ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಮರೇಗುದ್ದಿ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಪೃಥ್ವಿರಾಜ್ ನಾಗಪ್ಪ ಚನಾಳ ಅವರು ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸರಪಳಿ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಪೃಥ್ವಿರಾಜ್ ಅವರ ಯಶಸ್ಸಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿಯ ಪರಿಶ್ರಮ, ಕ್ರೀಡೆಯ ಮೇಲಿನ ಆಸಕ್ತಿ ಹಾಗೂ ಸಾಧಿಸುವ ಛಲಕ್ಕೆ ಈ ಸಾಧನೆ ಸಾಕ್ಷಿಯಾಗಿದೆ.
ವಿದ್ಯಾರ್ಥಿಯ ಈ ಸಾಧನೆಯನ್ನು ಗುರುತಿಸಿ ಸಂಸ್ಥೆಯ ಅಧ್ಯಕ್ಷರು, ಶಾಲೆಯ ಮುಖ್ಯಗುರುಗಳಾದ ಸಂಜಯ ಚಲವಾದಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.

