ಉದಯರಶ್ಮಿ ದಿನಪತ್ರಿಕೆ
ಅಥಣಿ: ಮನೆ ಬಾಗಿಲಿಗೆ ಕುಡಿಯುವ ನೀರು ಬರಬೇಕಾದ ಗ್ರಾಮದಲ್ಲಿ, ಹನಿ ನೀರಿಗಾಗಿ ಜನರೇ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ! ನದಿಯಲ್ಲಿ ನೀರಿದ್ದರೂ ಗ್ರಾಮಸ್ಥರ ಮನೆಗಳಿಗೆ ಮಾತ್ರ ನೀರು ತಲುಪುತ್ತಿಲ್ಲ. ದಿನನಿತ್ಯದ ಬದುಕಿಗೆ ಅತ್ಯಗತ್ಯವಾದ ಕುಡಿಯುವ ನೀರಿಗಾಗಿ ಪರದಾಡುವಂತಾಗಿರುವುದನ್ನು ಖಂಡಿಸಿ, ತಾಲೂಕಿನ ಪ್ರಮುಖ ಹಾಗೂ ದೊಡ್ಡ ಗ್ರಾಮಗಳಲ್ಲಿ ಒಂದಾದ ತೆಲಸಂಗದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಪ್ರತಿಭಟನೆ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 18 ಸಾವಿರ ಜನಸಂಖ್ಯೆ ಹೊಂದಿರುವ ತೆಲಸಂಗ ಗ್ರಾಮದಲ್ಲಿ ಕಳೆದ 15ರಿಂದ 20 ದಿನಗಳಿಂದ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಗಂಭೀರ ಆರೋಪ. ನದಿಯಲ್ಲಿ ಹೇರಳವಾಗಿ ನೀರಿದ್ದರೂ, ಮೋಟರ್ ಸುಟ್ಟಿರುವುದು ಹಾಗೂ ಪೈಪ್‌ಲೈನ್‌ಗಳಲ್ಲಿ ಸೋರಿಕೆ ಉಂಟಾಗಿರುವುದರಿಂದ ಗ್ರಾಮಕ್ಕೆ ನೀರು ಪೂರೈಕೆ ವ್ಯತ್ಯಯಗೊಂಡಿದೆ ಎನ್ನಲಾಗಿದೆ. ನೀರಿನ ಮೂಲವಿದ್ದರೂ ಜನರಿಗೆ ಕುಡಿಯುವ ನೀರು ಸಿಗದಿರುವುದು ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಿಗದಿಪಡಿಸಿದ ಗಡುವಿನೊಳಗೆ ನೀರು ಪೂರೈಕೆ ಪುನರಾರಂಭಗೊಳ್ಳದಿದ್ದರೆ ಸಾರ್ವಜನಿಕರು ಹಾಗೂ ರೈತ ಹೋರಾಟಗಾರರನ್ನು ಒಗ್ಗೂಡಿಸಿಕೊಂಡು ತಾಲೂಕು ಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನೀರಿಗಾಗಿ ಜನರ ಪರದಾಟ; ಅಧಿಕಾರಿಗಳ ವಿರುದ್ಧ ಆಕ್ರೋಶ!
ಮನೆಗಳಲ್ಲಿ ಅಡುಗೆ ಮಾಡಲು, ಕುಡಿಯಲು ಹಾಗೂ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ನೀರಿಲ್ಲದೆ ಗ್ರಾಮಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆ. ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಕ್ಕಾಗಿ ಜನರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಸಮಸ್ಯೆ ಎದುರಾದ ತಕ್ಷಣವೇ ತಾಂತ್ರಿಕ ದುರಸ್ತಿ ಕೈಗೊಂಡು ನೀರು ಪೂರೈಕೆಯನ್ನು ಪುನರಾರಂಭಿಸಬೇಕಾಗಿದ್ದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀರಪ್ಪ ಗಡಗಂಚಿ, ಹೆಸ್ಕಾಂ ಅಧಿಕಾರಿ ಸಂಪನ್ವರ್, ಆಡಳಿತಾಧಿಕಾರಿ ಜಾದವ್ ಹಾಗೂ ಸೆಕ್ಷನ್ ಆಫೀಸರ್ ಶರತ್ ಐಗಳಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳಕ್ಕೆ ಧಾವಿಸಿದ ತಾ.ಪಂ. ಇಒ; ಅ.2ರೊಳಗೆ ಪರಿಹಾರದ ಭರವಸೆ
ಗ್ರಾಮಸ್ಥರ ಪ್ರತಿಭಟನೆ ಹಾಗೂ ಸಮಸ್ಯೆಯ ಗಂಭೀರತೆಯನ್ನು ಅರಿತು ಸ್ಥಳಕ್ಕೆ ಭೇಟಿ ನೀಡಿದ ಅಥಣಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಅವರು ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿ ಅಹವಾಲು ಆಲಿಸಿದರು.
ಕುಡಿಯುವ ನೀರಿನ ಪೂರೈಕೆಗೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ, ಅಕ್ಟೋಬರ್ 2ರೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

