ಚಡಚಣದಲ್ಲಿ ಗಾಣಸಿರಿ ವೃತ್ತ ಉದ್ಘಾಟನೆ | ಸಿದ್ದೇಶ್ವರ ಶ್ರೀಗಳ ಜನ್ಮದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಮ್ಮ ಪ್ರವಚನಗಳ ಮೂಲಕ ಜನಮಾನಸದಲ್ಲಿ ಜ್ಞಾನದ ಬೀಜ ಬಿತ್ತಿದ ಸಿದ್ದೇಶ್ವರ ಸ್ವಾಮೀಜಿಗಳು ಮಹಾನ್ ದಾರ್ಶನಿಕರು. ತಮ್ಮ ಸರಳ ಜೀವನ, ನಡೆ-ನುಡಿ ಹಾಗೂ ತತ್ವಬೋಧನೆಗಳ ಮೂಲಕ ಸಮಾಜಕ್ಕೆ ಬದುಕಿನ ಮೌಲ್ಯಗಳನ್ನು ಕಲಿಸಿಕೊಟ್ಟ ಅವರು, ತಮ್ಮ ಜೀವನದ ಆದರ್ಶಗಳ ಮೂಲಕ ಇತರರ ಬದುಕಿಗೆ ದಾರಿದೀಪವಾದ ಮಹಾನ್ ಸತ್ಪುರುಷರು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಎದುರು ನೂತನವಾಗಿ ನಿರ್ಮಿಸಲಾದ ಗಾಣಸಿರಿ ವೃತ್ತವನ್ನು ಶನಿವಾರ ಉದ್ಘಾಟಿಸಿ, ಸಿದ್ದೇಶ್ವರ ಸ್ವಾಮೀಜಿಗಳ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ದೇಶ್ವರ ಶ್ರೀಗಳು ವಿಜಯಪುರ ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಜನಪ್ರತಿನಿಧಿಗಳಿಗೆ ಸದಾ ನೆನಪಿಸುತ್ತಿದ್ದರು. ಅವರ ಆಶಯದಂತೆ ಸಚಿವ ಎಂ.ಬಿ. ಪಾಟೀಲರು ಸಮಗ್ರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ, ಸಾವಿರಾರು ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಹೇಳಿದರು.
ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಗಳು ಸರಳ ವ್ಯಕ್ತಿತ್ವದೊಂದಿಗೆ ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಗಳ ಮೂಲಕ ಜನರ ಬದುಕನ್ನು ಉನ್ನತೀಕರಿಸಿದ ಮಹಾನ್ ಸಂತರು ಎಂದರು.
ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಜೀವನದ ಸಾರವನ್ನು ಅತ್ಯಂತ ಸರಳವಾಗಿ ಬೋಧಿಸಿ, ಜನಸಾಮಾನ್ಯರಿಗೆ ಜ್ಞಾನದ ಬೆಳಕು ನೀಡಿದ ಸಿದ್ದೇಶ್ವರ ಶ್ರೀಗಳ ಚಿಂತನೆಗಳನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನಕನಾಳ ಶಾಖಾ ಮಠದ ಗಿರಿಜಾನಂದ ಸ್ವಾಮೀಜಿ, ಚಿಕ್ಕಲಗುಂಟಿಯ ಶರಣಾನಂದ ಸ್ವಾಮೀಜಿ ಹಾಗೂ ಕನ್ನೇರಿಯ ಚಿದಾನಂದ ದೇವರು ಆಶೀರ್ವಚನ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಉಪಾಧ್ಯಕ್ಷ ಇಲಾಯಿ ನದಾಫ್, ಚಡಚಣ ಮಂಡಲ ಬಿಜೆಪಿ ಅಧ್ಯಕ್ಷ ಕಾಂತುಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭೀಮಾಶಂಕರ ಬಿರಾದಾರ, ಮುಖಂಡರಾದ ಸಂಜೀವ ಐಹೊಳ್ಳಿ, ಅಭಿನವ ಚವ್ಹಾಣ, ಬಾಬುಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಬಸುಗೌಡ ಬಿರಾದಾರ, ಶ್ರೀಶೈಲ ಅಂಜುಟಗಿ, ರವಿ ಉಮರಾಣಿ, ಶಿವಾನಂದ ಪಾಂಡ್ರೆ, ಶ್ರೀಮಂತ ಉಮರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗಾಣಿಗ ಸಮಾಜದ ತಾಲೂಕು ಅಧ್ಯಕ್ಷ ರಾಜುಸಾಹುಕಾರ ಬಗಲಿ, ಕಾರ್ಯಾಧ್ಯಕ್ಷ ರಮೇಶ ಜಿತ್ತಿ, ಕಾರ್ಯದರ್ಶಿ ಸಿದ್ದು ತೇಲಿ, ಖಜಾಂಚಿ ಗುರುರಾಜ ಸಜ್ಜನ ಹಾಗೂ ಯುವ ಮೋರ್ಚಾ ಅಧ್ಯಕ್ಷ ನಂದು ಗಡಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.
ಶಿಕ್ಷಕ ರಮೇಶ ಮಲ್ಲಾಡಿ ಕಾರ್ಯಕ್ರಮ ನಿರೂಪಿಸಿದರು.

