ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್, ವಿದ್ಯಾಲಯದಲ್ಲಿ ಜಾಗತಿಕ ಖ್ಯಾತಿಯ ‘ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’(Toyota Industries Engine India Pvt. Ltd. – TIEI) ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಪಾಲಿಟೆಕ್ನಿಕ್ ನ 37 ವಿದ್ಯಾರ್ಥಿಗಳು ಅಪ್ರೆಂಟಿಸ್ ಗೆ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 28 ರಂದು ಬುಧವಾರ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ಮತ್ತು ಅಟೋಮೊಬೈಲ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಸಂದರ್ಶನದಲ್ಲಿ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಸರಕಾರಿ ಮತ್ತು ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳಿಂದ ಒಟ್ಟು 143ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.
ಲಿಖಿತ ಪರೀಕ್ಷೆ ಮತ್ತು ತಾಂತ್ರಿಕ ಮೌಖಿಕ ಸಂದರ್ಶನ ಪ್ರಕ್ರಿಯೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 85 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಂತಿಮವಾಗಿ ಉದ್ಯೋಗಕ್ಕೆ ಆಯ್ಕೆ ಮಾಡಿ ಸ್ಥಳದಲ್ಲಿಯೇ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು.
ಆಯ್ಕೆಯಾದ ಈ 85 ವಿದ್ಯಾರ್ಥಿಗಳಲ್ಲಿ 37 ಜನ ಬಿ.ಎಲ್.ಡಿ.ಇ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿರುವುದ ಗಮನಾರ್ಹವಾಗಿದೆ. ಈ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಾಗೇಂದ್ರ ಕುಮಾರ್ ಕೆ. ಎಸ್., ಗ್ರೂಪ್ ಲೀಡರ್ ವಿಶ್ವ ಪೂರ್ಣ ರಾವ ಹಾಗೂ ಲೀಡರ್ ನಾಗೇಶ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಪ್ರಭುದೇವ ಬಿ. ಕಳಸಗೊಂಡ, ಉದ್ಯೋಗಾಧಿಕಾರಿ ಸುಧನ್ವ ವಿ. ಕುಲಕರ್ಣಿ, ಪಾಂಡುರಂಗ ಅಸ್ಲಂಕರ, ಈರೇಶ ಪಾಟೀಲ, ಮೆಕ್ಯಾನಿಕಲ್ ಮತ್ತು ಆಟೋಮೋಬೈಲ್ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸ್ಥಳೀಯ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗಣನೀಯ ಪ್ರಮಾಣದಲ್ಲಿ ಪ್ರತಿಷ್ಠಿತ ಟೊಯೋಟಾ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ಉದ್ಯೋಗ ಪಡೆದಿರುವುದಕ್ಕೆ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಆಡಳಿತ ಮಂಡಳಿಯ ನಿರ್ದೇಶಕರು, ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ, ಕಾಲೇಜಿನ ಎಲ್ಲ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

