ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಪಟ್ಟಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್) ವತಿಯಿಂದ ಕೈಗೆತ್ತಿಕೊಂಡಿರುವ ವಸತಿ ಯೋಜನೆಯ ಕಾಮಗಾರಿಗಳು ಸುಮಾರು ನಾಲ್ಕು ವರ್ಷ ಕಳೆದರೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬಡ ಫಲಾನುಭವಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮನೆ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಹಾಗೂ ಕಾಮಗಾರಿ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸೇನೆ ಹಾಗೂ ಡಿಎಸ್‌ಎಸ್ ಚಂದ್ರಕಾಂತ್ ಕಾದ್ರೊಳ್ಳಿ ಬಣದ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಂಬೇಡ್ಕರ್ ಸೇನೆಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಬಸು ಈ. ಕಟ್ಟಿಮನಿ(ಮಾದರ) ಮಾತನಾಡಿ, ಸ್ಲಂ ಬೋರ್ಡ್ ವತಿಯಿಂದ ಬಡ ಕುಟುಂಬಗಳಿಗಾಗಿ ಕೈಗೆತ್ತಿಕೊಂಡಿರುವ ವಸತಿ ಯೋಜನೆ ನಾಲ್ಕು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಸರ್ಕಾರದಿಂದ ಅನುದಾನ ಮಂಜೂರಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಸ್ವಂತ ಮನೆಯ ಕನಸು ಕಂಡಿದ್ದ ಬಡ ದಲಿತ ಕುಟುಂಬಗಳು ಇಂದಿಗೂ ಬಾಡಿಗೆ ಮನೆಗಳಲ್ಲಿ ಅಥವಾ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳಿಗೆ ಗುಣಮಟ್ಟದ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸುವವರೆಗೂ ನಮ್ಮ ಸಂಘಟನೆಯ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಎಚ್ಚರಿಸಿದರು.
ಗುತ್ತಿಗೆದಾರರನ್ನು
ಅಂಬೇಡ್ಕರ್ ಸೇನೆಯ ತಾಳಿಕೋಟೆ ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸ್ಲಂ ಬೋರ್ಡ್ ವಿಜಯಪುರ ಜಿಲ್ಲಾ ಕಚೇರಿಗೆ ಹಲವು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಿದರೂ ವಸತಿ ಯೋಜನೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಬಡ ಫಲಾನುಭವಿಗಳ ಮನೆ ನಿರ್ಮಾಣದ ವಿಚಾರದಲ್ಲಿ ಇಷ್ಟೊಂದು ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದರು.
ಡಿಎಸ್‌ಎಸ್ ಚಂದ್ರಕಾಂತ್ ಕಾದ್ರೊಳ್ಳಿ ಬಣದ ತಾಳಿಕೋಟೆ ತಾಲೂಕು ಕಾರ್ಯದರ್ಶಿ ಶಂಕರ್ ಸಾಸನೂರ ಮಾತನಾಡಿ,
ಬಾಕ್ಸ್
ಅಧಿಕಾರಿಗಳ ಭರವಸೆ ಹಿನ್ನೆಲೆ ಪ್ರತಿಭಟನೆ ಹಿಂದಕ್ಕೆ
ಪ್ರತಿಭಟನೆ ಆರಂಭವಾದ ಬಳಿಕ ಕಂದಾಯ ಅಧಿಕಾರಿಗಳಾದ ಮುನ್ನಾ ಅತ್ತಾರ ಹಾಗೂ ಮೂಕಿಹಾಳ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೋರಾಟಗಾರರ ಮನವಿ ಆಲಿಸಿದರು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದರು. ಆದರೆ ಸ್ಲಂ ಬೋರ್ಡ್ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಪಷ್ಟ ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಹೋರಾಟಗಾರರು ಪಟ್ಟು ಹಿಡಿದರು.
ನಂತರ ಸ್ಥಳಕ್ಕೆ ಆಗಮಿಸಿದ ಕಾಮಗಾರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೋರಾಟಗಾರರೊಂದಿಗೆ ಚರ್ಚಿಸಿ, ಒಂದು ವಾರದೊಳಗೆ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪುನರಾರಂಭಿಸಲಾಗುವುದು. ಮುಂದಿನ ಮೂರು ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಮುಗಿಸಿ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳ ಭರವಸೆ ಹಿನ್ನೆಲೆ ಸಂಘಟಿಕರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.
ನಂತರ ತಮ್ಮ ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ತಾಳಿಕೋಟೆ ತಹಶೀಲ್ದಾರರ ಮುಖಾಂತರ ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಸ್ಲಂ ಬೋರ್ಡ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾದಿಗ ದಂಡೋರ ಬೆಳಗಾವಿ ವಿಭಾಗದ ಸಂಚಾಲಕ ರಮೇಶ್ ಪಿ. ಮಾದರ್, ಅಂಬೇಡ್ಕರ್ ಸೇನೆಯ ಕಾರ್ಯದರ್ಶಿ ಮಹಾದೇವ ಅಸ್ಕಿ, ಖಜಾಂಚಿ ಪರಶುರಾಮ ತಳವಾರ, ನಗರ ಘಟಕದ ಅಧ್ಯಕ್ಷ ನಾಗರಾಜ ಗಜಕೋಶ, ಕಾರ್ಮಿಕ ಘಟಕದ ಅಧ್ಯಕ್ಷ ಪರಶುರಾಮ ನಾಲತವಾಡ, ಬಸವರಾಜ ಸಾಸನೂರ, ಶಾಂತಪ್ಪ ಮಾನೆಕಾರ, ಸಂತೋಷ್ ಹಗರಗುಂಡ, ಹಿರಿಯರಾದ ಮಲ್ಲಪ್ಪ ಶಿರೋಳ್ ಹಾಗೂ ವಸತಿ ಯೋಜನೆಯ ಫಲಾನುಭವಿಗಳಾದ ನಾಗಪ್ಪ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ದೇವರಾಜ್ ಕಟ್ಟಿಮನಿ, ಗಿರೀಶ್ ಕಟ್ಟಿಮನಿ ಸೇರಿದಂತೆ ಅಂಬೇಡ್ಕರ್ ಸೇನೆ ಹಾಗೂ ಡಿಎಸ್‌ಎಸ್ ಸಂಘಟನೆಯ ಮುಖಂಡರು, ಕಾರ್ಯಕರ್ತರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

