ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್(NDA) ಜಯಭೇರಿ ಬಾರಿಸಿರುವುದು ಪ್ರಜ್ಞಾವಂತ ಮತದಾರರು ಬಿಜೆಪಿ ಜೊತೆಗೆ ಇದ್ದಾರೆ ಎಂಬುದು ಮತ್ತೊಮ್ಮೆ ನಿರೂಪಿತವಾಗಿದೆ, ಇದು ಮುಂಬರುವ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಹಾಗೂ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇವಿಎಂ ದೋಷ ಇವಿಎಂ ದೋಷ ಎಂದು ಸುಳ್ಳು ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದ ಕಾಂಗ್ರೆಸ್ ಈಗ ಬ್ಯಾಲೆಟ್ ಪೇಪರ್ ಅಡಿಯಲ್ಲಿ ನಡೆದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮುಗ್ಗರಿಸಿ ಸೋತು ಸುಣ್ಣವಾಗಿದೆ. ಜನರು ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಎಂದೋ ಖಂಡಿಸಿ ತಿರಸ್ಕರಿಸಿದ್ದಾರೆ, ಆದರೂ ಸೋಲನ್ನು ಒಪ್ಪಿಕೊಳ್ಳದೇ ಇವಿಎಂ ಎಂದು ಹೇಳಿಕೊಂಡು ಹೊರಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಮುಖಭಂಗವಾಗಿದೆ, ಕಾಂಗ್ರೆಸ್ ಪಕ್ಷದ ದುರಾಡಳಿತ, ಬರ ಪರಿಸ್ಥಿತಿಯಲ್ಲಿಯೂ ಸಹ ರೈತರ ಹಿತರಕ್ಷಣೆಗೆ ಬಾರದಿರುವುದು, ಅಭಿವೃದ್ಧಿ ಶೂನ್ಯ, ಯುವಜನತೆಗೆ ಉದ್ಯೋಗ ಸೃಷ್ಟಿ ಇಲ್ಲದೇ ಇರುವುದು, ಬೀದಿಗಿಳಿದು ಯುವಕರು ಹೋರಾಟ ನಡೆಸಿದರೂ ಸಹ ಅವರಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೇ ಇರುವುದು ಇವೆಲ್ಲವೂ ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಸಾಕ್ಷಿಯಾಗಿದ್ದವು, ಈಗ ಈ ಚುನಾವಣೆಯಲ್ಲಿ ತಕ್ಕ ಪಾಠ ಕಾಂಗ್ರೆಸ್ ಪಕ್ಷಕ್ಕೆ ಆಗಿದ್ದು, ಮುಂಬರುವ ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮಗ್ಗರಿಸಿ ಬೀಳುವುದು ಖಚಿತವಾಗಿದ್ದು, ವಿಧಾನಸಭೆ ಚುನಾವಣೆಗೂ ಸಹ ಈ ಪರಿಷತ್ ಚುನಾವಣೆಯ ಫಲಿತಾಂಶವೇ ದಿಕ್ಸೂಚಿ. ವಿಧಾನ ಪರಿಷತ್ ಪ್ರತಿಯೊಂದು ಫಲಿತಾಂಶದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಒಟ್ಟಾರೆ ಜನತೆ ಬಿಜೆಪಿ ಪರವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

