ವಿಜಯಪುರದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಂದ ಜಾಗೃತಿ ಅಭಿಯಾನಕ್ಕೆ ಚಾಲನೆ | ವ್ಯಾಪಾರಸ್ಥರಿಂದ ಸಕಾರಾತ್ಮಕ ಸ್ಪಂದನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಹಾಗೂ ವಿವಿಧ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯ ಬಳಕೆಯ ಕುರಿತು ವ್ಯಾಪಾರಸ್ಥರಲ್ಲಿ ಅರಿವು ಮೂಡಿಸಲು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಚಾಲನೆ ನೀಡಿದರು.
ನಗರದ ಮಹಾತ್ಮ ಗಾಂಧಿ ವೃತ್ತದಿಂದ ಆರಂಭಗೊಂಡ ಅಭಿಯಾನವು ಲಿಂಗದಗುಡಿಯವರೆಗೆ ಸಾಗಿತು. ಮಾರ್ಗಮಧ್ಯದ ಅಂಗಡಿ-ಮುಂಗಟ್ಟುಗಳು, ಕೈಗಾರಿಕೆಗಳು, ಹೋಟೆಲ್‌ಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು, ಟ್ರಸ್ಟ್ಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ನಾಮಫಲಕಗಳ ಅಳವಡಿಕೆ ಕುರಿತು ತಿಳಿವಳಿಕೆ ನೀಡಲಾಯಿತು. ಅಭಿಯಾನಕ್ಕೆ ಅಂಗಡಿ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಸರ್ಕಾರದ ಆದೇಶದಂತೆ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.೬೦ರಷ್ಟು ಕನ್ನಡ ಭಾಷೆಯ ಬಳಕೆ ಕಡ್ಡಾಯವಾಗಿದ್ದು, ಉಳಿದ ಶೇ.೪೦ರಷ್ಟು ಭಾಗದಲ್ಲಿ ಇತರ ಭಾಷೆಗಳನ್ನು ಬಳಸಬಹುದಾಗಿದೆ. ನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ನಿಟ್ಟಿನಲ್ಲಿ ವ್ಯಾಪಾರಸ್ಥರು ಈ ನಿಯಮವನ್ನು ಪಾಲಿಸಬೇಕು. ದೈನಂದಿನ ವಹಿವಾಟಿನಲ್ಲಿಯೂ ಕನ್ನಡ ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ತಿಳಿಸಿದರು.
ಅಭಿಯಾನದ ವೇಳೆ ನಿಯಮಾನುಸಾರ ನಾಮಫಲಕ ಅಳವಡಿಸದ ಕೆಲವು ಅಂಗಡಿ ಮಾಲೀಕರಿಗೆ ತಿಳಿವಳಿಕೆ ನೀಡಿ, ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಲಾಯಿತು. ನಾಮಫಲಕಗಳಲ್ಲಿ ಶೇ. ೬೦ಕ್ಕಿಂತ ಹೆಚ್ಚು ಕನ್ನಡ ಬಳಸಿರುವ ಮಾಲೀಕರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಫಯಾಜ ಕಲಾದಗಿ, ಸೋಮನಗೌಡ ಕಲ್ಲೂರ, ದಯಾನಂದ ಸಾವಳಗಿ, ಮನೋಹರ ತಾಜವ, ಮಹಾದೇವ ರಾವಜಿ, ಸುರೇಶ ಬಿಜಾಪುರ, ಕಸ್ತೂರಿ ನಾಗರದಿನ್ನಿ, ಜಯಶ್ರೀ ಕನಶೆಟ್ಟಿ, ಅನುರಾಧ ಕಲಾಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

