ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಎಸ್. ಹಾಗರಗಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳ ಹಕ್ಕುಗಳ ರಕ್ಷಣೆ- ಬಾಲ್ಯ ವಿವಾಹ ತಡೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣದ ಜೊತೆಗೆ ವೈಯಕ್ತಿಕ ಮತ್ತು ಸೈಬರ್ ಸುರಕ್ಷತೆಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಎಸ್. ಹಾಗರಗಿ ಹೇಳಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿಜಯಪುರದ ಶ್ರೀ ರಾಮಕೃಷ್ಣ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಬುಧವಾರ
ಶ್ರೀ ರಾಮಕೃಷ್ಣ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿಹಮ್ಮಿಕೊಂಡಿದ್ದ ಸುರಕ್ಷಿತ ಬಾಲ್ಯ ಅಭಿಯಾನ–ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದುವುದರೊಂದಿಗೆ ಅವುಗಳ ರಕ್ಷಣೆಗೆ ಲಭ್ಯವಿರುವ ಕಾನೂನು ಮತ್ತು ನೆರವು ಕುರಿತು ತಿಳಿದುಕೊಳ್ಳಬೇಕು. ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹ ಹಾಗೂ ವಿವಿಧ ರೀತಿಯ ಶೋಷಣೆಗಳನ್ನು ತಡೆಗಟ್ಟಲು ಸಮಾಜದ ಎಲ್ಲ ವರ್ಗದವರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ವಿಜಯಪುರ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಜಿ. ಬಿರಾದಾರ್ ಅವರು ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಶಾಲೆಯ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಅಶೋಕ್ ಮಲಗಾಣ, ವಿಜಯಪುರ ನಗರದ ಬಿಆರ್‌ಪಿಗಳಾದ ಸುಜಾತಾ ಹಿರೇಮಠ ಮತ್ತು ಪ್ರೇಮಾವತಿ ಹಿರೇಮಠ ಸೇರಿದಂತೆ ಹಲವರಿದ್ದರು.

