ಸುಪ್ರೀಂ ಕೋರ್ಟ ನಿರ್ದೇಶನ | ಆಲಮಟ್ಟಿಯಲ್ಲಿ ಜಿಲ್ಲಾಧಿಕಾರಿ ಕೆ. ಆನಂದ್ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅರಣ್ಯ ಭೂಮಿ ಒತ್ತುವರಿ ಹಾಗೂ ನಿಯಮಬಾಹಿರ ಭೂಮಂಜೂರಾತಿ ಪ್ರಕರಣಗಳ ತನಿಖೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಆನಂದ್ ತಿಳಿಸಿದರು.
ಆಲಮಟ್ಟಿ ಜಲಾಶಯದ ಕೃಷ್ಣಾ ನದಿ ತೀರದ ಜಾಕ್ವೆಲ್ಗೆ ಬುಧವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೯೮೦ರ ಅರಣ್ಯ ಸಂರಕ್ಷಣಾ ಕಾಯ್ದೆಗೂ ಮುನ್ನ ಮತ್ತು ನಂತರ ಅರಣ್ಯ ಭೂಮಿಯಲ್ಲಿ ವಿವಿಧ ಉದ್ದೇಶಗಳಿಗೆ ಮಂಜೂರಾದ ಜಮೀನುಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ನಿಯಮಬಾಹಿರ ಮಂಜೂರಾತಿ, ಅಧಿಕಾರ ವ್ಯಾಪ್ತಿ ಮೀರಿ ಭೂಮಿ ನೀಡಿರುವುದು ಸೇರಿದಂತೆ ಎಲ್ಲ ಅಂಶಗಳನ್ನು ಎಸ್ಐಟಿ ಪರಿಶೀಲಿಸಲಿದೆ. ತಮ್ಮ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ತಂಡದಲ್ಲಿ ಸಿಇಒ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿದ್ದಾರೆ ಎಂದರು.
ಅಗತ್ಯ ಅನುಮತಿ ಪಡೆದಿರುವ ಕುರಿತು ಪರಿಶೀಲಿಸಿ, ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬಸವನ ಬಾಗೇವಾಡಿ ನಗರ ಸ್ಥಳೀಯ ಸಂಸ್ಥೆಯ ಅಮೃತ್ ೨.೦ ಯೋಜನೆಯಡಿ ೩೪ ಕಿ.ಮೀ. ಉದ್ದದ ಪೈಪ್ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಬಹುತೇಕ ಪೂರ್ಣಗೊಂಡಿದೆ. ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ೮ ಕಿ.ಮೀ. ಪೈಪ್ಲೈನ್ಗೆ ಕೇಂದ್ರ ಸರ್ಕಾರದ ಪರಿವೇಶ ಪೋರ್ಟಲ್ ಮೂಲಕ ಅನುಮತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಲಧಾರೆ ಯೋಜನೆಯ ಅರಣ್ಯ ಅನುಮತಿಯೂ ಪ್ರಗತಿಯಲ್ಲಿದೆ ಎಂದರು.
ಅರಣ್ಯ, ಕೆಬಿಜೆಎನ್ಎಲ್ ಹಾಗೂ ಕಂದಾಯ ಭೂಮಿಗಳ ನಡುವಿನ ಗೊಂದಲ ನಿವಾರಣೆಗೆ ಶೀಘ್ರದಲ್ಲೇ ಮೂರು ಇಲಾಖೆಗಳ ಸಭೆ ಕರೆಯಲಾಗುವುದು ಎಂದು ಹೇಳಿದರು.
ವಿಜಯಪುರ ಅಸಿಸ್ಟೆಂಟ್ ಕಮಿಷನರ್ ಜುಪಿಶಾನ್ ಹಕ್ಕ. ಸ ಆರ್ ಡಬ್ಲು ಎಸ್ ಎಡಬ್ಲಿ ವರ್ಧಮಾನ ಗೊಂಗಡಿ . ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ . ಮಲ್ಲಿನಾಥ್ ಬಿ ಕುಸನಾಳ. ಆರ್ ಎಫ ಒ ಬಸನಗೌಡ ಬಿರಾದಾರ, ಕರ್ನಾಟಕ ಜಲ ಮಂಡಳಿ ವಿಜಯಪುರ ಜಿಲ್ಲಾ ಕಾರ್ಯಪಾಲಕ ಅಭಿಯಂತರರು ರಾಮರಾವ್ ರಾಠೋಡ್, ಎಡಬ್ಲಿ, ಬಸವರಾಜ ಬಾಗಲಕೋಟೆ , ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಬಿ ಎ, ಸೌವದಾಗರ , ಕಾರ್ಯಪಾಲಕ ಅಭಿಯಂತರರು, ವಿಠ್ಠಲ್ ಮಾಶ್ಯಾಳ , ಎಡಬ್ಲಿ ವಿಲಾಸ ರಾಠೋಡ್, ಪುರಸಭೆ ಮುಖ್ಯಾಧಿಕಾರಿ ಶಬ್ಬೀರ್ ರೇವರಕರ್ , ಕಿರಿಯ ಅಭಿಯಂತರ ಮಾದೇವ ಜಂಬಗಿ, ಇದ್ದರು .

