ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಸಂಘದ ವತಿಯಿಂದ ಇತ್ತೀಚೆಗೆ ಇಹ ಲೋಕ ತ್ಯಜಿಸಿದ ಹಿರಿಯ ಪತ್ರಕರ್ತರಾದ ಶಿವಮೊಗ್ಗದ ಬಂಡಿಗಡಿ ನಂಜುಂಡಪ್ಪ ಮತ್ತು ಚಾಮರಾಜ ನಗರದ ಪತ್ರಿಕಾ ಛಾಯಾಗ್ರಾಹಕ ಸಿ.ಆರ್.ವೆಂಕಟರಾವ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ನಗರದ ಕಂದಾಯ ಭವನ, ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ನಮ್ಮ ಜೊತೆಗಿದ್ದು ಇಂದು ಇಲ್ಲವಾದ ಪತ್ರಕರ್ತ ಸ್ನೇಹಿತರನ್ನು ನಾವು ನೆನಪಿಸಿಕೊಂಡು ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಒಂದು ನಿಮಿಷ ಮೌನಾಚರಣೆ ಮೂಲಕ ಪ್ರಾರ್ಥಿಸಿ ಪುಷ್ಪನಮನ ಸಲ್ಲಿಸುವ ಪದ್ದತಿಯನ್ನು ನಮ್ಮ ರಾಜ್ಯ ಸಂಘ ಮುಂದು ವರಿಸಿಕೊಂಡು ಬರುತ್ತಿದೆ ಎಂದರು.
ಅಗಲಿದ ಹಿರಿಯ ಪತ್ರಕರ್ತ ಶಿವಮೊಗ್ಗದ ಬಂಡಿಗಡಿ ನಂಜುಂಡಪ್ಪ ನವರು ನಮ್ಮ ರಾಜ್ಯ ಸಂಘದ ಜೊತೆ ನಿರಂತರ ಸಂಪರ್ಕ ಹೊಂದಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ, ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರಿಗೆ ತಡವಾಗಿಯಾದರೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ.
ಇಂದು ಅವರು ನಮ್ಮೊಂದಿಗೆ ಇಲ್ಲವಾದರೂ ಸಂಘಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸಲೇ ಬೇಕು ಎಂದರು.
ಚಾಮರಾಜ ನಗರದ ಹಿರಿಯ ಪತ್ರಿಕಾ ಛಾಯಾಗ್ರಾಹಕ ಸಿ.ಆರ್.ವೆಂಕಟರಾವ್ ಅವರು ಕೂಡಾ ಸಂಘದಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಇಬ್ಬರೂ ಹಿರಿಯ ಜೀವಗಳಿಗೆ ಸದ್ಗತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಮಾತನಾಡಿ, ಬಂಡಿ ನಂಜುಂಡಪ್ಪ ನವರು ಇತ್ತೀಚಿನ ವರೆಗೂ ರಾಜ್ಯಸಂಘದ ಒಡ ನಾಟದಲ್ಲಿದ್ದರು ಶಿವಮೊಗ್ಗದ ಕೆಲವು ಪತ್ರಕರ್ತರಲ್ಲಿ ಭಿನ್ನಭಿಪ್ರಾಯ ಮೂಡಿ ಬೇರೆ, ಬೇರೆ ಸಂಘದ ಹಾದಿ ಹಿಡಿದ ಸಮಯದಲ್ಲೂ ಅವರು ನಮ್ಮ ಸಂಘಕ್ಕೆ ಬದ್ದರಾಗಿಯೇ ತಮ್ಮನಿಷ್ಠೆ ತೋರಿಸಿದ್ದರು. ಪತ್ರಿಕಾ ಛಾಯಾಗ್ರಾಹಕರಾದ ವೆಂಕಟರಾವ್ ಕೂಡಾ ಪ್ರಜಾವಾಣಿ ಪತ್ರಿಕೆಯಲ್ಲಿ ಸೇವೆಸಲ್ಲಿಸುತ್ತಾ ಎಲ್ಲರೊಂದಿಗೂ ಆತ್ಮೀಯರಾಗಿ ಬೆರೆಯುತ್ತಿದ್ದರು ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತರಾದ ಶಿವಾನಂದ್, ಶಶಿಕಲಾ ಅಗಲಿದ ಪತ್ರಕರ್ತರ ಕುರಿತು ಮಾತನಾಡಿದರು.
ರಾಜ್ಯ ಸಂಘದ ಖಜಾಂಚಿ ಎಂ.ವಾಸುದೇವ ಹೊಳ್ಳ, ಪತ್ರಕರ್ತರಾದ ಶಿವಮೊಗ್ಗದ ಟೆಲೆಕ್ಸ್ ರವಿ,
ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

