ಭತಗುಣಕಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ | 100ಕ್ಕೂ ಹೆಚ್ಚು ಫಲಾನುಭವಿಗಳಿಗೆ ಪಿಂಚಣಿ ಆದೇಶ ವಿತರಣೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು. ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅವರ ಮನೆ ಬಾಗಿಲಿಗೆ ಸೇವೆ ಒದಗಿಸುವ ಉದ್ದೇಶದಿಂದ ಪ್ರಜಾಸೇವೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸಮೀಪದ ಭತಗುಣಕಿ ಗ್ರಾಮದ ಜೈ ಅಂಬಾ ಭವಾನಿ ದೇವಸ್ಥಾನದ ಆವರಣದಲ್ಲಿ ತಾಲೂಕು ಆಡಳಿತ, ಇಂಡಿ ವತಿಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ‘ಪ್ರಜಾಸೇವೆ ಆಂದೋಲನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಜನಪರ ಯೋಜನೆಗಳ ಪ್ರಯೋಜನ ಅರ್ಹರಿಗೆ ತಲುಪಬೇಕು. ಸಾರ್ವಜನಿಕರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಬಾಕಿ ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶಗಳನ್ನು ವಿತರಿಸಲಾಯಿತು. ಸಾರ್ವಜನಿಕರಿಂದ ವಿವಿಧ ಅಹವಾಲುಗಳನ್ನು ಸ್ವೀಕರಿಸಿ, ಅವುಗಳ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ನಾಗೇಂದ್ರ ಕೊಳಶೆಟ್ಟಿ, ಭೀಮಣ್ಣ ಕೌಲಗಿ, ಪ್ರಶಾಂತ ಕಾಳೆ, ಕೃಷಿ ಅಧಿಕಾರಿ ಮಹಾದೇವ ಏವೂರ, ಶಿವಯೋಗಪ್ಪ ಚನ್ನಗುಂಡ, ಬಿ.ಸಿ. ಸಾಹುಕಾರ, ಎಸ್ಒಎಲ್ ಇಂಡಿ, ಶಾಹಾಜಿ ಮಿಸಾಳೆ, ಶಿವಪುತ್ರ ಜೇವರಗಿ, ಸದಾಶಿವ ಪ್ಯಾಟಿ, ರಾಜುಗೌಡ ಪಾಟೀಲ, ರುಕ್ಮುದ್ದೀನ್ ತದ್ದೇವಾಡಿ, ಶಾಹು ಸಿಂದೆ ಹಾಗೂ ಝಳಕಿ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ತೀರಕನ್ನವರ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಗಾಲದಲ್ಲಿ ನೀರಿನ ಮಿತ ಬಳಕೆ ಅಗತ್ಯ
ಪ್ರಸ್ತುತ ವರ್ಷ ತೀವ್ರ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಪ್ರತಿಯೊಬ್ಬರೂ ಕುಡಿಯುವ ನೀರನ್ನು ಅಮೂಲ್ಯ ಸಂಪತ್ತಿನಂತೆ ಮಿತವಾಗಿ ಬಳಸಬೇಕು. ಪ್ರತಿ ಗ್ರಾಮದಲ್ಲಿಯೂ ಕೆರೆ ನಿರ್ಮಿಸುವ ಯೋಜನೆಗೆ ನಮ್ಮ ಸರ್ಕಾರ ಮುಂದಾಗಿದೆ. ಈ ಯೋಜನೆಯಿಂದ ಅಂತರ್ಜಲ ವೃದ್ಧಿ ಹಾಗೂ ರೈತರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಬರಗಾಲದ ಹಿನ್ನೆಲೆಯಲ್ಲಿ ರೈತರು ಜಾಗೃತಿಯಿಂದ ಇರಬೇಕು ಮತ್ತು ಲಭ್ಯವಿರುವ ನೀರನ್ನು ಮಿತವಾಗಿ ಬಳಸಬೇಕು ಎಂದು ಶಾಸಕ ಪಾಟೀಲ ಸಲಹೆ ನೀಡಿದರು.

