ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸನ್ಮಾನ ಸಮಾರಂಭದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಸ್ಪೃಶ್ಯತೆ ನಿವಾರಣೆ ಹಾಗೂ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಮೂಡಿಸುವ ಕಾರ್ಯದಲ್ಲಿ ಪೇಜಾವರ ಶ್ರೀಗಳು ಸದಾ ಮುಂಚೂಣಿಯಲ್ಲಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಶ್ರೀಕೃಷ್ಣ-ವಾದಿರಾಜ ಮಠದಲ್ಲಿ ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರಿಗೆ ವಿಜಯಪುರ ನಗರದ ಸಮಸ್ತ ಭಕ್ತಾದಿಗಳ ವತಿಯಿಂದ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಬೇಕೆಂಬುದು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಕನಸಾಗಿತ್ತು. ಇಂದು ಆ ಕನಸು ನನಸಾಗಿದೆ. ಪ್ರಸ್ತುತ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಶ್ರೀರಾಮ ಮಂದಿರ ಟ್ರಸ್ಟ್‌ನ ಧರ್ಮದರ್ಶಿಗಳಾಗಿ ಶ್ರದ್ಧಾ-ಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರಸ್ತುತ ಶ್ರೀಗಳು ಆಧುನಿಕ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ಸುಮಾರು 7 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯಕ್ಕೆ ಹೆಚ್ಚಿನ ಅನುದಾನ ಹಾಗೂ ದೇಣಿಗೆ ಕೊಡಿಸುವ ಮೂಲಕ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪೇಜಾವರ ಶ್ರೀ
ಬಳಿಕ ಆಶೀರ್ವಚನ ನೀಡಿದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು, ನ್ಯಾಯದ ಪರವಾಗಿ ಗಟ್ಟಿಯಾಗಿ ನಿಲ್ಲುವ ಗುಣ ಬಸನಗೌಡ ಪಾಟೀಲ ಯತ್ನಾಳ ಅವರಲ್ಲಿದೆ. ಅವರು ಸದಾ ಜನಪರವಾಗಿ ಧ್ವನಿ ಎತ್ತುತ್ತಾರೆ. ನ್ಯಾಯದ ಪರವಾದ ಅವರ ಗಟ್ಟಿತನಕ್ಕೆ ಬೆಂಬಲ ದೊರೆಯುತ್ತದೆ ಎಂದರು.
1964ರಲ್ಲಿಯೇ ವಿಜಯಪುರದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಯಾಗಿದ್ದು, ತಾವು ಜನ್ಮವೆತ್ತಿದ ವರ್ಷವೂ ಅದೇ ಆಗಿದೆ ಎಂದು ಸ್ಮರಿಸಿದರು. ಹಿಂದಿನ ಗುರುಗಳು ದೂರದೃಷ್ಟಿಯಿಂದ ಈ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಿ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ನೆರವಾಗಿದ್ದರು. ಇದೀಗ ಅದನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲು 7 ಕೋಟಿ ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ. ವಿಜಯಪುರದ ಜನತೆ ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶ್ರೀಮಠವು ಜನರಲ್ಲಿ ಶ್ರದ್ಧೆ, ಭಕ್ತಿ ಹಾಗೂ ಉತ್ತಮ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ ಎಂದರು.
ಶ್ರೀಮಠದ ವಿಜಯಪುರ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ಮಾತನಾಡಿ, ದೇಶಾದ್ಯಂತ ಪೇಜಾವರ ಮಠದ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಸಮಸ್ತ ಹಿಂದೂ ಸಮಾಜಕ್ಕೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಉತ್ತಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬೆಳೆಸುವಲ್ಲಿ ಶ್ರೀಮಠದ ಯತಿಗಳ ಕೊಡುಗೆ ಅಪಾರವಾಗಿದೆ ಎಂದರು.
ವಿಜಯಪುರ ಜಿಲ್ಲೆಗೂ ಶ್ರೀಮಠಕ್ಕೂ ಅವಿನಾಭಾವ ಸಂಬಂಧವಿದೆ. ಹಿಂದಿನ ಗುರುಗಳು ಜಿಲ್ಲೆಯನ್ನು ದತ್ತು ಪಡೆದು ಬರಗಾಲದ ಸಂದರ್ಭದಲ್ಲಿ ಗಂಜಿ ಕೇಂದ್ರಗಳನ್ನು ಪ್ರಾರಂಭಿಸಿ ಸರ್ಕಾರದೊಂದಿಗೆ ಕೈಜೋಡಿಸಿದ್ದರು. 2031ರಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸಲಾಗುತ್ತಿದ್ದು, ಅವರ ಕನಸುಗಳನ್ನು ನನಸು ಮಾಡಲು ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಸಂಕಲ್ಪ ಮಾಡಿದ್ದಾರೆ. ಅದರಲ್ಲಿ ವಿಜಯಪುರದ ಅಖಿಲ ಭಾರತ ಮಧ್ವ ಮಹಾಮಂಡಳದ ವಿದ್ಯಾರ್ಥಿ ನಿಲಯವೂ ಪ್ರಮುಖವಾಗಿದೆ. ಈ ಸಂಕಲ್ಪಕ್ಕೆ ಸಮಿತಿ ಸಂಪೂರ್ಣ ಬೆಂಬಲವಾಗಿ ನಿಂತಿದೆ ಎಂದರು.
ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಸ್ವಾಗತಿಸಿ ಮಾತನಾಡಿ, ವಿದ್ಯಾರ್ಥಿ ನಿಲಯದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಕಟ್ಟಡ ಪೂರ್ಣಗೊಳಿಸಲು ಭಕ್ತಾದಿಗಳು ದೇಣಿಗೆ ನೀಡುವ ಮೂಲಕ ಸಹಕರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ದಾನಿಗಳು ನೀಡುವ ಪ್ರತಿಯೊಂದು ರೂಪಾಯಿಯೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ ಎಂದರು.
ನವದೆಹಲಿಯಲ್ಲಿ ಚಾತುರ್ಮಾಸ್ಯ ವ್ರತ ಪೂರ್ಣಗೊಳಿಸಿ ವಿಜಯಪುರಕ್ಕೆ ಆಗಮಿಸಿದ ಶ್ರೀಗಳನ್ನು ಸಮಸ್ತ ಭಕ್ತಾದಿಗಳ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಕಾಸ ಪದಕಿ ವಂದಿಸಿದರು. ಶ್ರೀಧರ ಜೋಶಿ ನಿರೂಪಿಸಿದರು.
ವೇದಿಕೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಸತೀಶ್ಚಂದ್ರ ಕುಲಕರ್ಣಿ, ಅಖಿಲ ಭಾರತ ಮಧ್ವ ಮಹಾಮಂಡಳದ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ಸಮಿತಿ ಪದಾಧಿಕಾರಿಗಳಾದ ಡಾ. ಮಲಘಾಣ, ಡಾ. ಮಂಗಲಗಿ, ವಿ.ಸಿ. ಕುಲಕರ್ಣಿ, ವಿ.ಬಿ. ಕುಲಕರ್ಣಿ, ಅಶೋಕರಾವ್, ಮೋಹನ ಕೌತಾಳ, ಪಂ. ವಾಸುದೇವಾಚಾರ್ಯ ಸೇರಿದಂತೆ ವಿಜಯ್ ಜೋಶಿ ಉಪಸ್ಥಿತರಿದ್ದರು.
ಕೊನೆಯಲ್ಲಿ ಶ್ರೀಗಳಿಂದ ತೊಟ್ಟಿಲು ಪೂಜೆ ನೆರವೇರಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

