕಾರಿಗಳು ಜೊತೆಗೂಡಿ, ಭ್ರಷ್ಟಾಚಾರ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಫಲಕಗಳನ್ನು ಪ್ರದರ್ಶಿಸುತ್ತ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದರು.

“ಭ್ರಷ್ಟಾಚಾರವನ್ನು ತೊಡೆದುಹಾಕುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ನಾವು ಲಂಚ ನೀಡುವುದಿಲ್ಲ, ಲಂಚ ಪಡೆಯುವುದಿಲ್ಲ ಎಂಬ ದೃಢ ಸಂಕಲ್ಪ ಮಾಡಬೇಕು. ಎಲ್ಲ ಕೆಲಸಗಳಲ್ಲಿಯೂ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ಭ್ರಷ್ಟಾಚಾರ ಕಂಡುಬಂದಾಗ ಸೂಕ್ತ ಕಾನೂನುಬದ್ಧ ಮಾರ್ಗಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವ ಧೈರ್ಯವನ್ನೂ ಬೆಳೆಸಿಕೊಳ್ಳಬೇಕು.”
– ಇಂದುಶೇಖರ ಮಣೂರ
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ
ಹಾಗೂ “ಉದಯರಶ್ಮಿ” ದಿನಪತ್ರಿಕೆಯ ಸಂಪಾದಕ

