ಮುದ್ದೇಬಿಹಾಳದಲ್ಲಿ ಕರ್ನಾಟಕ ಮಾಧ್ಯಮ ಒಕ್ಕೂಟದಿಂದ ನಡೆದ ಮಾಧ್ಯಮ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕರೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಇಂದಿನ ಸಂಕೀರ್ಣ ಸನ್ನಿವೇಶದಲ್ಲಿ ಪತ್ರಿಕಾ ರಂಗವು ಆಳುವ ಸರ್ಕಾರಗಳ ತುತ್ತೂರಿಯಾಗದೆ, ನೈಜ ವೃತ್ತಿಧರ್ಮ ಹಾಗೂ ಸತ್ಯವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಭಿಪ್ರಾಯ ಪಟ್ಟರು.
ಪಟ್ಟಣದ ವಿಜಯ ಮಹಾಂತೇಶ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ಮಾಧ್ಯಮ ಒಕ್ಕೂಟದ ವತಿಯಿಂದ ದಿ.ನಾಗರಾಜ ಜಮಖಂಡಿ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಮಾಧ್ಯಮ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪತ್ರಕರ್ತರು ವಾಸ್ತವವನ್ನು ಬಿಂಬಿಸಿ ನಿಷ್ಪಕ್ಷಪಾತವಾಗಿ ಬರೆದರೆ ಅಧಿಕಾರಸ್ಥರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇನ್ನೊಂದೆಡೆ ಯಾರನ್ನಾದರೂ ಮೆಚ್ಚಿ ಬರೆದರೆ ಇವರು ಇನ್ನೊಬ್ಬರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಹಣೆಪಟ್ಟಿ ಹೊರಿಸಲಾಗುತ್ತದೆ. ಇಂತಹ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಿ ಮುನ್ನಡೆಯುವುದೇ ನಿಜವಾದ ಪತ್ರಿಕೋದ್ಯಮ ಎಂದು ಹೇಳಿದರು.
ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಮಠದ ಡಾ. ಗುರು ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ದುಡ್ಡಿದ್ದವರು ಇತರರನ್ನು ತಮ್ಮ ಮುಂದೆ ತಲೆಬಾಗಿಸಲು ಯತ್ನಿಸಬಹುದು, ಆದರೆ ಅಂತವರಿಗೆ ಸ್ವಾಭಿಮಾನ ಹಾಗೂ ಬುದ್ಧಿವಂತಿಕೆ ಇರುವ ವ್ಯಕ್ತಿಗಳು ಎಂದಿಗೂ ತಲೆಬಾಗುವುದಿಲ್ಲ. ಬದುಕಿನಲ್ಲಿ ಹಣಕ್ಕಿಂತ ಆತ್ಮಗೌರವ ಹಾಗೂ ಸ್ವಾಭಿಮಾನವೇ ಶ್ರೇಷ್ಠ ಸಂಪತ್ತು ಎಂದು ಪ್ರತಿಪಾದಿಸಿದರು.
ಸುವರ್ಣ ನ್ಯೂಸ್ ಮುಖ್ಯ ನಿರೂಪಕಿ ಶ್ವೇತಾ ಆಚಾರ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪ್ರಶಸ್ತಿ ಎಂಬುದು ಕೇವಲ ಹಿಗ್ಗುವುದಕ್ಕೆ ಅಥವಾ ಸಂಭ್ರಮಿಸುವುದಕ್ಕೆ ಸೀಮಿತವಲ್ಲ, ಅದು ಸಮಾಜದ ಪರವಾಗಿ ಮತ್ತಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಲು ನಮಗೆ ದಾರಿದೀಪವಾಗುತ್ತದೆ ಎಂದರು.
ಶಾಸಕ ಸಿ.ಎಸ್.ನಾಡಗೌಡ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ, ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಮಾತನಾಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಬಾಲಾಜಿ ಶುಗರ್ಸ ನ ರಾಹುಲಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ತಾರನಾಳ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಶಿವಶಂಕರಗೌಡ ಹಿರೇಗೌಡರ, ಸಿ.ಬಿ.ಅಸ್ಕಿ, ಸಿಕಂದರ ಜಾನ್ವೇಕರ, ವೈ.ಎಚ್.ವಿಜಯಕರ, ಒಕ್ಕೂಟದ ಗೌರವಾಧ್ಯಕ್ಷ ಜಿ.ಟಿ.ಘೋರ್ಪಡೆ, ತಾಳಿಕೋಟೆ ತಾಲೂಕು ಅಧ್ಯಕ್ಷ ಅಂಬಾಜಿ ಘೋರ್ಪಡೆ, ಸದಸ್ಯ ಶ್ರೀಪಾದ ಜಂಬಗಿ ಸೇರಿದಂತೆ ಮತ್ತೀತರರು ಇದ್ದರು. ಒಕ್ಕೂಟದ ತಾಲೂಕು ಅಧ್ಯಕ್ಷ ಪರಶುರಾಮ ಕೊಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಹಾಗೂ ಕಲಾವಿದ ಟಿ.ಡಿ.ಲಮಾಣಿ, ಶಿಕ್ಷಕಿ ಹೇಮಾ ಬಿರಾದಾರ ಮತ್ತು ಮುಖ್ಯೋಪಾದ್ಯಾಯ ಮದನ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ
ಮುರುಗೇಶ ಬಾಬುರಾವ ಶಿವಪೂಜಿ, ಸುವರ್ಣ ನ್ಯೂಸ್ ಮುಖ್ಯ ನಿರೂಪಕಿ ಶ್ವೇತಾ ಆಚಾರ್ಯ, ಉದಯವಾಣಿಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಮಲ್ಲಿಕಾರ್ಜುನ ತಿಪ್ಟೂರ, ವಿಜಯವಾಣಿಯ ವಿಜಯಪುರ ಜಿಲ್ಲಾ ವಿಶೇಷ ವರದಿಗಾರ ಪರಶುರಾಮ ಬಾಸಗಿ, ಚಕ್ರವರ್ತಿ ನ್ಯೂಸ್ ಸಂಪಾದಕ ಹಾಗೂ ನ್ಯಾಯವಾದಿ ಚೇತನ ಶಿವಶಿಂಪಿ, ಸಂಯುಕ್ತ ಕರ್ನಾಟಕದ ಜಿಲ್ಲಾ ವರದಿಗಾರ ಶರಣು ಮರನೂರ, ಕನ್ನಡಪ್ರಭ ನಾಲತವಾಡದ ವರದಿಗಾರ ಯುನೂಸ್ ಮೂಲಿಮನಿ, ಉತ್ತರ ಟುಡೆ ನ್ಯೂಸ್ನ ಚೇತನ ಕೆಂದೂಳಿ ಹಾಗೂ ಉದಯ ಕಾಲ ಜಿಲ್ಲಾ ವರದಿಗಾರ ಮಕಬೂಲ್ ಬನ್ನೆಟ್ಟಿ, ಭೀಮ ಸಂಸ್ಕೃತಿ ಸಂಪಾದಕ ಯಲ್ಲಾಲಿಂಗ ಪೂಜಾರಿ(ಮೌರ್ಯ) ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ಪತ್ರಿಕಾ ವಿತರಕರಾದ ರವಿ ಕುಂಬಾರ ಹಾಗೂ ಚಂದ್ರಶೇಖರ ಮೂಕಿಹಾಳ ಅವರಿಗೆ ಅತ್ಯುತ್ತಮ ಪತ್ರಿಕಾ ವಿತರಕ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರೆ, ಶರಣು ಸಜ್ಜನ, ರಂಗನಾಥ ವೈದ್ಯ, ಅರವಿಂದ ಕೊಪ್ಪ, ಶರಣು ಟಕ್ಕಳಕಿ, ಸ್ನೇಹಾ ನಲವಡೆ, ವಿಕ್ರಾಂತ ಶಾರದಳ್ಳಿ, ಶಕುಂತಲಾ ಶಾರದಳ್ಳಿ ಇವರ ಸಾಧನೆಗೆ ವಿಶೇಶವಾಗಿ ಸನ್ಮಾನಿಸಿ ಗೌರವಿಸಲಾಯಿತು.

